ತುಮಕೂರು: ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ “೫ನೇ ಮಿನಿ ಕರ್ನಾಟಕ ಕ್ರೀಡಾಕೂಟ”ದಲ್ಲಿ ತುಮಕೂರು ಜಿಲ್ಲೆಗೆ ಬೆಳ್ಳಿ ಪದಕದ ಗರಿ ಮೂಡಿದೆ.
ತುಮಕೂರು ನಗರ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಅಕಾಡೆಮಿ ವತಿಯಿಂದ ತರಬೇತಿ ಪಡೆದ ತುಮಕೂರಿನ ಕಯಾಕಿಂಗ್ ತಂಡವು ೫೦೦ ಮೀ. ಡ್ರ್ಯಾಗನ್ ಬೋಟ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ.
ಕಡಿಮೆ ಕಾಲಾವಧಿಯಲ್ಲಿ ತರಬೇತಿ ಪಡೆದು, ಪ್ರಥಮ ಬಾರಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಈ ಸಾಧನೆ ಮಾಡಿರುವುದು ತುಮಕೂರು ಜಿಲ್ಲೆಗೆ ಅತ್ಯಂತ ಹೆಮ್ಮೆಯ ವಿಷಯ. ಸ್ಪರ್ಧೆಯಲ್ಲಿ ಕ್ರೀಡಾಪಟುಗಳು ಉತ್ತಮ ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ತಂಡದ ಸಮನ್ವಯದೊಂದಿಗೆ ಸ್ಪರ್ಧಿಸಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ತುಮಕೂರು ತಂಡದ ಈ ಸಾಧನೆಗೆ ಜಿಲ್ಲಾಡಳಿತ ಹಾಗೂ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿ, ಪದಕ ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಕ್ರೀಡಾಪಟುಗಳು ಇನ್ನಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.
(Visited 1 times, 1 visits today)



