ಹುಳಿಯಾರು: “ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ರಾಜ್ಯದ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಮೀಸಲಾತಿ ನಿಗದಿಪಡಿಸಬೇಕು” ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಒತ್ತಾಯಿಸಿದರು.
ಹುಳಿಯಾರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಹೋಬಳಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ೭೧ ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
“ಬೆಂಗಳೂರು ಹಾಗೂ ತುಮಕೂರು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಕಂಪನಿಗಳು ಸರ್ಕಾರದಿಂದ ಉಚಿತ ಜಮೀನು, ಸಬ್ಸಿಡಿ ದರದಲ್ಲಿ ವಿದ್ಯುತ್ ಮತ್ತು ನೀರಿನ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ಆದರೆ, ಈ ಎಲ್ಲಾ ಸವಲತ್ತುಗಳನ್ನು ಬಳಸಿಕೊಂಡು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಮಾಡುತ್ತಿವೆ,” ಎಂದು ಆರೋಪಿಸಿದರು.
“ಹೊರರಾಜ್ಯದ ಉದ್ಯೋಗಿಗಳ ಹಾವಳಿಯಿಂದ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ದುಃಖಕರ ಸಂಗತಿ. ಇದಕ್ಕೆ ಕಡಿವಾಣ ಹಾಕಲು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಡಿಸೆಂಬರ್ ೧೨ ರ ಮಧ್ಯರಾತ್ರಿಯಿಂದ ಐಟಿ ಕಂಪನಿಗಳ ವಿರುದ್ಧ ಹಮ್ಮಿಕೊಂಡಿರುವ ಬೃಹತ್ ಹೋರಾಟಕ್ಕೆ ನಾವೆಲ್ಲರೂ ಸಂಪೂರ್ಣ ಬೆಂಬಲ ನೀಡಬೇಕಾಗಿದೆ,” ಎಂದು ಅವರು ಕರೆ ನೀಡಿದರು.
“ಹುಳಿಯಾರು ಪಟ್ಟಣ ಇಂದು ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ನಿಸ್ವಾರ್ಥ ಸೇವೆಯೇ ಕಾರಣ. ಚಳಿ, ಮಳೆ ಎನ್ನದೆ ಪ್ರತಿದಿನ ಬೆಳಿಗ್ಗೆ ೫ ಗಂಟೆಗೆ ರಸ್ತೆಗಿಳಿದು ಪಟ್ಟಣವನ್ನು ಸ್ವಚ್ಛಗೊಳಿಸುತ್ತಾರೆ. ಒಂದು ವಾರ ಅವರು ರಜೆ ಹಾಕಿದರೆ ಪಟ್ಟಣ ಮಾಲಿನ್ಯ ನಗರವಾಗುತ್ತದೆ. ಇಂತಹವರನ್ನು ಗುರುತಿಸಿ ಗೌರವಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಕಾರ್ಯ,” ಎಂದು ಶ್ಲಾಘಿಸಿದರು.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಎಸ್.ಆರ್.ಎಸ್. ದಯಾನಂದ್ ಮಾತನಾಡಿ “ಕನ್ನಡಿಗರು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗುವ ‘ನವೆಂಬರ್ ಕನ್ನಡಿಗರಾಗದೆ’, ವರ್ಷಪೂರ್ತಿ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುವ ಕಾಯಕದಲ್ಲಿ ತೊಡಗಬೇಕು. ಹೊರರಾಜ್ಯಗಳಿಂದ ಇಟ್ಟಿಗೆ ಫ್ಯಾಕ್ಟರಿ ಸೇರಿದಂತೆ ವಿವಿಧ ಕೆಲಸಗಳಿಗೆ ಬರುವ ಕಾರ್ಮಿಕರಿಗೆ ನಾವೇ ಕನ್ನಡ ಕಲಿಸಿ ಭಾಷಾ ಪ್ರೇಮ ಮೆರೆಯಬೇಕು,” ಅಲ್ಲದೆ, ೨೦ ದಿನಗಳ ಅಲ್ಪಾವಧಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ ನೂತನ ಕರವೇ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಹುಳಿಯಾರು ಹೋಬಳಿ ಘಟಕದ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ೧೯೪೭ ರ ನಂತರ ನಡೆದ ಕರ್ನಾಟಕ ಏಕೀಕರಣ ಹೋರಾಟ ಹಾಗೂ ೧೯೭೩ ರಲ್ಲಿ ದಿವಂಗತ ಡಿ. ದೇವರಾಜ ಅರಸು ಅವರು `ಕರ್ನಾಟಕ’ ಎಂದು ಮರುನಾಮಕರಣ ಮಾಡಿದ ಇತಿಹಾಸವನ್ನು ಸ್ಮರಿಸಿದರು. ಇಂದಿನ ಜಾಗತೀಕರಣದ ಯುಗದಲ್ಲಿ ಅನ್ಯ ಭಾಷೆಗಳನ್ನು ಕಲಿತರೂ, ಮೊದಲ ಆದ್ಯತೆ ಸದಾ ಕನ್ನಡಕ್ಕೇ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರವೇ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ಉಪಾಧ್ಯಕ್ಷ ಮೆಡಿಕಲ್ ಚನ್ನಬಸವಯ್ಯ, ತಾಲೂಕು ಘಟಕದ ಅಧ್ಯಕ್ಷ ಹೇಮಂತ್, ಹುಳಿಯಾರು ಘಟಕದ ಅಧ್ಯಕ್ಷ ಹರೀಶ್‌ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ, ಕಸಪಾ ಕಾರ್ಯದರ್ಶಿ ಜಯಣ್ಣ, ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಯೋಗೀಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ವಿಶ್ವಣ್ಣ, ಶಿಕ್ಷಕ ಜಯಣ್ಣ, ಹಿರಿಯರಾದ ರಾಮಣ್ಣ, ಸಿನಿಮಾ ನಿರ್ದೇಶಕ ಹೊನ್ನರಾಜ್ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

(Visited 1 times, 1 visits today)