ತುಮಕೂರು: ಸಮಾಜಮುಖಿ ಪ್ರಕಾಶನವು ೨೦೨೬ನೇ ಸಾಲಿನ ಸಮಾಜಮುಖಿ ಸಾಹಿತ್ಯ ಸಮ್ಮೇಳನವನ್ನು ಈ ತಿಂಗಳ ೨೮ ಮತ್ತು ೨೯ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಆವರಣದಲ್ಲಿ ಆಯೋಜಿಸಿದೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಬಾ.ಹ. ರಮಾಕುಮಾರಿ, ಎರಡು ದಿನಗಳ ಸಮ್ಮೇಳನದಲ್ಲಿ ನಾಲ್ಕು ವೇದಿಕೆಗಳಲ್ಲಿ ೪೨ ಗೋಷ್ಠಿಗಳು ನಡೆಯಲಿದ್ದು ಕನ್ನಡ ಸಾಹಿತ್ಯ, ಭಾಷೆ ಮತ್ತು ಸಮಾಜವನ್ನು ಹಲವು ಆಯಾಮಗಳಿಂದ ಶೋಧಿಸಲಿವೆ ಎಂದು ತಿಳಿಸಿದರು.
ವಿವಿಧ ಗೋಷ್ಠಿಗಳಲ್ಲಿ ಹೆಚ್.ಎಸ್.ಶಿವಪ್ರಕಾಶ್, ಓ.ಎಲ್.ನಾಗಭೂಷಣ ಸ್ವಾಮಿ, ಬಿ.ಜಯಶ್ರೀ, ಸುದೇಶ್ ಮಹಾನ್, ಶಶಿಧರ ಅಡಪ, ಅರವಿಂದ ಚೊಕ್ಕಾಡಿ, ಸುರೇಶ ಅನಗಳ್ಳಿ, ಬಿ.ಸುರೇಶ್, ಜಿ.ಎನ್.ದೇವಿ, ಎಸ್.ಎನ್. ಶ್ರೀಧರ್, ಎಸ್.ಜಿ.ಸಿದ್ದರಾಮಯ್ಯ, ಜಯಪ್ರಕಾಶಗೌಡ, ಕೃಪಾಕರ ಸೇನಾನಿ, ನಟರಾಜ ಹುಳಿಯಾರ್, ರಾಜೇಂದ್ರ ಚೆನ್ನಿ, ಚ.ಹ.ರಘುನಾಥ್, ಎಂ.ಎಸ್.ಆಶಾದೇವಿ, ಎಸ್.ನಟರಾಜ ಬೂದಾಳ್, ಎಸ್.ಆರ್. ವಿಜಯಶಂಕರ್, ವಸುಂಧರ ಭೂಪತಿ, ವೈಜಯಂತಿಕಾಶಿ, ಹಿ.ಶಿ.ರಾಮಚಂದ್ರೇಗೌಡ, ಬಾ.ಹ. ರಮಾಕುಮಾರಿ, ತಮಿಳು ಸೆಲ್ವಿ, ಬೈರಮಂಗಲ ರಾಮೇಗೌಡ, ಎನ್.ಆರ್.ಲಲಿತಾಂಬ, ಮೇಟಿ ಮಲ್ಲಿಕಾರ್ಜುನ, ಆರ್.ಪೂರ್ಣಿಮಾ, ಕೆಮಲಾಕರ ಭಟ್ಟ ಮುಂತಾದವರು ಭಾಗವಹಿಸಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಲೇಖಕಿ, ಇಂಗ್ಲೀಷ್ ಉಪನ್ಯಾಸಕಿ ಡಾ.ಜ್ಯೋತಿ ಮಾತನಾಡಿ, ಕನ್ನಡಕ್ಕಾಗಿ ಒಂದು ಸಾಹಿತ್ಯ ಸಮ್ಮೇಳನ ಮಟ್ಟದ ಚರ್ಚೆ ಆಗಬೇಕು, ಎಲ್ಲರನ್ನು ಒಳಗೊಳ್ಳುವಂತೆ ಆಗಬೇಕು ಎನ್ನುವ ಉದ್ದೇಶದಿಂದ ಸಮಾಜಮುಖಿ ಪ್ರಕಾಶನ ಕಳೆದ ವರ್ಷ ಈ ಸಮ್ಮೇಳನವನ್ನು ಆರಂಭಿಸಿತು. ಕಳೆದ ವರ್ಷ ನವೆಂಬರ್‌ನಲ್ಲಿ ಆಯೋಜನೆ ಮಾಡಿದ್ದ ಸಮ್ಮೇಳನಕ್ಕೆ ನಿರೀಕ್ಷೆಗೆ ಮೀರಿ ಒಳ್ಳೆಯ ಜನ ಬೆಂಬಲ, ಕನ್ನಡಿಗರ ಬೆಂಬಲ ಸಿಕ್ಕಿತು ಎಂದರು.
ಲೇಖಕ ಲಕ್ಷಿö್ಮÃಕಾಂತರಾಜೇ ಅರಸು ಮಾತನಾಡಿ, ಸೃಜನಶೀಲ ವೇದಿಕೆಯಲ್ಲಿ ಜಾಗತಿಕ ವಿದ್ಯಮಾನಗಳಿಗೆ ಕನ್ನಡ ಕಾವ್ಯದ ಸ್ಪಂದನೆ, ಕಥೆಗಳಲ್ಲಿ ಕಲ್ಯಾಣ ಕರ್ನಾಟಕ, ಮಹಿಳಾ ಆತ್ಮಕಥೆಗಳು, ವಚನಕಾರ್ತಿಯರು ದಾಖಲಿಸಿದ ಅಸಮಾನತೆ, ನೆಲಮೂಲದ ಸಾಹಿತ್ಯ ರೂಪಕಗಳು, ಕನ್ನಡ ವಿಮರ್ಶೆಯ ಸಾಮಾಜಿಕ ಹಿನ್ನೆಲೆಗಳು, ಸಾಹಿತ್ಯ ಚರಿತ್ರೆಯ ಪುನರಾವಲೋಕನ, ಕರುನಾಡಿನ ಕುರಿತ ಗೋಷ್ಠಿಗಳು ನಡೆಯಲಿವೆ ಎಂದು ಹೇಳಿದರು.
ತುಮಕೂರು ವಿವಿ ಕಲಾ ಕಾಲೇಜು ಪ್ರಾಚಾರ್ಯ ಪ್ರೊ.ಕರಿಯಣ್ಣ ಮಾತನಾಡಿ, ಸಮ್ಮೇಳನದ ಬಹುವಚನ ವೇದಿಕೆ, ಸಂಸ್ಕೃತಿ ಸಂವಾದ ವೇದಿಕೆ, ಸೃಜನಶೀಲ ವೇದಿಕೆ, ಶಾಸ್ತ್ರೀಯ ವೇದಿಕೆ ಎಂಬ ನಾಲ್ಕು ವೇದಿಕೆಗಳನ್ನು ರೂಪಿಸಲಾಗಿದೆ. ಬಹುವಚನ ವೇದಿಕೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಗತಿ, ಕನ್ನಡಪರ ಹೋರಾಟದ ಇಂದಿನ ಸ್ಥಿತಿ, ಕನ್ನಡದಲ್ಲಿ ಸಂಶೋಧನೆಯ ದಾರಿಗಳು, ಜೈನ್‌ಯುಗ ತಲೆಮಾರಿನ ತಲ್ಲಣಗಳು ಮತ್ತು ಭರವಸೆಗಳು, ಕೃತಕ ಬುದ್ಧಿಮತ್ತೆಯ ಸೃಜನಶೀಲ ಸಾಧ್ಯತೆಗಳು, ಭಕ್ತಿ ಮತ್ತು ಅನುಭಾವ, ಭಾಗವತೋದನ ಬದುಕು ಹಾಗೂ ಅಭಿಘಾತ ಪಠ್ಯಗಳ ಕುರಿತ ಇಂಗ್ಲಿಷ್ ಸಂವಾದಗಳು ನಡೆಯಲಿವೆ ಎಂದು ತಿಳಿಸಿದರು.

(Visited 1 times, 1 visits today)