ನವದೆಹಲಿ: 

      ಪಾಕಿಸ್ತಾನ ಸೈನಿಕರ ಮತ್ತು ಅಲ್ಲಿನ ಉಗ್ರರ ಸ್ನೈಪರ್ ರೈಫಲ್ ಗಳಿಗೆ ಬಲಿಯಾಗುತ್ತಿದ್ದ ಭಾರತೀಯ ಸೈನಿಕರ ಬಹು ದಿನಗಳ ಆಸೆ ಕೊನೆಗೂ ಈಡೇರಿದ್ದು, ಇದೀಗ ಭಾರತೀಯ ಸೈನಿಕರ ಕೈಗೂ ಅತ್ಯಾಧುನಿಕ ಡೆಡ್ಲಿ ಸ್ನೈಪರ್ ರೈಫಲ್ ಗಳು ಬಂದಿವೆ.

      ಡೆಡ್ಲಿ ಸ್ನೈಪರ್ ರೈಫಲ್ಸ್ ಎಂದೇ ಕರೆಯಲಾಗುವ ಅತ್ಯಾಧುನಿಕ ಬೆರೆಟ್ಟಾ ಸಂಸ್ಥೆಯ 0.338 ಲಪುವಾ ಮ್ಯಾಗ್ನಮ್ ಸ್ಲಾರ್ಪಿಯೋ ಟಿಜಿಟಿ ಸೂಪರ್ ಸ್ನೈಪರ್ ರೈಫಲ್ ಹಾಗೂ ಬರೆಟ್ಟ್ ಸಂಸ್ಥೆಯ 0.50 ಕ್ಯಾಲಿಬರ್ ಎ095 ಸ್ನೈಪರ್ ರೈಫಲ್‍ಗಳನ್ನ ಖರೀದಿ ಮಾಡಲಾಗಿದೆ. ಒಂದು ವರ್ಷದ ಹಿಂದೆಯೇ ಸರ್ಕಾರ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.

       ಪಾಕ್‌ ಮೂಲದ ನುಸುಳುಕೋರ ಉಗ್ರರನ್ನು ಮತ್ತು ಅಪ್ರಚೋದಿತ ದಾಳಿ ಮಾಡುವ ಪಾಕ್ ಸೈನಿಕರ ಮಟ್ಟಹಾಕಲು ಅನುಕೂಲವಾಗುವಂತೆ ಅತ್ಯಾಧುನಿಕ ಸ್ನೈಪರ್‌ ರೈಫ‌ಲ್ ಗ‌ಳ ಬಳಕೆಯನ್ನು ಭಾರತೀಯ ಸೇನೆ ಆರಂಭಿಸಿದೆ.  

      ಮೂಲಗಳ ಪ್ರಕಾರ ಈ ಎರಡೂ ಮಾದರಿ ಒಟ್ಟು 5,719 ಸೂಪರ್ ಸ್ಪೈಪರ್ ರೈಫಲ್ ಗಳನ್ನು ಭಾರತ ಖರೀದಿ ಮಾಡಿದ್ದು, ಈಗಾಗಲೇ ಪಾಕಿಸ್ತಾನ ಮತ್ತು ಭಾರತ ಗಡಿ ಪ್ರದೇಶವಾಗಿರುವ ಎಲ್ ಒಸಿ (ಗಡಿ ನಿಯಂತ್ರಣ ರೇಖೆ)ಯಲ್ಲಿರುವ ಸೈನಿಕರಿಗೆ ನೀಡಲಾಗಿದೆ ಎಂದು ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಲೆಫ್ಟಿನೆಂಟ್‌ ಜನರಲ್ ರಣಬೀರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.
      

 

 

(Visited 67 times, 1 visits today)