ಆರ್. ರೂಪಕಲಾ

ವಾರ್ತಾ ಇಲಾಖೆ, ತುಮಕೂರು

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಮಹಿಳಾ ಪ್ರಯಾಣಿಕರಿಗಾಗಿ ಜೂನ್ ೧೧ ರಿಂದ ಜಾರಿಗೆ ತಂದಿರುವ ಮಹತ್ವಪೂರ್ಣ ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗವು ೨೪.೪೨ ಕೋಟಿ ರೂ. ಆದಾಯವನ್ನು ಗಳಿಸಿದೆ.
೨ ತಿಂಗಳಲ್ಲಿ ೨೪ ಕೋಟಿ ರೂ. ಆದಾಯ
ಯೋಜನೆ ಜಾರಿಗೊಂಡ ದಿನದಿಂದ ಜೂನ್ ಮಾಹೆಯಲ್ಲಿ ನಿರ್ವಾಹಕರು ವಿತರಿಸಿರುವ ಶೂನ್ಯ(೦) ಟಿಕೇಟ್‌ಗಳಿಂದ ತುಮಕೂರು ವಿಭಾಗದ ವಾಹನಗಳಲ್ಲಿ ೨೯.೭೩ ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಸುಮಾರು ೮,೩೨,೯೯,೪೬೪ ರೂ.ಗಳಷ್ಟು ಸಾರಿಗೆ ಆದಾಯ ಹಾಗೂ ಜುಲೈ ಮಾಹೆಯಲ್ಲಿ ೫೭.೯೭ ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಸುಮಾರು ೧೬,೦೯,೫೯,೪೬೦ ರೂ.ಗಳಷ್ಟು ಸಾರಿಗೆ ಆದಾಯ ಬಂದಿದೆ.
ಒಟ್ಟಾರೆ ಜೂನ್ ಮತ್ತು ಜುಲೈ ಮಾಹೆಯಲ್ಲಿ ೮೭.೭೧ ಲಕ್ಷ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸಿ ನಿಗಮಕ್ಕೆ ೨೪,೪೨,೫೮,೯೨೪ ರೂ.ಗಳಷ್ಟು ಆದಾಯ ತಂದುಕೊಟ್ಟಿದ್ದಾರೆ. ಯೋಜನೆ ಜಾರಿಗೆ ಬರುವ ಮುನ್ನ ಪ್ರತಿ ಮಾಹೆ ನಿಗಮಕ್ಕೆ ಪ್ರತೀ ದಿನದ ಆದಾಯ ಸರಾಸರಿ ೭೨.೪೫ ಲಕ್ಷ ರೂ.ಗಳಷ್ಟಿತ್ತು.
ಬಡ, ಮಧ್ಯಮ ವರ್ಗದ ಮಹಿಳೆಯರಿಗೆ ವರದಾನ
ಯೋಜನೆ ಜಾರಿಯಾದ ನಂತರ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮಾಸಿಕ ಪಾಸ್ ಪಡೆದು ಪ್ರತೀ ದಿನ ಸಾರಿಗೆ ಬಸ್ಸುಗಳಲ್ಲಿ ಸಂಚರಿಸುತ್ತಿದ್ದ ಉದ್ಯೋಗಸ್ಥ ಮಹಿಳೆಯರಿಗೆ ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು, ಕೂಲಿ ಕಾರ್ಮಿಕ ಮಹಿಳೆಯರು, ನಿರುದ್ಯೋಗಿ ಮಹಿಳೆಯರು ಹಾಗೂ ಗಾರ್ಮೆಂಟ್ಸ್ ನೌಕರಸ್ಥ ಮಹಿಳೆಯರಿಗೆ ಶಕ್ತಿ ಯೋಜನೆಯು ವರದಾನವಾಗಿದೆ.
ಪಾಸುಗಳ ವಿತರಣೆ ಇಳಿಕೆ
ಪ್ರತೀ ದಿನ ಸಂಚರಿಸುವ ಮಹಿಳಾ ಪ್ರಯಾಣಿಕರು, ವಿದ್ಯಾರ್ಥಿನಿಯರು ದೈನಂದಿನ ಪಾಸು ಹಾಗೂ ಮಾಸಿಕ ಪಾಸುಗಳನ್ನು ಪಡೆಯದೇ ಇರುವುದರಿಂದ ಪಾಸುಗಳ ವಿತರಣೆಯ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ೨೦೨೨ರ ಜೂನ್ ಮಾಹೆಗೆ ಹೋಲಿಕೆ ಮಾಡಿದಾಗ ಸುಮಾರು ೨೧೬೧ ಮಾಸಿಕ ಹಾಗೂ ೨೦೩೩ ದೈನಂದಿನ ಪಾಸುಗಳ ಮಾರಾಟ ಕಡಿಮೆಯಾಗಿದೆ.
ಪುಣ್ಯಕ್ಷೇತ್ರಗಳಿಗೆ ಮಹಿಳೆಯರ ಪ್ರಯಾಣ ಏರಿಕೆ
ಶಕ್ತಿ ಯೋಜನೆಯಿಂದ ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಪುಣ್ಯಕ್ಷೇತ್ರಗಳಿಗೆ ಮಹಿಳೆಯರ ಪ್ರಯಾಣ ಸಂಖ್ಯೆ ಏರಿಕೆ ಕಂಡಿದ್ದು, ಈವರೆಗೂ ೧೮ ಲಕ್ಷ ಮಹಿಳೆಯರು ಪುಣ್ಯಕ್ಷೇತ್ರ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಪುಣ್ಯಕ್ಷೇತ್ರವಲ್ಲದೆ ಪ್ರೇಕ್ಷಣೀಯ ಸ್ಥಳಗಳಿಗೂ ಮಹಿಳೆಯರು ತಮ್ಮ ಕುಟುಂಬದೊAದಿಗೆ ಭೇಟಿ ನೀಡುತ್ತಿರುವುದರಿಂದ ನಿಗಮದ ಆದಾಯ ದುಪ್ಪಟ್ಟಾಗುತ್ತಿದೆ.

(Visited 1 times, 1 visits today)