ತುಮಕೂರು:

      ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಜಿಲ್ಲೆಗೆ ಸೀಮಿತಗೊಳಿಸದೇ, ದೇಶದಲ್ಲಿ ಬಿಜೆಪಿ ವಿರುದ್ಧ ದೊಡ್ಡ ಶಕ್ತಿಯ ನ್ನಾಗಿ ಅವರನ್ನು ಕಾಣಬೇಕಿದ್ದು, ದೇವೇಗೌಡ ಅವರನ್ನು ಗೆಲ್ಲಿಸಬೇಕಾದ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ ಕಾರ್ಯ ಕರ್ತರು ಹೋರಾಟಕ್ಕೆ ಸಿದ್ಧರಾಗಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

      ನಗರದ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಮೈತ್ರಿ ಸರ್ಕಾರ ರಚನೆಯಾದಾಗಲೇ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಸಿದ್ಧರಾಗಿ ದ್ದೆವೆ. ದೇಶದಲ್ಲಿ ಶಾಂತಿ ನೆಲೆಸಲು, ಸಂವಿಧಾನವನ್ನು ಉಳಿಸಲು ಮಹಾಘಟಿಬಂಧನ್ ಮೂಲಕ ಒಂದಾಗಿದ್ದೇವೆ. ಸಂವಿಧಾನ ಬದಲಿಸಬೇಕು ಎನ್ನುವವರನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ ಎಂದರು.

      ತುಮಕೂರು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಮೈತ್ರಿ ಸರ್ಕಾರ ಭದ್ರವಾಗಿದೆ. ಬದ್ಧವಾಗಿದೆ. ಸರ್ಕಾರ ಬೀಳುತ್ತದೆ ಎನ್ನುವುದು ಅವರ ಭ್ರಮೆ ಅಷ್ಟೇ, ಜಿಲ್ಲೆಗೆ ಅಗತ್ಯವಿರುವ ನೀರಾವರಿ ಯೋಜನೆಯನ್ನು ಮೈತ್ರಿ ಸರ್ಕಾರ ಮಾಡಲಿದೆ. ಈಗಾಗಲೇ 0-72 ರವರೆಗೆ ಕೆನಾಲ್ ಅಗಲೀಕರಣ ಮಾಡಲಾಗಿದ್ದು, ಈಗ 72-150ವರೆಗೆ ಕೆನಾಲ್ ಅಗಲೀಕರಣ ಹಣ ಮೀಸಲಿಡಲಾಗಿದೆ, ಬಿಜೆಪಿ ಯವರು ನೀರಾವರಿ ಅನ್ನು ಬಿಟ್ಟು ದೇಶದ ಬಗ್ಗೆ ಮಾತನಾಡಿ ಎಂದು ಕುಟುಕಿದರು.
ಬಿಜೆಪಿ ಅಭ್ಯರ್ಥಿ ಬಸವರಾಜುಗೆ ತುಮಕೂರು ಬಿಟ್ಟು ಬೇರೆ ಏನು ಗೊತ್ತಿಲ್ಲ, ನಾಲ್ಕು ಬಾರಿ ಸಂಸದರಾದರೂ ತುಮಕೂರಿಗೆ ಏನು ಮಾಡಲಿಲ್ಲ, ನಮ್ಮ ಪಕ್ಷದಲ್ಲಿದ್ದಾಗ ಅವರನ್ನು ಗೆಲ್ಲಿಸಲು ನಾವೆಲ್ಲ ಹೋರಾಡಿದ್ದೇವೆ, ಮತ ಕೇಳಿದ್ದೇವೆ ಆದರೆ ಈಗ ಅವ ರು ಬಿಜೆಪಿಗೆ ಹೋಗಿದ್ದಾರೆ. ಬಡ,ಶೋಷಿತ ಪರ ಸಿದ್ಧಾಂತವನ್ನು ಮೈತ್ರಿಪಕ್ಷಗಳು ಹೊಂದಿದ್ದರೆ, ಬಿಜೆಪಿ ಕೋಮುವಾದದ ಸಿದ್ಧಾತವನ್ನು ಹೊಂದಿದೆ ಎಂದರು.

      ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪರಿಹಾರವನ್ನು ನೀಡದ ಮೋದಿ ಚುನಾವಣೆ ಹತ್ತಿರ ಬಂದಾಗ 2000 ರೂ ಕೊಡಲು ಮುಂದಾಗಿದ್ದಾರೆ. ರಫೇಲ್ ಹಗರಣದಲ್ಲಿ 40 ಸಾವಿರ ಕೋಟಿಗೆ ಲೆಕ್ಕ ಇಲ್ಲ, ಬ್ಯಾರಲ್ ಬೆಲೆ ಕಡಿಮೆ ಇದ್ದರು ತೆರಿಗೆ ಜಾಸ್ತಿ ಮಾಡಿ 2.5 ಲಕ್ಷ ಕೋಟಿ ಸಂಪಾದನೆ ಮಾಡಿದ ಮೋದಿ ರೈತರಿಗೆ ಸಾಲಮನ್ನಾ ಮಾಡಲಿಲ್ಲ ಈಗ ಐದು ವರ್ಷದಲ್ಲಿ ಭಾರತದಲ್ಲಿ ಬದಲಾವಣೆ ತರುವುದಾಗಿ ಹೇಳುತ್ತಿದ್ದಾರೆ, ಹಳೇ ಭರವಸೆಯನ್ನು ಈಡೇರಿಸದೇ ಇರುವವರು ಹೊಸ ಭರವಸೆ ನೀಡುತ್ತಿದ್ದಾರೆ ಎಂದರು.

      ಮೋದಿ ಅಧಿಕಾರಕ್ಕೆ ಬರಲಿಕ್ಕೆ ಮಾಧ್ಯಮ ಕಾರಣ, 10 ಕೋಟಿ ಉದ್ಯೋಗ ಎಲ್ಲಿ, ರೈತರ ಸಾವಿಗೆ ಪರಿಹಾರ ಕೊಟ್ಟಿಲ್ಲ, ಮೋದಿ ಅವರ ಸುಳ್ಳುಗಳ ಬಗ್ಗೆ ಮೈತ್ರಿ ಕಾರ್ಯಕರ್ತರು ಮುಖಂಡರು ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು, ಮೈತ್ರಿ ಪರವಾಗಿ ಮತ ಕೇಳುವ ಮೂಲಕ ಮೈತ್ರಿ ಅಭ್ಯರ್ಥಿಗೆ ಬಹುಮತವನ್ನು ಕೊಡಿಸಬೇಕಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದು, ಮೋದಿ ಬಣ್ಣ ಬಯಲು ಮಾಡಲು ದೇವೇಗೌಡರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

      ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಇಡೀ ದೇಶದಲ್ಲಿ ಸುಳ್ಳು ಹೇಳುವ ಸ್ಪರ್ಧೆಯಲ್ಲಿ ಮೋದಿಯನ್ನು ಬಿಟ್ಟರೆ ಬೇರೆ ಯಾರಿಗೂ ಪ್ರಶಸ್ತಿ ಸಿಗುವುದಿಲ್ಲ, ಹಾಗೆಯೇ ತುಮಕೂರಿನಲ್ಲಿ ಬಸವರಾಜು ಅವರಂತೆ ಸುಳ್ಳು ಹೇಳುವವರಿಲ್ಲ, ನಾಲ್ಕು ಬಾರಿ ಸಂಸದರಾದವರು ಮೋದಿ ಹೆಸರಲ್ಲಿ ಮತ ಕೇಳುವುದಕ್ಕೆ ನಾಚಿಕೆಯಾಗುವುದಿಲ್ಲ, ಚುನಾವಣೆಗೆ ಸ್ಪರ್ಧಿಸಲು ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

      ಬಿಜೆಪಿಯವರು ಹೇಮಾವತಿ ಬಿಟ್ಟು ಬೇರೆ ಯಾವ ವಿಚಾರವನ್ನು ಮಾತನಾಡುತ್ತಿಲ್ಲ, ಅಪಪ್ರಚಾರದ ಮೂಲಕ ಚುನಾವಣೆ ಗೆಲ್ಲಲ್ಲು ಕಸರತ್ತು ಮಾಡುತ್ತಿದ್ದಾರೆ. ನಾಲ್ಕು ಬಾರೀ ಸಂಸದರಾದವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಲಿ, ನೇತ್ರಾವತಿ ತಿರುವು ಯೋಜನೆ ಹೆಸರಲ್ಲಿ ನಾಲ್ಕು ಬಾರಿ ಅಧಿಕಾರಕ್ಕೆ ಬಂದ ಬಸವರಾಜು ಹಾಗೂ ಬಿಜೆಪಿ ಪಕ್ಷಕ್ಕೆ ಚುನಾವಣೆ ಬಂದ ತಕ್ಷಣ ಹೇಮಾವತಿ ನೆನಪಿಗೆ ಬರುತ್ತದೆ ಎಂದು ಲೇವಡಿ ಮಾಡಿದರು.

       ಮಾಜಿ ಪ್ರಧಾನಿ ಗೆಲ್ಲಿಸಿದ ಕೀರ್ತಿ ತುಮಕೂರು ಜಿಲ್ಲೆಯ ಜನರು ಪಡೆದುಕೊಳ್ಳಬೇಕಿದೆ. ಮೈತ್ರಿ ಪಕ್ಷದ ಮುಖಂಡರು ಸಣ್ಣ ಸಣ್ಣ ಮನಸ್ತಾಪಗಳನ್ನು ಬಿಟ್ಟು ನಾನೇ ದೇವೇಗೌಡ ಎನ್ನುವಂತೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದ್ದು, ಜಿಲ್ಲೆಯ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಬದ್ಧವಾಗಿದೆ ಮಹತ್ವದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹೇಳಿದರು.

      ಜೆಡಿಎಸ್ ಮುಖಂಡ ಗೋವಿಂದರಾಜು ಮಾತನಾಡಿ ಮೈತ್ರಿ ಧರ್ಮದಂತೆ ತುಮಕೂರು ನಗರದಲ್ಲಿ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದ್ದು, ಎಲ್ಲ ಮುಖಂಡರು ಸಹಕಾರ ನೀಡುವಂತೆ ಕೋರಿದರು.

       ಮಾಜಿ ಶಾಸಕ ರಫೀಕ್ ಅಹ್ಮದ್, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್‍ಬಾಬು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ವೇಣುಗೋಪಾಲ್ ಬೆಮಲ್ ಕಾಂತರಾಜು, ಚೌಡರೆಡ್ಡಿ ತೂಪಲ್ಲಿ ಜಿ.ಪಂಅಧ್ಯಕ್ಷೆ ಲತಾ, ಮೇಯರ್ ಲಲಿತಾ, ಉಪ ಮೇಯರ್ ರೂಪ, ಮಾಜಿ ಶಾಸಕ ಶಫೀ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಗೀತಾರುದ್ರೇಶ್, ಪ್ರೊ.ರಾಧಾಕೃಷ್ಣ, ಸಚಿವ ಶ್ರೀನಿವಾಸ್, ತು.ಬಿ.ಮಲ್ಲೇಶ್, ನರಸೀಯಪ್ಪ, ನಯಾಜ್ ಅಹ್ಮದ್ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

(Visited 16 times, 1 visits today)