ತುಮಕೂರು :

      ಮನೆ ಹಾಗೂ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿ, 3,70,000 ರೂ.ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂದಿದ್ದಾರೆ.

       ಜುಲೈ 2 ರಂದು ರಾತ್ರಿ ವೇಳೆ ತುಮಕೂರು ತಾಲ್ಲೂಕು ಕಸಬಾ ಹೋಬಳಿ ಊರುಕೆರೆ ಬೋವಿಪಾಳ್ಯದ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬೀಗ ಮುರಿದು ದೇವರ ಗರ್ಭಗುಡಿಯಲ್ಲಿಟ್ಟಿದ್ದ 20 ಸಾಲಿಗ್ರಾಮಗಳು, ಸುಮಾರು 35 ಬೆಳ್ಳಿ ಮತ್ತು ತಾಮ್ರದ ದೇವರ ಪ್ರತಿಮೆಗಳು, 2 ಬೆಳ್ಳಿ ತಾಳಿಗಳು, 2 ಬೆಳ್ಳಿ ಲೋಟಗಳು, 2 ಬೆಳ್ಳಿ ಬಟ್ಟಲುಗಳು, 1 ತಾಮ್ರದ ಬಿಂದಿಗೆ, 1 ತಾಮ್ರದ ಗಂಗಳ, 5 ತಾಮ್ರದ ತಂಬಿಗೆಗಳನ್ನು ಕಳ್ಳರು ಕಳವು ಮಾಡಿದ್ದರು. ಎಂದು ದೇವಸ್ಥಾನದ ರಮೇಶ್ ಎಂಬುವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

      ದೂರಿನ ಮೇರೆಗೆ ಸಿಪಿಐ ಶ್ರೀ ಮಧುಸೂಧನ್ ರವರು ವಿಶೇಷ ತಂಡವನ್ನು ರಚಿಸಿದ್ದು, ಈ ತಂಡ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಹಲವು ಪ್ರಕರಣಗಳ್ಲಲಿ ಭಾಗಿಯಾಗಿ ದಸ್ತಗಿರಿಯಾಗಿದ್ದ ಆರೋಪಿಯಾದ ಬೆಳ್ಳಾವಿಯ ಸೈಯದ್ ಇಂತಿಯಾಜ್ ಪಾಷಾ ನನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದ ವೇಳೆ ಆತನ ತುಮಕೂರಿನ ಗ್ರಾಮಾಂತರ ವೃತ್ತ ವ್ಯಾಪ್ತಿಯ ದೇವಸ್ಥಾನ ಹಾಗೂ ಮನೆಗಳಲ್ಲಿ ಕಳವು ಮಾಡಿದ್ದ ಸುಮಾರು 3,70,000 ಬೆಲೆ ಬಾಳುವ ಚಿನ್ನ, ಬೆಳ್ಳಿ ಹಾಗೂ ದೇವಸ್ಥಾನದಲ್ಲಿ ಉಪಯೋಗಿಸುವಂತಹ ವಸ್ತುಗಳನ್ನು ಅಮಾನತ್ತು ಮಾಡಿಕೊಂಡಿದ್ದಾರೆ.

     ಆರೋಪಿಯನ್ನು ಪತ್ತೆಹಚ್ಚಲು ಶ್ರಮಿಸಿದ ತುಮಕೂರು ನಗರ ಉಪವಿಭಾಗದ ಡಿಎಸ್ಪಿ ತಿಪ್ಪೇಸ್ವಾಮಿರವರ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀ ಮಧುಸೂಧನ್ ರವರ ನೇತೃತ್ವದಲ್ಲಿ ಪಿಎಸ್ಐ ಲಕ್ಷ್ಮಯ್ಯ, ಸಿಬ್ಬಂದಿಗಳಾದ ಉಮೇಶ್, ಶಾಂತಕುಮಾರ್, ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು, ತಿಮ್ಮರಾಜು, ಶ್ರೀ ಪ್ರಸನ್ನಕುಮಾರ್, ಪ್ರಾಣೇಶ್, ಪ್ರಭು, ಓಂಕಾರ್ ರವರುಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.

(Visited 24 times, 1 visits today)