ತುಮಕುರು:

      ಇಲ್ಲಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ 14 ಮತ್ತು 15 ರಂದು ಎಂ.ಜಿ. ರಸ್ತೆಯ ಬಾಲಭವನದಲ್ಲಿ ಸಂಜೆ 6.30 ಕ್ಕೆ ನೀನಾಸಂ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.

      14 ರ ಸೋಮವಾರ ಸಂಜೆ 6.30 ಕ್ಕೆ ಗಿರೀಶ್ ಕಾರ್ನಾಡ್ ರಚಿಸಿರುವ ರಾಕ್ಷಸ- ತಂಗಡಿ ನಾಟಕ ಪ್ರದರ್ಶನವಿದೆ.
ಈ ನಾಟಕವನ್ನು ಬಿ.ಆರ್. ವೆಂಕಟರಮಣ ಐತಾಳ್ ನಿರ್ದೇಶಿಸಿದ್ದಾರೆ. 15 ರ ಮಂಗಳವಾರ ಸಂಜೆ ಕರ್ಣ ಸಾಂಗತ್ಯ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ಗಣೇಶ್ ಮಂದರ್ತಿ ನಿರ್ದೇಶಿಸುತ್ತಿದ್ದಾರೆ.

      ನಾಟಕ ಪ್ರದರ್ಶನಕ್ಕೂ ಮುನ್ನ ನಡೆಯುವ ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಮುಕುಂದರಾವ್ ಮತ್ತು ಗೋಮಾರದಹಳ್ಳಿ ಮಂಜುನಾಥ್ ಆಗಮಿಸಲಿದ್ದಾರೆ. 15 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಆಗಮಿಸಲಿದ್ದಾರೆ.
ಪ್ರತಿ ನಾಟಕಕ್ಕೆ 30 ರು. ಪ್ರವೇಶ ದರ ನಿಗದಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

      ರಾಕ್ಷಸ- ತಂಗಡಿ ನಾಟಕ ವಿಜಯನಗರ ಸಾಮ್ರಾಜ್ಯ ಮತ್ತು ಅದರ ಪತನವನ್ನು ರಾಷ್ಟ್ರೀಯತೆಗಳ ಸಂಘರ್ಷವಾಗಿ ಮತ್ತು ಧರ್ಮಗಳ ತಿಕ್ಕಾಟವಾಗಿ ಹಲವು ಇತಿಹಾಸಕಾರರು ಕಟ್ಟಿದ್ದರೆ, ಗಿರೀಶ ಕಾರ್ನಾಡರ ಪ್ರಸ್ತುತ ನಾಟಕವು ರಾಜಕೀಯ-ಸಾಮಾಜಿಕ ವಾಸ್ತವಗಳ ನ್ನೆಲೆಯಲ್ಲಿ ಮತ್ತು ಇದರಲ್ಲಿ ಪಾಲ್ಗೊಂಡ ವ್ಯಕ್ತಿತ್ವಗಳ ನೆಲೆಯಿಂದ ಈ ಕಥನವನ್ನು ಗ್ರಹಿಸಲು ಪ್ರಯತ್ನಿಸುತ್ತದೆ ರಾಕ್ಷಸ – ತಂಗಡಿ. ಯುದ್ಧವು ನಿರರ್ಥಕ ಮತ್ತು ಅನರ್ಥಕಾರಿಯೆಂಬುದನ್ನು ಮಹಾಭಾರತವೇ ತೋರಿಸಿದ್ದರೂ ಭಾರತದ ಇತಿಹಾಸದಲ್ಲಿ ಇಂದಿನವರೆಗೂ ನಡೆದು ಮುನ್ನಡೆಯುತ್ತಿರುವ ಯುದ್ಧೋತ್ಸಾಹ ಯುದ್ಧೋನ್ಮಾದಗಳ ಹಿನ್ನೆಲೆಯಲ್ಲಿ ಈ ನಾಟಕವನ್ನು ರಂಗಕ್ಕೆ ತರಬೇಕೆಂಬುದು ಪ್ರಸ್ತುತ ಪ್ರಯೋಗದ ಪ್ರೇರಣೆ.

      ಇನ್ನು ಗಣೇಶ್ ಮಂದರ್ತಿ ಅವರು ನಿರ್ದೇಶಿಸಿರುವ ಕರ್ಣ ಸಾಂಗತ್ಯ ನಾಟಕವು ಜನಪದ ಮಹಾಭಾರತ, ಕುಮಾರವ್ಯಾಸಭಾರತ, ಪಂಪಭಾರತ ಮತ್ತು ಅಮೃತ ಸೋಮೇಶ್ವರರ ಒಂದು ಯಕ್ಷಗಾನ ಪ್ರಸಂಗ – ಇವುಗಳನ್ನು ಸಹಯೋಗ ಗೊಳಿಸಿ ಕಟ್ಟಿರುವ ಈ ರಂಗಪಠ್ಯವು ಮಹಾಭಾರತದ ಕರ್ಣಕಥನಗಳ ಒಂದು ಮರುನಿರೂಪಣೆ.

      ತಾಯಿಯಿಂದ ಮೊದಲುಗೊಂಡು ಲೋಕದ ಹಲವರು ಕೈಬಿಡುತ್ತ ಹೋದರೂ ಕವಿಗಳು ಮಾತ್ರ ಕರ್ಣನನ್ನು ಕೈಬಿಡದೆ ಉಳಿಸಿಕೊಂಡಿದ್ದರೆ – ಎಂಬ ಆಶಯದೊಂದಿಗೆ ಕರ್ಣನ ಬದುಕಿನ ಮತ್ತು ಅವನ ಕಾವ್ಯಕಥನಗಳ ಸಾಂಗತ್ಯದ ರಂಗಕೃತಿಯೊಂದನ್ನು ಕಟ್ಟುವ ಪ್ರಯೋಗವನ್ನಿಲ್ಲಿ ಮಾಡಲಾಗಿದೆ.

(Visited 32 times, 1 visits today)