ಮಧುಗಿರಿ  :

      ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ರಾಷ್ಟ್ರಕ್ಕೆ ಜಾತ್ಯಾತೀತ ಶಕ್ತಿಯ ಅಗತ್ಯತೆಯನ್ನು ತೋರಿಸುತ್ತಿದ್ದು, ಬಿಜೆಪಿಯ ಕೋಮುವಾದ ಸಿದ್ದಾಂತಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಳ್ಳಾರಿ ನೂತನ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.

      ಅವರು ಕಾರ್ಯ ನಿಮಿತ್ತ ಸ್ವಕ್ಷೇತ್ರ ಪಾವಗಡದಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ದೇಗುಲಕ್ಕೆ ದಿಢೀರ್ ಭೇಟಿ ನೀಡಿ ಮಾತನಾಡಿದರು. ಉಪ ಚುನಾವಣೆಯಲ್ಲಿ ಬಿಜೆಪಿಯ ಜನ ವಿರೋಧಿ ನೀತಿಗೆ ಜನ ಬೆಂಬಲ ವ್ಯಕ್ತಪಡಿಸದೆ ಜಾತ್ಯಾತೀತ ಸಿದ್ದಾಂತ ಹೊಂದಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿಗಳನ್ನು 5 ಕ್ಷೇತ್ರದಲ್ಲಿ 4 ಸ್ಥಾನಗಳನ್ನು ನೀಡಿ ಗೆಲ್ಲಿಸಿಕೊಟ್ಟಿದ್ದಾರೆ. ದೇಶದ ಪ್ರಧಾನ ಮಂತ್ರಿಗಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಆರೋಪಿಸಿದ ಉಗ್ರಪ್ಪನವರು ಪ್ರಧಾನಿ ತೈಲ ಹಾಗೂ ಅನಿಲ ಬೆಲೆಗಳ ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ. ವಿದೇಶಗಳಲ್ಲಿನ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವುದಾಗಿ ಹೇಳಿದ್ದು, ಬಡವರ ಪ್ರತಿ ಜನಧನ್ ಖಾತೆಗೆ 15 ಲಕ್ಷ ಹಾಕುವುದಾಗಿ ತಿಳಿಸಿ ಜನತೆಯನ್ನು ನಂಬಿಸಿ ಮೋಸ ಮಾಡಿದ್ದಾರೆ. ಅಲ್ಲದೆ ರಾಫೆಲ್ಸ್ ಹಗರಣದಲ್ಲಿ ಸುಮಾರು 39 ಸಾವಿರ ಕೋಟಿ ಹಗರಣ ನಡೆಸಿರುವ ಪ್ರಧಾನಿಗಳು ಹಾಗೂ ಬಿಜೆಪಿಯವರು ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಿಸಿದ್ದಾರೆ. ಇದನ್ನೆಲ್ಲ ಗಮನಿಸಿರುವ ಜನತೆ ಲೋಕಸಭೆ ಚುನಾವಣೆಗೆ ಮುನ್ನ ದೊರೆತ ಅವಕಾಶವನ್ನು ಬಳಸಿಕೊಂಡು 5 ಕ್ಷೇತ್ರದ ಮತದಾರ ಬಿಜೆಪಿಯ ವಿರುದ್ಧ ಜಾತ್ಯಾತೀತ ಶಕ್ತಿಗಳನ್ನು ಬೆಂಬಲಿಸಿದ್ದಾರೆ. ಮುಂದೆಯೂ ಈ ಮೈತ್ರಿ ಮುಂದುವರೆಯಲು ಹೈಕಮಾಂಡ್ ತೀರ್ಮಾನಿಸಿದ್ದು, ಅದರಂತೆ ನಡೆಯಲಿದೆ ಎಂದರು.

      ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಜೆಡಿಎಸ್ ನಗರಾಧ್ಯಕ್ಷ, ಪುರಸಭೆ ಸದಸ್ಯ ಎಂ.ಎಸ್.ಚಂದ್ರಶೇಖರ್‍ಬಾಬು, ಮಾಜಿ ಸದಸ್ಯ ರಮೇಶ್, ಕಾಂಗ್ರೆಸ್ ಯುವ ಮುಖಂಡ ವೆಂಕಟೇಶ್, ಅರ್ಚಕ ಅನಂತಭಟ್ ಹಾಗೂ ಇತರರು ಇದ್ದರು.

 

(Visited 14 times, 1 visits today)