ತುಮಕೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯದಲ್ಲಿ ನಡೆದಿರುವ ಸಮೀಕ್ಷೆಯಲ್ಲಿ ಮನೆಗೆ ಬರುವ ಸಮೀಕ್ಷೆ ಅಧಿಕಾರಿಗಳಿಗೆ ಜಿಲ್ಲೆಯ ಲಂಬಾಣಿ ಸಮುದಾಯದವರು ತಪ್ಪದೇ ಬಂಜಾರ(ಲAಬಾಣಿ) ಎಂದು ನಮೂದಿಸಬೇಕು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಜಯದೇವ ನಾಯ್ಕ ಮನವಿ ಮಾಡಿದರು.
ನಗರದ ಮರಳೂರುದಿಣ್ಣೆಯ ಬಂಜಾರ ಭವನದಲ್ಲಿ ಗುರುವಾರ ನಡೆದ ಮುಖಂಡರ ಸಭೆಯಲ್ಲಿ ಸೇವಾಲಾಲ್ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ನಮಗೆ ನಿರ್ದಿಷ್ಟ ಕುಲಕಸುಬು ಇಲ್ಲ, ಕೂಲಿನಾಲಿ ನಂಬಿ ಬದುಕುತ್ತಿರುವವರು. ಈ ಪರಿಸ್ಥಿತಿಯಲ್ಲಿ ಸರ್ಕಾರದ ಮೀಸಲಾತಿ ಸೌಲಭ್ಯ ಪಡೆಯಲು ಸಮುದಾಯದವರು ತಮ್ಮದೇ ಸಮೀಕ್ಷೆಯಲ್ಲಿ ಭಾಗವಹಿಸಿ ನಿಖರವಾದ ಮಾಹಿತಿಯನ್ನು ನೊಂದಾಯಿಸುವAತೆ ಕೋರಿದರು.
ತಾಂಡಾದ ನಾಯಕ, ಡಾವೋ, ಕಾರಬಾರಿ, ಗ್ರಾಮ ಪಂಚಾಯ್ತಿ ಸದಸ್ಯರು, ವಿದ್ಯಾವಂತರು ಮುಂದೆ ನಿಂತು ಸಮೀಕ್ಷಾ ಕಾರ್ಯದಲ್ಲಿ ಸಹಕರಿಸಿ ನಮ್ಮ ಸಮುದಾಯದವರನ್ನು ಸಮೀಕ್ಷೆಯಲ್ಲಿ ನೋಂದಣಿ ಮಾಡಿಸಬೇಕು. ಸಮೀಕ್ಷೆಯಲ್ಲಿ ಜನಸಂಖ್ಯೆ, ಕುಟುಂಬಗಳ ಸಂಖ್ಯೆ, ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯಗಳ ಮಾಹಿತಿ ನೀಡಬೇಕು ಎಂದು ಜಯದೇವ ನಾಯ್ಕ ಹೇಳಿದರು.
ಎಲ್ಲಾ ಜಾತಿಗಳಿಗೆ ಹೋಲಿಸಿದರೆ ನಮ್ಮ ಜಾತಿಯವರು ತುಂಬಾ ಬಡತನದಲ್ಲಿದ್ದಾರೆ. ಯಾವುದೇ ರಾಜಕೀಯ ಪ್ರಾತಿನಿಧ್ಯವಿಲ್ಲ, ರಾಜ್ಯದಲ್ಲಿ ಸುಮಾರು ೩೫ ಲಕ್ಷ ಬಂಜಾರರ ಜನಸಂಖ್ಯೆ ಇದೆ ಎಂದರು.
ಹಿರಿಯ ನ್ಯಾಯವಾದಿ ಅನಂತ ನಾಯ್ಕ ಮಾತನಾಡಿ, ಈ ತಿಂಗಳ ೫ರಿಂದ ೧೭ರವರೆಗೆ ಮನೆಮನೆಗೆ ಬಂದು ಸಮೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಸುಮಾರು ೫೮ ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರಲ್ಲಿ ಶೇಕಡ ೫೦ರಷ್ಟು ಮಂದಿ ಇನ್ನೂ ಕೆಲಸ ಆರಂಭಿಸಿಲ್ಲ ಎಂದು ತಿಳಿಒದುಬಂದಿದೆ. ಜೊತೆಗೆ ತಾಂತ್ರಿಕ ಸಮಸ್ಯೆಗಳೂ ಎದುರಾಗಿವೆ. ಹೀಗಾಗಿ ಸಮೀಕ್ಷೆ ಅವಧಿಯನ್ನು ವಿಸ್ತರಿಸಬೇಕು ಎಂದು ಸರ್ಕಾರವನ್ನು ಕೋರಿದರು.
ಕೆಲ ಲಂಬಾಣಿ ತಾಂಡಾಗಳಲ್ಲಿ ಸಮೀಕ್ಷೆಗೆ ಬಂದ ಅಧಿಕಾರಿಗಳು ಲಂಬಾಣಿ ಬದಲು ತಮ್ಮ ಜಾತಿ ಹೆಸರು ನೋಂದಣಿ ಮಾಡಿಕೊಂಡಿರುವ ದೂರುಗಳು ಬಂದಿವೆ. ಅಂತಹ ಅಧಿಕಾರಿ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪ್ರಕರಣಗಳು ನಡೆಯದಂತೆ ಸರ್ಕಾರ ಹಾಗೂ ತಾಂಡಾದ ವಿದ್ಯಾವಂತರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಬಂಜಾರ ಸಂಘದ ಮುಖಂಡ ಶೇಷಾ ನಾಯ್ಕ ಮಾತನಾಡಿ, ನಗರದ ಬಂಜಾರ ಭವನ ನಿರ್ಮಾಣಕ್ಕೆ ತಾಂಡಾ ಅಭಿವೃದ್ಧಿ ನಿಗಮದಿಂದ ೨೧ ಲಕ್ಷ ರೂ. ಮಂಜೂರು ಮಾಡಿ ನೆರವಾಗಿರುವ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಶಂಕರ್, ಮುಖಂಡರಾದ ದೇನಾ ನಾಯ್ಕ, ಚಂದ್ರಾ ನಾಯ್ಕ, ಕುಬೇಂದ್ರ ನಾಯ್ಕ, ಮಹಿಳಾ ಘಟಕ ಅಧ್ಯಕ್ಷ ಶಾಂತಮ್ಮ, ಡಿಪೋ ರಮೇಶ್ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)