ತುಮಕೂರು :

      ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮ ಪಂಚಾಯತಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರನ್ನು ಹೊರತುಪಡಿಸಿ ಉಳಿದ ಸಿಬ್ಬಂದಿಗಳಾದ ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಜವಾನ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿ ಕೆಲಸಕ್ಕೆ ಹಾಜರಾಗದಿರುವುದು ಕಂಡು ಬಂದಿದ್ದರಿಂದ ಸಂಬಂಧಿಸಿದವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲು ಉಪಕಾರ್ಯದರ್ಶಿ (ಅಭಿವೃದ್ಧಿ) ಟಿ.ಕೆ. ರಮೇಶ್ ಅವರಿಗೆ ಸೂಚಿಸಿದರು.

      ಅಲ್ಲದೆ ಸದರಿ ಗ್ರಾಮ ಪಂಚಾಯಿತಿಯಲ್ಲಿ ಸಕಾಲ ಯೋಜನೆಯ ನಾಮಫಲಕವನ್ನು ಅಳವಡಿಸದೇ ಇರುವುದನ್ನು ಗಮನಿಸಿ ಕೂಡಲೇ ಅಳವಡಿಸುವಂತೆ ಪಂಚಾಯತಿ ಕಾರ್ಯದರ್ಶಿಗೆ ಸೂಚಿಸಿದರಲ್ಲದೆ ಗ್ರಾಮ ಪಂಚಾಯಿತಿಯ ಹಾಜರಾತಿ ವಹಿ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯ 1 ರಿಂದ 7 ರಿಜಿಸ್ಟರ್‍ಗಳನ್ನು ಪರಿಶೀಲಿಸಿದರು. ನಂತರ ಕೂಲಿ ಕಾರ್ಮಿಕರ ಆಧಾರ್ ನಂಬರ್‍ಗಳನ್ನು ಬ್ಯಾಂಕ್‍ಗೆ ಲಿಂಕ್ ಮಾಡಿರುವ ಪ್ರಗತಿ ಕೇವಲ ಶೇ.70ರಷ್ಟು ಮಾತ್ರ ಇರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿಯಲ್ಲಿ ಇರಸಾಲು : 2019-20, ಹಕ್ಕು ಬದಲಾವಣೆ, ವರ್ಗ-1ರ ನಗದು ಮತ್ತು ವರ್ಗ-2ರ ನಗದುನ್ನು ಸಮರ್ಪಕವಾಗಿ ದಾಖಲಿಸದೇ ಇರುವುದನ್ನು ಕಂಡು ಸದರಿ ಕಡತಗಳನ್ನು ಜಪ್ತಿ ಮಾಡಿ ಶಿಸ್ತು ಕ್ರಮವಹಿಸಲು ಭೇಟಿಯ ಸಮಯದಲ್ಲಿ ಹಾಜರಿದ್ದ ಉಪಕಾರ್ಯದರ್ಶಿ (ಅಭಿವೃದ್ಧಿ) ಟಿ.ಕೆ. ರಮೇಶ್ ಅವರಿಗೆ ಸೂಚಿಸಿದರು.

      ನಂತರ ದೊಡ್ಡ ಅಗ್ರಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದಾಗ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಶಾಲಾ ಕಾಂಪೌಂಡ್ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಿಸದೇ ಇರುವ ಬಗ್ಗೆ ಗಮನಿಸಿ ಸಮರ್ಪಕವಾಗಿ ಕಾಮಗಾರಿಯನ್ನು ನಿರ್ವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿನ ಆಟದ ಮೈದಾನ, ಅಡುಗೆ ಕೋಣೆ, ನಲಿ-ಕಲಿ ಕೇಂದ್ರಗಳಿಗೆ ಭೇಟಿ ನೀಡಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲು ಸಹ ಶಿಕ್ಷಕರುಗಳಿಗೆ ಸೂಚಿಸಿದರು.

      ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ರೋಗಿಗಳ ವಾರ್ಡ್ ಹಾಗೂ ಶೌಚಾಲಯಗಳ ಶುಚಿತ್ವವನ್ನು ಪರಿಶೀಲಿಸಿ ಸ್ವಚ್ಚವಾಗಿಟ್ಟುಕೊಳ್ಳಲು ಸ್ಟಾಫ್ ನರ್ಸ್‍ಗಳಿಗೆ ಸೂಚಿಸಿದರು.

      ನಂತರ ಕಳ್ಳಂಬೆಳ್ಳ ಕೆರೆಗೆ ಭೇಟಿ ನೀಡಿ ಕಳ್ಳಂಬೆಳ್ಳ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಘಟಕದಿಂದ 12 ಹಳ್ಳಿಗಳಿಗೆ ನೀರು ಒದಗಿಸದೇ ಇರುವುದನ್ನು ಪರಿಶೀಲಿಸಿ, ಸಂಬಂಧಿಸಿದ ಗ್ರಾಮೀಣ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಕ್ಷಣ ಕ್ರಮವಹಿಸುವಂತೆ ಸೂಚನೆ ನೀಡುವಂತೆ ಭೇಟಿಯ ಸಮಯದಲ್ಲಿ ಹಾಜರಿದ್ದ ಜಿ.ಪಂ. ಉಪಕಾರ್ಯದರ್ಶಿ ಶ್ರೀ ಟಿ.ಕೆ. ರಮೇಶ್ ಅವರಿಗೆ ಸೂಚಿಸಿದರು.

(Visited 64 times, 1 visits today)