ತುಮಕೂರು:

      ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತ, ಕಾರ್ಮಿಕ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ತುಮಕೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು.
ನೂರಾರು ಪ್ರತಿಭಟನಾಕಾರರು ಟೌನ್‍ಹಾಲ್‍ನಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು. ಆಗ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬೈಕ್ ರ್ಯಾಲಿ ನಡೆಸಿಯೇ ತೀರುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಾಗ ಕೆಲವರನ್ನು ವಾಹನಕ್ಕೆ ತುಂಬಿ ಬಂಧಿಸಿ ಬಿಡುಗಡೆ ಮಾಡಲಾಯಿತು.

      ಬೈಕ್ ರ್ಯಾಲಿಗೆ ಅನುಮತಿ ಕೊಡದಿದ್ದರಿಂದ ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ನಡೆಸಿದರು. ನಂತರ ಟೌನ್‍ಹಾಲ್ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಘೋಷಣೆ ಕೂಗಿದರು.

       ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಉಳುವವನಿಗೆ ಭೂ ಒಡೆತನ ನೀಡಿದ್ದ ಕಾಯ್ದೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಿದ್ದುಪಡಿ ತಂದು ರೈತರಲ್ಲದವರಿಗೆ ಭೂಮಿ ಖರೀದಿಸಲು ಅವಕಾಶಕೊಟ್ಟಿದ್ದಾರೆ. ಇದು ರೈತರಿಗೆ ಮರಣ ಶಾಸನ. ರಾಜ್ಯ ಸರ್ಕಾರದ ಕ್ರಮದಿಂದ ರಾಜ್ಯದ ಒಂದು ಲಕ್ಷ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

     ತಾನೊಬ್ಬ ರೈತನೆಂದು ಹೇಳಿಕೊಂಡು ಹಸಿರುಶಾಲು ಹೊದ್ದು ಅಧಿಕಾರ ಸ್ವೀಕರಿಸಿ ರೈತರ ಹಿತರಕ್ಷಣೆಗೆ ಬದ್ದ ಎಂದು ಹೇಳಿದ ಯಡಿಯೂರಪ್ಪ ರೈತರ ಬೆನ್ನಿಗೆ ಚೂರಿ ಹಾಕಿದ್ದಾರೆ. ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ ಹೋರಾಟವನ್ನು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ಯುತ್ತೇವೆ ಮತ್ತು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 

      ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದಪಟೇಲ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳುತ್ತಿವೆ. ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡರು ಇದೊಂದು ರಾಜಕೀಯ ಪ್ರೇರಿತ ಬಂದ್ ಎಂದು ಸುಳ್ಳು ಹೇಳುತ್ತಿದೆ. ರೈತರು ಸ್ವಯಂ ಪ್ರೇರಿತ ಬಂದ್ ನಡೆಸಿದ್ದಾರೆ. ಆದರೆ ರಾಜ್ಯ ಸರ್ಕಾರ ರೈತರ ತೇಜೋವಧೆ ಮಾಡುತ್ತಿದೆ. ಭೂಸುಧಾರಣಾ ಕಾಯ್ದೆ ರೈತರ ಪರವೇ ಆದರೆ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

      ಆರ್‍ಕೆಎಸ್ ಸಂಚಾಲಕ ಎಸ್.ಎನ್.ಸ್ವಾಮಿ ಮಾತನಾಡಿ ರೈತರ ಜೀವನ ನಾಶ ಮಾಡಲು ಸರ್ಕಾರಗಳು ಹೊರಟಿವೆ. ಕೋವಿಡ್ ಕಾಲದಲ್ಲಿ ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಬಡವರು ಹಸಿವಿನಿಂದ ನರಳುತ್ತಿದ್ದರೆ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರೆ, ಅದಾನಿ, ಅಂಬಾನಿಗಳು ಶ್ರೀಮಂತರಾಗುತ್ತಲೇ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಸೇವೆ ಮಾಡಲು ಟೊಂಕ ಕಟ್ಟಿ ನಿಂತಿವೆ ಎಂದು ವಾಗ್ದಾಳಿ ನಡೆಸಿದರು.
ಎಐಕೆಎಸ್‍ಸಿಸಿ ಕಾರ್ಯದರ್ಶಿ ಬಿ.ಉಮೇಶ್ ಮಾತನಾಡಿ ಪ್ರಧಾನಿ ಮೋದಿ ಜನರಿಗೆ ಚಾಕೊಲೆಟ್ ನೀಡಿದ್ದಾರೆ. ರುಚಿ ಇರುತ್ತದೆ. ಅದು ಹೊಟ್ಟೆ ತುಂಬಲ್ಲ. ಶಕ್ತಿ ಬರಲ್ಲ. ಕಾರ್ಪೋರೇಟ್ ಕಂಪನಿಯ ಜಂತು ಹುಳುಗಳು ಜಾಸ್ತಿಯಾಗಿ ರೈತರನ್ನು ನಾಶ ಮಾಡಲಿವೆ ಎಂದು ಹೇಳಿದರು.

         ಸಿಐಟಿಯು ಮುಖಂಡ ಸೈಯದ್ ಮುಜೀಬ್ ಮಾತನಾಡಿ 44 ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಿದೆ.
ಇದರಿಂದ ಕಾರ್ಮಿಕ ಹಕ್ಕುಗಳ ದಮನಗೊಳ್ಳಲಿವೆ. ಹೀಗಾಗಿ ರೈತ-ಕಾರ್ಮಿಕರ ಐಕ್ಯ ಹೋರಾಟ ನಡೆಸಬೇಕು. ಸರ್ಕಾರಗಳ ನೀತಿ ಬದಲಾವಣೆಯಾಗಬೇಕು. ಆಗ ಮಾತ್ರವೇ ರೈತರ ಜೀವನಮಟ್ಟ ಸುಧಾರಿಸಲು ಸಾಧ್ಯ ಎಂದರು.

      ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಬೋರೇಗೌಡ, ಮುಖಂಡರಾದ ಚಿಕ್ಕಣ್ಣ, ರವೀಶ್, ತಿಮ್ಮೇಗೌಡ, ಪ್ರಾಂತ ರೈತ ಸಂಘ ಸಿ.ಅಜ್ಜಪ್ಪ, ನರಸಿಂಹಮೂರ್ತಪ್ಪ, ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪಂಡಿತ್ ಜವಾಹರ್, ತಾಜುದ್ದೀನ್ ಶರೀಫ್, ಕೊಟ್ಟಶಂಕರ್, ಕನ್ನಡಪರ ಸಂಘಟನೆಗಳ ರಘುರಾಮ್, ಕರ್ನಾಟಕ ರಕ್ಷಣಾ ವೇದಿಕೆಯ ಮಂಜುನಾಥ್‍ಗೌಡ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪಿ.ಎನ್.ರಾಮಯ್ಯ, ಬಿಎಸ್.ಪಿ ಮುಖಂಡ ರಂಗಧಾಮಯ್ಯ, ಎಐಟಿಯುಸಿ ಮುಖಂಡ ಕಂಬೇಗೌಡ, ಕಟ್ಟಡ ಕಾರ್ಮಿಕರ ಸಂಘದ ಗಂಗಾಧರ್, ಶಂಕರಪ್ಪ, ಖಲೀಲ್ ಅಹಮದ್, ವೆಂಕಟೇಶ್, ಎಐಎಂಎಸ್‍ಎಸ್ ಜಿಲ್ಲಾಧ್ಯಕ್ಷ ಕಲ್ಯಾಣಿ, ಎಐಡಿಎಸ್‍ಒ ಸಂಚಾಲಕಿ ಅಶ್ವಿನಿ, ಎಐಯುಟಿಯುಸಿ ಸಂಚಾಲಕಿ ಮಂಜುಳ ಇದ್ದರು.

(Visited 7 times, 1 visits today)