ತುಮಕೂರು:

      ಮಾರಣಾಂತಿಕ ಕೊರೋನಾ ವೈರಸ್ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಹಾಸಿಗೆಗಳುಳ್ಳ ವಿಶೇಷ ವಾರ್ಡ್ ತೆರೆದು, ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದ್ದು, ದಿನದ 24 ಗಂಟೆಯು ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ ಸನ್ನದ್ದವಾಗಿದೆ.

  ಮುಂಜಾಗ್ರತಾ ಕ್ರಮಗಳು:-

      ಕೊರೋನಾ ವೈರಸ್‍ಗೆ ನಿರ್ದಿಷ್ಟ ಚಿಕಿತ್ಸೆ ಕಂಡು ಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ತಡೆಗಟ್ಟಬಹುದಾಗಿದೆ. ಕೈಕಾಲುಗಳನ್ನು ಸೋಪು, ನೀರಿನಿಂದ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಕೆಮ್ಮುವಾಗ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ತುಮಕೂರು ಜಿಲ್ಲೆಯಲ್ಲಿ ಜನರು ಆತಂಕ ಪಡುವ ಅಗತ್ಯವಿಲ್ಲ. ಈಲ್ಲೆಯಲ್ಲಿ ಸಂಶಯಾತ್ಮಕ ಸೋಂಕು ಕಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ವೈರಸ್‍ನ ಲಕ್ಷಣಗಳಿರುವವರು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ವೀರಭದ್ರಯ್ಯ ಅವರು ತಿಳಿಸಿದ್ದಾರೆ.

      ಕಳೆದ ದಿನಗಳ ಹಿಂದೆ ಚೀನಾದ ವುಹಾನ್‍ನಲ್ಲಿ ಮೊದಲು ಪತ್ತೆಯಾಗಿದ್ದ ಕೊರೋನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದೆ. ಭಾರತ ಸೇರಿ ಒಟ್ಟು 24 ರಾಷ್ಟ್ರಗಳಿಗೆ ವೈರಸ್ ಹರಡಿದೆ. ಕರ್ನಾಟಕಕ್ಕೂ ವೈರಸ್ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು, ಚೀನಾಕ್ಕೆ ಭೇಟಿ ನೀಡಿ ವಾಪಸಾಗಿರುವವರಿಗೆ ತಪಾಸಣೆ ನಡೆಸಲಾಗುತ್ತಿದೆ.

  ಕೊರೋನಾ ವೈರಸ್ ಎಂದರೇನು..?

      ಕೊರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೋನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗಲುತ್ತಿದೆ.

    ಕೊರೋನಾ ವೈರಸ್ ಲಕ್ಷಣಗಳು:

      ವೈರಸ್‍ನಿಂದಾಗಿ ಸಾಮಾನ್ಯ ಶೀತ, ಕೆಮ್ಮು, ಮೈಕೈ ನೋವು, ನ್ಯಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುವುದು. ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ. ನಂತರ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

(Visited 13 times, 1 visits today)