ತುಮಕೂರು:

       ಕೊವಿಡ್-19 3ನೇ ಹಂತದ ಹರಡುವಿಕೆಯು ಬಹಳ ತೀವ್ರ ಮತ್ತು ವ್ಯಾಪ್ತಿಯನ್ನು ವೇಗವಾಗಿ ಕ್ರಮಿಸುವುದನ್ನು ತಡೆಯಲು ಎಲ್ಲಾ ರೀತಿಯಲ್ಲೂ ಮುಂಜಾಗ್ರತಾ ಕ್ರಮವಹಿಸಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೊವಿಡ್-19 ಕುರಿತಂತೆ ನಡೆದ ಮುಂಜಾಗ್ರತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸೋಂಕಿತ ವ್ಯಕ್ತಿಗೆ ಪ್ರಥಮ ಹಂತದಲ್ಲಿ ಸಮೀಪವಿರುವ ಕುಟುಂಬಸ್ಥರು, ಬಂಧುಗಳು ಹಾಗೂ 2ನೇ ಹಂತದಲ್ಲಿ ಅವರ ನಿಕಟವರ್ತಿಗಳಿಗೆ ಹರಡುವ ಸಾಧ್ಯತೆಯಿದ್ದು, 3ನೇ ಹಂತದಲ್ಲಿ ಅವರು ಓಡಾಡಿರುವ, ಸಂಪರ್ಕದಲ್ಲಿರುವ ಎಲ್ಲಾ ಪ್ರದೇಶಗಳ ವ್ಯಕ್ತಿಗಳಿಗೆ ತೀವ್ರವಾಗಿ ಹಾಗೂ ವಿಶಾಲವ್ಯಾಪ್ತಿಯಲ್ಲಿ ಸೋಂಕು ಹರಡುವುದರಿಂದ ಮಾರ್ಚ್ 31 ರವರೆಗೆ ತೀವ್ರ ನಿಗಾವಹಿಸಬೇಕೆಂದು ಅವರು ಸೂಚನೆ ನೀಡಿದರು.

ಪ್ರತಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಐಸೋಲೇಷನ್ ಬೆಡ್‍ಗಳ ರೂಂಗಳನ್ನು ಸಿದ್ಧಪಡಿಸಿಕೊಳ್ಳುವುದು ಹಾಗೂ ವೆಂಟಿಲೇಟರ್‍ಗಳನ್ನು ಅಳವಡಿಸಿಕೊಳ್ಳುವುದು, ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಮತ್ತು ಬೇಧಿ ಇವುಗಳಿಂದ ಬಳಲುತ್ತಿರುವ ಎಲ್ಲಾ ಅನುಮಾನಿತ ರೋಗಿಗಳನ್ನು ಪರೀಕ್ಷೆಗೊಳಪಡಿಸಿ ಸೋಂಕಿನ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಸಚಿವರು ತಿಳಿಸಿದರು.

      ಕೊವಿಡ್-19ರ ಮೂರನೇ ಹಂತ ತುಂಬಾ ಮಹತ್ವದಾಗಿದ್ದು, ಅದನ್ನು ಯಾರೂ ನಿರ್ಲಕ್ಷಿಸಬಾರದೆಂದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬೇಕಾಗಿರುವ ಹಣಕಾಸಿಗೆ ಯಾವುದೇ ತೊಂದರೆ ಇಲ್ಲವೆಂದು ಸಚಿವರು ತಿಳಿಸಿದರು.

      ಎಲ್ಲಾ ಇಲಾಖೆಗಳು ಸಮನ್ವಯವಾಗಿ ಕಾರ್ಯನಿರ್ವಹಿಸಿ ಎಂದು ನಿರ್ದೇಶನ ನೀಡಿದರು.  ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಅರೆ ವೈದ್ಯ ಸಿಬ್ಬಂದಿ/ ವೈದ್ಯರಿಗೆ ಸೂಕ್ತ ತರಬೇತಿ ನೀಡಿ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಿದ್ಧರಾಗಿರುವಂತೆ ಅಣಿಗೊಳಿಸಲು ಸಚಿವರು ತಿಳಿಸಿದರು.

      ಯಾವುದೇ ಸ್ಥಳಗಳಲ್ಲಿ 10 ಜನರಿಗಿಂತ ಮೇಲೆ ಸೇರದಂತೆ ನಿಗಾವಹಿಸಲು ಸರ್ಕಾರ ನಿರ್ಣಯ ಕೈಗೊಂಡಿದ್ದು, ಜನರು ವೈಯಕ್ತಿಕ ಸ್ವಚ್ಛತೆ ಮತ್ತು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಈ ತರಹದ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಪಡಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

       ಅಂಗನವಾಡಿ, ಆಶಾಕಾರ್ಯಕರ್ತೆಯರು ಹಾಗೂ ಅಧಿಕಾರಿಗಳು ಕೊರೋನಾ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಬೇಕು. ಆದರೆ ಭಯ ಹುಟ್ಟಿಸಬಾರದೆಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು ಹಾಗೂ ಕ್ಲಬ್, ಪಬ್‍ಗಳಲ್ಲಿ ಜನಸಂದಣಿ ನಿಷೇಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

      ಮಾಂಸ ಮಾರಾಟ, ಕತ್ತರಿಸಿದ ಹಣ್ಣುಗಳನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುವ ಬಗ್ಗೆ ನಿರ್ಬಂಧವಿಧಿಸಬೇಕು. ಕೊರೋನಾ ವೈರಸ್‍ನಿಂದ ಜನರು ಸಾಯುವ ಪ್ರಮಾಣ ಕಡಿಮೆ ಇದ್ದರೂ ಈ ಸೋಂಕು ಹರಡುವ ಪ್ರಮಾಣ ತೀವ್ರವಾಗಿರುವುದರಿಂದ ಸಾರ್ವಜನಿಕರು ಮುಂಜಾಗ್ರತರಾಗಿ ಇರುವುದು ಒಳ್ಳೆಯದು ಎಂದು ಅವರು ಸಲಹೆ ಮಾಡಿದರು.

      ಸರ್ಕಾರಿ ಕಛೇರಿಗಳಿಗೆ ನಿಗಧಿತ ಅವಧಿಯಲ್ಲಿ ಮಾತ್ರ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಭೇಟಿ ನೀಡುವುದು. ಉಳಿದ ವೇಳೆಯಲ್ಲಿ ಕಛೇರಿಗೆ ಪ್ರವೇಶವನ್ನು ನಿರ್ಬಂಧಿಸಲು ಸಚಿವರು ತಿಳಿಸಿದರು.

      ಅದಕ್ಕೂ ಮುನ್ನ ಈವರೆವಿಗೂ ಕೊರೋನಾ ವೈರಸ್ ತಡೆಯುವ ಬಗ್ಗೆ ಜಿಲ್ಲಾಡಳಿತ ಕೈಗೊಂಡಿರುವ ಮಾಹಿತಿಯನ್ನು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಿಕಾ ಅವರಿಂದ ಪಡೆದರು ಹಾಗೂ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್‍ಗಳನ್ನು ಸ್ಥಾಪಿಸುವಂತೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಇದೇ ಕ್ರಮ ಅನುಸರಿಸುವಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲು ಅವಕಾಶವಿಲ್ಲದ ಗ್ರಾಮೀಣ ಭಾಗದಲ್ಲಿ ಖಾಸಗಿ ಮನೆಗಳನ್ನು ಸಹ ಪಡೆದು ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ, ಉಪವಿಭಾಗಾಧಿಕಾರಿ ಅಜಯ್ ಹಾಗೂ ಜಿಲ್ಲಾ ಸರ್ಜನ್ ಡಾ: ವೀರಭದ್ರಯ್ಯ, ವಿವಿಧ ಇಲಾಖೆಗಳ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

      ಸಭೆಯ ನಂತರ ಸಚಿವರು ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಐಸೋಲೇಷನ್ ವಾರ್ಡ್‍ಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

(Visited 14 times, 1 visits today)