ತುಮಕೂರು:

      ಕೋವಿಡ್-19 ಸೋಂಕು ರೋಗವನ್ನು ತಡೆಯುವ ಸಲುವಾಗಿ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಮೆಸ್, ಬೇಕರಿ, ಟೀ/ಕಾಫಿ ಶಾಪ್, ಜ್ಯೂಸ್ ಸೆಂಟರ್, ನಂದಿನಿ ಮಿಲ್ಕ್ ಅಂಡ್ ಐಸ್ ಕ್ರೀಂ ಪಾರ್ಲರ್‍ಗಳ ಮಾಲೀಕರು ಕಡ್ಡಾಯವಾಗಿ ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸೂಚನೆ ನೀಡಿದ್ದಾರೆ.

      ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಮೆಸ್, ಬೇಕರಿ ಮತ್ತಿತರೆ ಉದ್ದಿಮೆಗಳ ಮಾಲೀಕರು ತಾವು ನಡೆಸುತ್ತಿರುವ ಉದ್ದಿಮೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿದಿನ 30 ಗ್ರಾಂ ಬ್ಲಿಚಿಂಗ್ ಪೌಡರ್ ಅನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಶುಚಿಗೊಳಿಸಬೇಕು.
ಬಂದ ಗ್ರಾಹಕರಿಗೆ ಉಪಹಾರ ಸೇವಿಸುವ ಮುನ್ನ ಕಡ್ಡಾಯವಾಗಿ ಹ್ಯಾಂಡ್‍ವಾಶ್/ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ಒದಗಿಸಬೇಕು ಹಾಗೂ ಕುಡಿಯಲು ಬಿಸಿ ನೀರನ್ನು ನೀಡಬೇಕು. ಗ್ರಾಹಕರು ಉಪಹಾರ ಸೇವಿಸಿ ಹೋದ ನಂತರದ ಮೇಜು ಮತ್ತು ಕುರ್ಚಿಗಳನ್ನು ಸೋಂಕು ನಿವಾರಕಗಳಿಂದ ಸ್ವಚ್ಚಗೊಳಿಸಬೇಕು.
ಉದ್ದಿಮೆಗಳಲ್ಲಿ ಬಳಸುವ ತಟ್ಟೆ, ಲೋಟ, ಅಡುಗೆ, ಮತ್ತಿತರ ಪಾತ್ರೆಗಳನ್ನು ಬಿಸಿ ನೀರಿನಿಂದಲೇ ತೊಳೆಯಬೇಕು.

      ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಹೆಲ್ತ್ ಕಾರ್ಡ್‍ಗಳನ್ನು ಹೊಂದಿರಬೇಕಲ್ಲದೇ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಹಾಗೂ ಅವರು ಕೈಗಳನ್ನು ತೊಳೆಯಲು ಹ್ಯಾಂಡ್‍ವಾಶ್/ಹ್ಯಾಂಡ್ ಸ್ಯಾನಿಟೈಜರ್‍ಗಳನ್ನೇ ಉಪಯೋಗಿಸಬೇಕು. ತಲೆಗೆ ಹೇರ್‍ನೆಟ್‍ಗಳನ್ನು ಬಳಸಬೇಕು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮೇಲ್ಕಂಡ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

      ತಪ್ಪಿದಲ್ಲಿ ಉದ್ದಿಮೆಯ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಅವರು ಉದ್ದಿಮೆಗಳ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

(Visited 7 times, 1 visits today)