ತುಮಕೂರು :

      ಭಾರತೀಯ ಜೀವವಿಮಾ ನಿಗಮವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಅಖಿಲ ಭಾರತ ಜೀವವಿಮಾ ನೌಕರರ ಸಂಘ, ಅಭಿವೃದ್ಧಿ ಅಧಿಕಾರಿಗಳ ಸಂಘ ಮತ್ತು ಅಧಿಕಾರಿಗಳ ಸಂಘಟನೆಗಳು ನೇತೃತ್ವದಲ್ಲಿ ತುಮಕೂರಿನ ಗಾಂಧೀನಗರದಲ್ಲಿರುವ ಕಚೇರಿ ಮುಂದೆ ನೌಕರರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಡಸ್ವಾಮಿ, ಬಜೆಟ್‍ನಲ್ಲಿ ಎಲ್‍ಐಸಿ ಶೇರು ವಿಕ್ರಯಕ್ಕೆ ತೀರ್ಮಾನಿಸಿರುವುದು ಆಘಾತಕಾರಿ ಬೆಳವಣಿಗೆ. ಸಧ್ಯಕ್ಕೆ ಗ್ರಾಹಕರ ಹಣಕ್ಕೆ ಭಯವಿಲ್ಲ. ಆದರೆ ಭಾರತೀಯ ಜೀವ ವಿಮಾ ನಿಗಮ ಖಾಸಗೀಕರಣಗೊಳಿಸಿದರೆ ಸಾರ್ವಜನಿಕರ ಹಣಕ್ಕೆ ಭದ್ರತೆ ಇರುವುದಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುವ ಎಲ್‍ಐಸಿ ಲಾಭದಲ್ಲಿದೆ. ಇಂತಹ ಸಂಸ್ಥೆಯ ಷೇರು ವಿಕ್ರಯಕ್ಕೆ ಸರ್ಕಾರ ಮುಂದಾಗುವುದು ಸರಿಯಲ್ಲ ಎಂದರು.

      ಭಾರತೀಯ ಜೀವ ವಿಮಾನ ನಿಗಮ ಇದುವರೆಗೂ ಸಾವಿರಾರು ಕೋಟಿ ರೂಪಾಯಿ ಲಾಭವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತ ಬಂದಿದೆ. 2017ರಲ್ಲಿ, 2206 ಕೋಟಿ, 2018ರಲ್ಲಿ 2430 ಕೋಟಿ, 2019ರಲ್ಲಿ 2611 ಕೋಟಿ ರೂಪಾಯಿ ಲಾಭಾಂಶವನ್ನು ಸರ್ಕಾರದ ಬೊಕ್ಕಸಕ್ಕೆ ನೀಡಿದೆ. ಎಲ್‍ಐಸಿ ಲಾಭದಲ್ಲಿದ್ದು ಗ್ರಾಹಕರ ವಿಶ್ವಾಸ ಗಳಿಸಿದೆ. ಸಂಸ್ಥೆ ಇಷ್ಟು ಸುದೀರ್ಘ ವರ್ಷಗಳಲ್ಲಿ ಒಬ್ಬ ಗ್ರಾಹಕರಿಗೂ ಮೋಸ ಮಾಡಿಲ್ಲ. ಹಾಗಾಗಿ ಸಂಸ್ಥೆಯ ಮೇಲೆ ಪಾಲಿಸಿದಾರರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ ಎಂದರು.

      ಖಾಸಗಿಯವರು ಎಲ್‍ಐಸಿಯಲ್ಲಿ ಹೂಡಿಕೆ ಮಾಡುವುದು ಲಾಭದ ಉದ್ದೇಶವಿಟ್ಟುಕೊಂಡು ಮಾತ್ರ. ಅವರಿಗೆ ಜನರ ನಂಬಿಕೆಗಳು ಮುಖ್ಯವಲ್ಲ. ಸಾರ್ವಜನಿಕ ಸಂಸ್ಥೆಗಳಲ್ಲಿ ಲಾಭ ಪಡೆಯುವುದೇ ಖಾಸಗಿಯವರ ಮುಖ್ಯ ಉದ್ದೇಶ. ಇಲ್ಲಿನ ಸಾವಿರಾರು ಕೋಟಿ ಹಣವನ್ನು ಕಂಪನಿಗಳಲ್ಲಿ ಹೂಡಿ ನಂತರ ನಷ್ಟವಾಯಿತೆಂದು ಜನರ ಹಣವನ್ನು ಲೂಟಿ ಹೊಡೆಯುತ್ತಾರೆ. ಹೀಗಾಗಿ ಖಾಸಗೀಕರಣಗೊಳಿಸುವುದು ಬೇಡ. ಪಾಲಿಸಿದಾರರು ತಮ್ಮ ಹಣವನ್ನು ರಕ್ಷಿಸಿಕೊಳ್ಳಲು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

     ಎಲ್‍ಐಸಿಯಲ್ಲಿ 1 ಲಕ್ಷ ನೌಕರರು, 50 ಸಾವಿರ ಮಂದಿ ಅಧಿಕಾರಿಗಳು ಒಟ್ಟು ಎರಡು ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 10 ಲಕ್ಷ ಮಂದಿ ಏಜೆಂಟರಿದ್ದಾರೆ. 30 ಕೋಟಿ ಗ್ರಾಹಕರಿದ್ದಾರೆ. 30 ಲಕ್ಷ ಕೋಟಿ ಹಣವಿದೆ. ಇದಕ್ಕೆ ಭದ್ರತೆ ಇದೆ. ಇಷ್ಟೊಂದು ಹಣ ಹೊಂದಿದ್ದರೂ ಷೇರು ವಿಕ್ರಯಕ್ಕೆ ಮುಂದಾಗಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದರು.  

       ದ್ವಿತೀಯ, ತೃತೀಯ, ಡಿ ದರ್ಜೆ ನೌಕರರು ಅಧಿಕಾರಿಗಳು ಕೂಡ ನಾಳೆ ಮಧ್ಯಾಹ್ನ 12.30ರಿಂದ 1.30ರವರೆಗೆ ಎಲ್ಲಾ ಶಾಖೆಗಳಲ್ಲೂ ಪ್ರತಿಭಟನೆ ನಡೆಸಿ ಖಾಸಗೀಕರಣವನ್ನು ವಿರೋಧಿಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಸಿ.ವಿ.ಸಾವಂತ್, ಚಂದ್ರಶೇಖರಯ್ಯ, ಅಧಿಕಾರಿಗಳ ಸಂಘಟನೆಯ ಕ.ಕೆ. ಜಯಲಕ್ಷ್ಮೀ ಸೇರಿದಂತೆ ಎಲ್ಲಾ ನೌಕರರು ಉಪಸ್ಥಿತರಿದ್ದು ಕೇಂದ್ರದ ನಿರ್ಧಾರವನ್ನು ಖಂಡಿಸಿದರು.

(Visited 21 times, 1 visits today)