ಗ್ರಾಪಂ ಅಧ್ಯಕ್ಷರಿಗೆ ಇರುವ ಅಧಿಕಾರ ಪ್ರಧಾನಿಗೂ ಇಲ್ಲ : ಬಿ.ಸುರೇಶ್‍ಗೌಡ

ತುಮಕೂರು : 

     ತಾಲೂಕಿನ ಅರಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ವನಜಾಕ್ಷಮ್ಮ, ಉಪಾಧ್ಯಕ್ಷರಾಗಿ ಪ್ರೇಮಕುಮಾರಿ ಅವರುಗಳು ಆಯ್ಕೆಯಾಗಿದ್ದಾರೆ.

      ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಅರಕೆರೆ ಗ್ರಾಮಪಂಚಾ ಯಿತಿಯಲ್ಲಿ ಒಟ್ಟು 18 ಜನ ಸದಸ್ಯರಿದ್ದು,ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅರಕೆರೆ ಒಂದನೇ ವಾರ್ಡಿನ ಸದಸ್ಯೆ ವನಜಾಕ್ಷಮ್ಮ 14 ಸದಸ್ಯರ ಬೆಂಬಲದೊಂದಿಗೆ ಆಯ್ಕೆಯಾದರೆ,ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹೊಸಹಳ್ಳಿ ಕ್ಷೇತ್ರದ ಪ್ರೇಮಕುಮಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

      ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವನಜಾಕ್ಷಮ್ಮ,ತುಮಕೂರು ನಗರಕ್ಕೆ ಹತ್ತಿರದಲ್ಲಿರುವ ಅರಕೆರೆ ಗ್ರಾಮಪಂಚಾಯಿತಿಯನ್ನು ಮಾದರಿ ಗ್ರಾಮಪಂಚಾಯಿತಿಯಾಗಿ ರೂಪಿಸಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

      ಚುನಾಯಿತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶಗೌಡ, ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಇರುವ ಅಧಿಕಾರ ಪ್ರಧಾನಿಗೂ ಇಲ್ಲ. ಒಂದು ಚೆಕ್‍ಗೆ ಸಹಿ ಮಾಡುವ ಅಧಿಕಾರ ಇರುವುದು ಅಧ್ಯಕ್ಷರಿಗೆ ಮಾತ್ರ.ಇದು ಪ್ರಜಾಪ್ರಭುತ್ವದ ಸೌಂದರ್ಯ.ನಿಮ್ಮ ಗ್ರಾಮಪಂಚಾಯಿತಿ ಅಭಿವೃದ್ದಿಪಡಿಸುವ ಜವಾಬ್ದಾರಿಯನ್ನು ನಿಮಗೆ ನೀಡಲಾಗಿದೆ. ಇದರ ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ದಿಗೆ ದುಡಿಯಿರಿ ಎಂದು ಸಲಹೆ ನೀಡಿದರು.

   ಅರಕೆರೆ ಗ್ರಾಮಪಂಚಾಯಿತಿ ಸುತ್ತಮುತ್ತ ಕಲ್ಲಿನ ಕ್ವಾರೆಗಳು ನಡೆಯುತ್ತಿದು, ನಿಯಮ ಬದ್ದವಾಗಿ ನಡೆಯುತ್ತಿರುವ ಕ್ವಾರಿಗಳಿಗೆ ಮಾತ್ರ ಅವಕಾಶ ನೀಡಿ, ಕಾನೂನು ಬಾಹಿರ ಕಲ್ಲು ಗಣಿಗಾರಿಕೆಯನ್ನು ಮುಚ್ಚಿಸಿ ಎಂದು ಸಲಹೆ ನೀಡಿದ ಅವರು,ಕಾನೂನು ಬದ್ದವಾಗಿ ನಡೆಯುತ್ತಿರುವ ಕ್ವಾರಿಗಳ ಸಿ.ಎಸ್.ಆರ್. ಫಂಡ್‍ನಿಂದ ನಿಮ್ಮ ಭಾಗದ ಶಾಲೆ, ಅಂಗನವಾಡಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ, ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಿ.ಅಧಿಕಾರಿಗಳ ಮಾತಿಗೆ ತಲೆ ಆಡಿಸದೆ, ವಿಚಾರವಂತರಾಗಿ, ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಎಂದು ಮಾಜಿ ಶಾಸಕ ಸುರೇಶಗೌಡ ಕಿವಿ ಮಾತು ಹೇಳಿದರು.

      ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ರವೀಶ್ ಮಾತನಾಡಿ,ಅರಕೆರೆ ಗ್ರಾಮಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 14 ಸದಸ್ಯರು ಗೆಲುವು ಸಾಧಿಸಿದ್ದು, ಜನರ ಆಯ್ಕೆ ಮಾಡಿರುವ ಸದಸ್ಯರಲ್ಲಿ ಹಿರಿಯರಾದ ವನಜಾಕ್ಷಮ್ಮ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ವಿಶ್ವಾಸ ಗಳಿಸಿದ್ದಾರೆ.ಗ್ರಾಮಾಂತರ ಕ್ಷೇತ್ರದಲ್ಲಿ ಈ ಹಿಂದೆ ಸುರೇಶಗೌಡ ಅವರು ಶಾಸಕರಾಗಿದ್ದ ಕಾಲದಲ್ಲಿ ನಡೆದ ಅಭಿವೃದ್ದಿ ಕಾರ್ಯಗಳ ರೀತಿ, ಅರಕೆರೆ ಗ್ರಾಮಪಂಚಾಯಿತಿಯಲ್ಲಿಯೂ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ಇದಕ್ಕೆ ನಮ್ಮೆಲ್ಲರ ಸಹಕಾರ ವಿರುತ್ತದೆ.ಈ ಪಂಚಾಯಿತಿಯಲ್ಲಿ ಶೇ50ರಷ್ಟು ಯುವಕರೆ ಗೆಲುವು ಸಾಧಿಸಿದ್ದು, ಉತ್ತಮ ಕೆಲಸ ಆಗಲಿವೆ ಎಂಬ ನಂಬಿಕೆ ನಮ್ಮದು ಎಂದರು.

      ಈ ವೇಳೆ ಸದಸ್ಯರಾದ ಶಿವಕುಮಾರ್ ಎ.ಬಿ., ಅನಿಲ್, ನವೀನ್, ರಘು, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

(Visited 4 times, 1 visits today)

Related posts

Leave a Comment