ತುಮಕೂರು :

      ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ, ಚುನಾವಣೆಗೆ ಮೂರು ತಿಂಗಳಿದ್ದಾಗ ರಾಜಕಾರಣ ಮಾಡೋಣ ಈಗ ಅಭಿವೃದ್ಧಿಗೆ ಗಮನ ಹರಿಸೋಣ, 3-4 ತಿಂಗಳಲ್ಲಿ ಮತ್ತೆ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

      ಹೊನ್ನುಡಿಕೆ ಸರ್ಕಾರಿ ಶಾಲೆ ವಾರ್ಷಿಕೋತ್ಸವ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಮೈತ್ರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ತಂದು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

       ಶಿಥಿಲಗೊಂಡಿದ್ದ ಶಾಲೆಯನ್ನು ಅಭಿವೃದ್ಧಿಪಡಿಸುವಂತೆ ಕಳೆದ ವಾರ್ಷಿಕೋತ್ಸವದಲ್ಲಿ ಶಾಲೆಯ ಶಿಕ್ಷಕರು ಮನವಿ ಮಾಡಲಾಗಿತ್ತು, ಅದರಂತೆ ಶಾಲೆಗೆ ಮೂರು ಹೊಸ ಕಟ್ಟಡಗಳನ್ನು ಒಂದೇ ವರ್ಷದಲ್ಲಿ ಅಭಿವೃದ್ಧಿಪಡಿಸಿ ಉದ್ಘಾಟಿಸಲಾಗಿದೆ, ಹೊನ್ನುಡಿಕೆ ಸರ್ಕಾರಿ ಶಾಲೆಯನ್ನು ದತ್ತುಪಡೆದು ವಿಶೇಷವಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.

       ಖಾಸಗಿ ಕಂಪನಿಗಳ ಸಿಎಸ್‍ಆರ್ ಫಂಡ್ ಪಡೆದು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಸಂಸ್ಥೆಗಳೊಂದಿಗೆ ಮಾತನಾಡಿದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಹೈಟೆಕ್ ಶಾಲೆಯನ್ನು ನಿರ್ಮಾಣ ಮಾಡುತ್ತೇವೆ, ಶಾಸಕನಾಗಿ ಆಯ್ಕೆಯಾಗುವ ಮುಂಚೆ ನೀಡಿದ್ದ ಭರವಸೆಯನ್ನು ಈಡೇರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

       ಶಾಸಕನಾಗಿ ಆಯ್ಕೆಯಾದ ಮೇಲೆ ಸಾಸಲು-ಚಿಕ್ಕಕೊರಟಗೆರೆ ರಸ್ತೆಗೆ 11 ಕೋಟಿ, ಹೊನ್ನುಡಿಕೆ ಹ್ಯಾಂಡ್‍ಪೋಸ್ಟ್ ರಸ್ತೆ ಕಾಮಗಾರಿಗೆ 2 ಕೋಟಿ ಕಾಮಗಾರಿ, ಹೊಳವನಹಳ್ಳಿಯಿಂದ ಕುಣಿಗಲ್ ರಸ್ತೆಗೆ 1.5 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ, ಹೊನ್ನಾದೇವಿ ದೇಗುಲದ ರಸ್ತೆ ಅಭಿವೃದ್ಧಿಗೊಳಿಸಲು ಅನುದಾನ ನೀಡಿದ್ದು ನಾನು, ಅದರಂತೆ ಕೆಲಸ ಮಾಡಲಾಗಿದೆ, ಹೊನಸಿಗೆರೆ, ಮಸ್ಕಲ್, ಹೊನ್ನುಡಿಕೆ ಗ್ರಾಮಗಳಿಗೆ ತಲಾ ಕೋಟಿ ರೂ ಅನುದಾನವನ್ನು ತರಲಾಗಿದೆ ಎಂದರು.

      ನರುಗನಹಳ್ಳಿಗೆ 1.50. ಕೋಟಿ, ರಂಭಾಪುರ, ಬೇಗೂರು, ನಾಗವಲ್ಲಿ ಸರ್ಕಾರಿ ಕಾಲೇಜು, ಚೋಳಂಬಳ್ಳಿ, ವಡ್ಡರಹಳ್ಳಿ, ಲಕ್ಷ್ಮೀಪುರ, ಹೊನ್ನೇನಹಳ್ಳಿ ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ, ಚಿಕ್ಕಪುರ, ಲಕ್ಕೇನಹಳ್ಳಿ,ರಾಮನಹಳ್ಳಿ, ತೊಂಡಗೆರೆಯಲ್ಲಿ ಶುದ್ಧ ಕುಡಿಯುವ ನೀರು ಘಟಕ, ಹೊನ್ನುಡಿಕೆ ಜಿ.ಪಂ.ವ್ಯಾಪ್ತಿಯಲ್ಲಿ 38 ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದು ತಿಳಿಸಿದರು.

        ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು, ಎಲ್ಲ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗಿದೆ. ಸರ್ಕಾರದಿಂದ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಶ್ರೀಘ್ರದಲ್ಲಿ ಎಲ್ಲ ಬಡವರಿಗೆ ಮನೆ ಹಾಗೂ ನಿವೇಶನವನ್ನು ವಿತರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

      ಗ್ರಾಮಾಂತರ ಕ್ಷೇತ್ರದ 12 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ಕೊಡಿಸಲಾಗಿದ್ದು, ಅವರ ಸ್ವಸಾರ್ಮಥ್ಯದ ಮೇಲೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದಂತೆ ಆಗಿದೆ, ಚುನಾವಣೆ ಮುಂಚೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬದ್ಧನಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಬೇಧವನ್ನು ಬಿಟ್ಟು ಸಹಕರಿಸುವಂತೆ ಮನವಿ ಮಾಡಿದರು.

      ಈ ವೇಳೆ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷರಾದ ಹಾಲನೂರು ಅನಂತ್‍ಕುಮಾರ್, ನರುಗನಹಳ್ಳಿ ವಿಜಯ್‍ಕುಮಾರ್, ಸೇರಿದಂತೆ ಎಪಿಎಂಸಿ ಅಧ್ಯಕ್ಷರು, ಗ್ರಾಮ ಪಂಚಾಯ್ತಿ ಸದಸ್ಯರು, ವಿಎಸ್‍ಎಸ್‍ಎನ್ ಸದಸ್ಯರು ಸೇರಿದಂತೆ ಇತರರು ಭಾಗವಹಿಸಿದ್ದರು.

(Visited 85 times, 1 visits today)