ತುಮಕೂರು :

      `ಉಪಚುನಾವಣೆಯಲ್ಲಿ ಗೆದ್ದಿರುವವರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದನ್ನು ಕೇಂದ್ರದ ನಾಯಕರು ನಿರ್ಧರಿಸುತ್ತಾರೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

      ಚಿಕ್ಕನಾಯಕನಹಳ್ಳಿಯ ಕುಪ್ಪೂರು ಗದ್ದುಗೆ ಮಠದಲ್ಲಿ ನಡೆಯುತ್ತಿರುವ ಕುಪ್ಪೂರೊಡೆಯನ ಜಾತ್ರಾ ಮಹೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      `ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ 12ರಲ್ಲಿ ಬಿಜೆಪಿಗೆ ಗೆಲುವಾಗಿದೆ. ಗೆಲ್ಲದೆ ಇದ್ದಿದ್ದರೆ, ಇಷ್ಟು ಸಮಾಧಾನದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಮೂರುವರೆ ವರ್ಷ ಯಾವುದೇ ತಂಟೆ ತಕರಾರು ಇಲ್ಲದೆ ಕೆಲಸ ಮಾಡಬಹುದು’ ಎಂದು ಆಶಯ ವ್ಯಕ್ತಪಡಿಸಿದರು.

       `ಫೆಬ್ರುವರಿಯಲ್ಲಿ ಮಂಡಿಸುವ ಬಜೆಟ್‍ನಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಉದ್ದೇಶವಿದೆ. ರೈತರ ಸಂಕಷ್ಟಗಳನ್ನು ಬಗೆಹರಿಸುವುದಕ್ಕೆ ಆದ್ಯತೆ ನೀಡುತ್ತೇನೆ. ಜಾತಿ ಮತಗಳ ಬೇಧವಿಲ್ಲದೆ ಸೇವೆ ನೀಡುತ್ತಿರುವ ಸೇವೆ ಸಲ್ಲಿಸುತ್ತಿರುವ ಮಠದ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

      ಸಚಿವ ಆರ್.ಅಶೋಕ್  ಮಾತನಾಡಿ, `ರಾಜ್ಯದಲ್ಲಿ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನೆಲೆ ಇಲ್ಲದೆ ಅಲೆದಾಡುವ ಪ್ರೇತಾತ್ಮಗಳಾಗಿವೆ’ ಎಂದು ವ್ಯಂಗ್ಯವಾಡಿದರು.

        ಸಚಿವ ಮಾಧುಸ್ವಾಮಿ ಮಾತನಾಡಿ, `ಯಡಿಯೂರಪ್ಪನವರು ಕಳೆದ ಬಾರಿ ಮುಖ್ಯಮಂತ್ರಿ ಆದಾಗ ಜಿಲ್ಲೆಯ ನೀರಾವರಿಗೆ ?106 ಕೋಟಿ ಅನುದಾನ ಕೊಟ್ಟಿದ್ದರು. ಈ ಬಾರಿ ?206 ಕೋಟಿ ಅನುದಾನ ನೀಡಿದ್ದಾರೆ. `ಯಡಿಯೂರಪ್ಪನವರು ಸುಮಾರು 105 ದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಲ ಕಳೆದರು. ಇನ್ನು ಮುಂದೆ ಅವರ ನಡೆ ಬೇರೆಯಾಗಲಿದೆ. ಅವರಿಗೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

      ಶ್ಯಾಮನೂರು ಶಿವಶಂಕರಪ್ಪ, ಮಾತನಾಡಿ, ‘ಕುಪ್ಪೂರು ಗದ್ದುಗೆ ಮಠದಲ್ಲಿ ತ್ರಿಕಾಲ ಪೂಜೆ ನೆರವೇರುತ್ತದೆ. ವೀರಶೈವ ಸಮಾಜದ ಒಡಕಿನ ಸಮಯದಲ್ಲಿ ಗಟ್ಟಿಯಾಗಿ ನಿಂತಿದ್ದೆ. ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲ ಕೊಟ್ಟಿದ್ದ ಕಾರಣ ಜಯ ಸಿಕ್ಕಿತು’ ಎಂದರು. ಕುಪ್ಪೂರು ಗದ್ದುಗೆ ಮಠದ ಡಾ. ಯಥೀಶ್ವರ ಶಿವಾಚಾರ್ಯ ಸ್ವಾಮೀಜಿ, ‘ರಾಜ ಒಳ್ಳೆಯವನಾಗಿದ್ದರೆ ನಾಡು ಉತ್ತಮ ಮಳೆ, ಬೆಳೆಯಾಗಿ ಸಮೃದ್ಧವಾಗಿರುತ್ತದೆ. ಅದಕ್ಕೆ ಯಡಿಯೂರಪ್ಪನವರೆ ಸಾಕ್ಷಿ’ ಎಂದು ಹೇಳಿದರು.

      `ಯಡಿಯೂರಪ್ಪ ಅವರಿಗೆ ದೈವ ಶಕ್ತಿಯಿದೆ. ದೈವಶಕ್ತಿಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಮಠದ ಅಭಿವೃದ್ಧಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಅವರು ನೆರವಾಗಬೇಕು. ಮಠದಲ್ಲಿ ದಾಸೋಹ ಮಂದಿರ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ. ಅದಕ್ಕೆ ಸರ್ಕಾರದಿಂದ ಸಹಕಾರ ದೊರಕಬೇಕು’ ಎಂದು ಕೋರಿದರು.

      ಜಾತ್ರಾ ಮಹೋತ್ಸವಕ್ಕೆ ಬೆಳಗ್ಗೆಯಿಂದಲೇ ಕುಟುಂಬ ಸಮೇತವಾಗಿ ಭಕ್ತರು ತಂಡೋಪತಂಡವಾಗಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿದ್ದಾರೆ.

(Visited 18 times, 1 visits today)