ಟಿಪ್ಪು ಜಯಂತಿಯನ್ನು ವೈಭವದಿಂದ ಆಚರಿಸಲು ಕರೆ

ತಿಪಟೂರು:

      ಕನ್ನಡ ಮಾಸದಲ್ಲಿ ಟಿಪ್ಪು ಜಯಂತಿ ಬರುವುದು ಅವರು ಕನ್ನಡ ಭಾಷೆಯಲ್ಲಿ ಮೂಡಿಸಿದ ಛಾಪಿಗೆ ಸಾಕ್ಷಿಯಾಗಿದ್ದು, ಟಿಪ್ಪು ಕನ್ನಡದಲ್ಲಿ  ವಿಚಾರ ಮಂಡಿಸಿದ ಖ್ಯಾತಿ ಪಡೆದಿದ್ದರು. ಅಂತಹವರ ಜಯಂತಿಯನ್ನು ವೈಭವದಿಂದ ನೆರವೇರಿಸಬೇಕೆಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರೂ ಆಗಿರುವ ತಹಶೀಲ್ದಾರ್ ಡಾ. ವಿ. ಮಂಜುನಾಥ್ ಹೇಳಿದರು.

      ನಗರದ ತಾಲ್ಲೂಕು ಕಛೇರಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾವೈಕ್ಯತೆಯ ಸಮಾನತೆಗೆ ಸಾಕ್ಷಿ ಆಗಿದ್ದ ಮೈಸೂರಿನ ಹುಲಿ ಎಂದೇ ಖ್ಯಾತಿ ಹೊಂದಿದ್ದ ಹಜರತ್ ಟಿಪ್ಪುಸುಲ್ತಾನ್ ರ ಜಯಂತಿಯನ್ನು ಗೌರವಯುತವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ. ಜಯಂತಿಯಂದು ವಿಶೇಷ ವೇಷ, ಭೂಷಣದೊಂದಿಗೆ ಟಿಪ್ಪು ರವರ ವಿಚಾರಧಾರೆ, ಮತ್ತು ಕೊಡುಗೆಗಳ ಬಗ್ಗೆ ವಿಶ್ಲೇಷಣೆ ಮಾಡುವ ವೇದಿಕೆ ನಿರ್ಮಾಣವಾಗಬೇಕು. ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿಯನ್ನು ಆಚರಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ನ.10ರಂದು ನಿಗಧಿ ಆಗಿರುವ ಟಿಪ್ಪು ಜಯಂತಿಯನ್ನು ವೈಭವ ಮತ್ತು ಶ್ರದ್ದೆಯಿಂದ ಆಚರಿಸುವುದು ಎಲ್ಲರ ಕರ್ತವ್ಯ. ಇದಕ್ಕೆ ಸಮುದಾಯದ ಸಹಕಾರ ಮುಖ್ಯವಾಗಿದ್ದು ಸರ್ಕಾರಿ ಅಧಿಕಾರಿಗಳು ತಪ್ಪದೆ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಸೂಚಿಸಿದರು.

      ಡಿ.ವೈ.ಎಸ್.ಪಿ. ವೇಣುಗೋಪಾಲ್ ಮತ್ತು ನಗರ ಠಾಣೆಯ ಇನ್ಸ್‍ಪೆಕ್ಟರ್ ದೀಪಕ್ ಮಾತನಾಡಿ ಕಳೆದ ವರ್ಷ ಆಚರಿಸಿದಂತೆ ಯಾವುದೇ ಬದಲಾವಣೆ ಮಾಡದೇ ಜಯಂತಿ ಆಚರಿಸಿ. ಸಿ.ಸಿ. ಟಿ.ವಿ. ಕ್ಯಾಮರಾ ಅಳವಡಿಸಿರುವ ಕಡೆ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕದೇ, ಸಮಾರಂಭ ನಡೆಯುವ ಶಾದಿಮಹಲ್ ಮತ್ತು ಟಿಪ್ಪು ವೃತ್ತದ ಬಳಿ ಮಾತ್ರ ಫ್ಲೆಕ್ಸ್ ಅಳವಡಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಹಕರಿಸಿ ಎಂದು ಸಲಹೆ ಮಾಡಿದರು.

      ಸಭೆಯಲ್ಲಿ ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 10 ಮಂದಿಯನ್ನು ಸನ್ಮಾನ ಮಾಡಲು ನಿರ್ಧರಿಸಲಾಯಿತು. ಮತ್ತು ಇದೇ ಮೊದಲ ಬಾರಿ ಸರ್ಕಾರದಿಂದ ಸನ್ಮಾನಿತರಿಗೆ ಅಗತ್ಯ ಪ್ರಮಾಣ ಪತ್ರ ನೀಡಲು ತೀರ್ಮಾನಿಸಲಾಯಿತು.

      

(Visited 9 times, 1 visits today)

Related posts