ತುಮಕೂರು : 

      ಮಹಾನಗರ ಪಾಲಿಕೆ, ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘ ಹಾಗೂ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಂಟಿಯಾಗಿ ನಗರದ 19 ಮತ್ತು 20ನೇ ವಾರ್ಡಿನ ಮುಖಂಡರ ಸಭೆಯನ್ನು ಎನ್,ಆರ್ ಕಾಲೋನಿ ಶೈಕ್ಷಣಿಕ ಭವನದಲ್ಲಿ ಕರೆದು ಕೋವಿಡ್ 2ನೇ ಅಲೆಯ ಮುಂಜಾಗ್ರತೆ ಹಾಗೂ ಲಸಿಕೆ ಜಾಗೃತಿಗೆ ಸಂಬಂಧಿಸಿದಂತೆ ಮೇಯರ್ ಮತ್ತು ಆಯುಕ್ತರಿಂದ ಅರಿವಿನ ಕಾರ್ಯಕ್ರಮ ಮಾಡಲಾಯಿತು.

      ಸಭೆಯಲ್ಲಿ ಮೊದಲಿಗೆ ಕೋತಿತೋಪಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮಹೇಶ್ ಮತ್ತು ಪಾವನ ಆಸ್ಪತ್ರೆಯ ಡಾ. ಮುರುಳೀಧರ್ ಮಾತನಾಡಿ ಪ್ರತಿನಿತ್ಯ 2 ವಾರ್ಡ್‍ಗಳಿಂದ 50 ರಿಂದ 60 ಸೋಂಕಿತರು ಪತ್ತೆಯಾಗುತ್ತಿದ್ದು ಕೋವಿಡ್ 2ನೇ ಅಲೆಯಲ್ಲಿನ ಅಪಾಯದ ಬಗ್ಗೆ ತಿಳಿವಳಿಕೆಯಿಲ್ಲದ ಬಹುತೇಕ ಈ ಭಾಗದ ಬಡವರಿಗೆ ಚಿಕಿತ್ಸೆ ಪಡೆಯಲು ಕಷ್ಟವಾಗಿದೆ. ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬಂದಾಗ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಕೃತಕವಾಗಿ ಬೆಡ್ ಅಭಾವವನ್ನು ಸೃಷ್ಟಿಸಿ ಅಗತ್ಯವಿದ್ದವರು ಅಡ್ಮಿಟ್ ಆಗಲು ಒತ್ತಡ ಏರುತ್ತಿದ್ದು ಅಗತ್ಯವಿರುವವರಿಗೆ ಬೆಡ್ ಸಿಗದಿರುವುದು ಕಾರಣವಾಗಿದೆ. ಹಾಗಾಗಿ ಎಲ್ಲರು ಲಸಿಕೆಯನ್ನು ಪಡೆಯಲು ಜಾಗೃತಿ ಕೈಗೊಳ್ಳಬೇಕೆಂದರು.

       ನಂತರ ಪ್ರೊ ಕೆ,ದೊರೈರಾಜ್ ಮಾತನಾಡಿ ಸ್ಲಂಗಳಲ್ಲಿ ಸೋಂಕಿಗೆ ಒಳಗಾದವರು ಮನೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಅಂತವರಿಗೆ ನಗರ ಪಾಲಿಕೆಯಿಂದ ವಲಯವಾರು ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಿ ಕೈಲಾಗದ ಬಡವರ ಚಿಕಿತ್ಸಾ ವೆಚ್ಚವನ್ನು ನಗರ ಪಾಲಿಕೆಯಿಂದ ಭರಿಸಲು ಮೇಯರ್ ಮತ್ತು ಆಯುಕ್ತರು ಕ್ರಮವಹಿಸುವಂತೆ ಕೋರಿದರು.

       20ನೇ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಎ.ಶ್ರೀನಿವಾಸ್ ಮತ್ತು 19ನೇ ವಾರ್ಡಿನ ಮುಖಂಡರಾದ ಶೆಟ್ಟಾಳಯ್ಯ ಮಾತನಾಡಿ ಎನ್.ಆರ್ ಕಾಲೋನಿಯಲ್ಲಿ ತಿಳುವಳಿಕೆಯ ಕೊರತೆಯಿಂದ ಲಸಿಕೆ ಪಡೆಯಲು ಜನರು ಗೊಂದಲದಲ್ಲಿ ಸಿಲುಕಿದ್ದು ಅರಿವು ಮೂಡಿಸುವ ಅಗತ್ಯವಿದ್ದು ಕೋವಿಡ್ ಪರೀಕ್ಷೆ ಪಲಿತಾಂಶವನ್ನು ತುರ್ತಾಗಿ ನೀಡಲು ಆರೋಗ್ಯ ಇಲಾಖೆ ಕ್ರಮ ವಹಿಸುವಂತೆ ಒತ್ತಾಯಿಸಿದರು. ಸ್ಲಂ ಜನಾಂದೋಲನ ಕರ್ನಾಟಕದ ಎ,ನರಸಿಂಹಮೂರ್ತಿ ಮಾತನಾಡಿ ಕೊಳಗೇರಿಗಳಲ್ಲಿ ಜನಸಾಂದ್ರತೆ ಮತ್ತು ಒತ್ತೊತ್ತಾದ ಮನೆಗಳಿರುವುದರಿಂದ ಹೋಮ್ ಐಶೋಲೇಷನಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಅಂತವರ ಯೋಗಕ್ಷೇಮ ವಿಚಾರಿಸಲು ಸ್ವಯಂ ಕಾರ್ಯಕರ್ತರಾಗಿ ಕೊಳಗೇರಿ ಸಮಿತಿ ಮತ್ತು ಎನ್,ಆರ್ ಕಾಲೋನಿ ಅಭಿವೃದ್ಧಿ ಸಂಘದಿಂದ ಸಹಕಾರ ನೀಡಲು ಸಿದ್ಧವಾಗಿದ್ದು ನಗರ ಪಾಲಿಕೆ ಅಗತ್ಯ ಬೆಂಬಲವನ್ನು ನೀಡುವಂತೆ ಕೋರಿದರು.
ನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಈಗಾಗಲೇ ನಗರಪಾಲಿಕೆ ಮತ್ತು ಜಿಲ್ಲಾಡಳಿತದಿಂದ ಕ್ಯಾತ್ಸಂದ್ರ ಕೋವಿಡ್ ಸೆಂಟರ್‍ನಲ್ಲಿ 200 ಬೆಡ್‍ಗಳ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು ಕೊಳಗೇರಿಗಳಲ್ಲಿ ಹೋಂ ಐಸೋಲೇಷನ್ ಸಾಧ್ಯವಿಲ್ಲ. ಆದರು ಮನೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಮಾರ್ಗದರ್ಶನ ನೀಡಲು ವಾರ್ಡ್ ಮಟ್ಟದಲ್ಲಿ ಸ್ವಯಂ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಸೋಂಕಿಗೊಳಪಟ್ಟವರಿಗೆ ಔಷಧಿಗಳನ್ನು ಮತ್ತು ಪಲ್ಸ್ ಪರೀಕ್ಷೆಯನ್ನು ಪರಿಶೀಲಿಸುವ ಕಾಲಕಾಲಕ್ಕೆ ಮಾಡುವ ಮಾರ್ಗದರ್ಶನ ನೀಡಿ ಈ ಎರಡು ವಾರ್ಡ್‍ಗಳಿಗೆ ಸಂಬಂಧಿಸಿದಂತೆ ಲಸಿಕೆ ಪಡೆಯಲು ನಾಗರೀಕರಿಗೆ ನಗರ ಪಾಲಿಕೆ ಮತ್ತು ಈ ಭಾಗದ ಸಂಘ ಸಂಸ್ಥೆಗಳ ಮೂಲಕ ಅರಿವು ಕೈಗೊಳ್ಳಲಾಗುವುದು ಎಂದರು.

       ಹಿರಿಯ ಮುಖಂಡರಾದ ನರಸಿಂಹಯ್ಯ ಮಾತನಾಡಿ ಸರ್ಕಾರ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದರು ನಾಗರೀಕರ ಸಹಕಾರ ನಿರೀಕ್ಷಿತ ಮಟ್ಟದಲ್ಲಿಲ್ಲ ಆದ್ದರಿಂದ ಈ ಎರಡು ವಾರ್ಡ್‍ಗಳಲ್ಲಿ ಬರುವ ಎಲ್ಲಾ ಸಮುದಾಯಗಳನ್ನೊಳಗೊಂಡ ಮುಖಂಡರ ಸಹಕಾರದೊಂದಿಗೆ ಲಸಿಕೆ ಪಡೆಯುವವರ ಪಟ್ಟಿ ಸಿದ್ದಗೊಳಿಸಿ ಹಂತಹಂತವಾಗಿ ಹಾಕಿಸಲು ಸಹಕರಿಸುವುದಾಗಿ ಹೇಳಿದರು.

       ನಂತರ ಮಹಾಪೌರರಾದ ಬಿ.ಜಿ ಕೃಷ್ಣಪ್ಪ ಮಾತನಾಡಿ ನಗರಪಾಲಿಕೆಯಿಂದ ಕೊಳಗೇರಿಗಳಲ್ಲಿ ವ್ಯಾಕ್ಸಿನೇಷನ್ ಪಡೆಯಲು ಜಾಗೃತಿ ಕೈಗೊಳ್ಳಲಾಗುವುದು. ಏಕೆಂದರೆ ಈ ಸಾಂಕ್ರಾಮಿಕಕ್ಕೆ ನಿರ್ಧಿಷ್ಟ ಔಷಧಿ ಸಿಗುವವರೆಗೂ ಬಡವರ ಆರೋಗ್ಯ ಕಾಪಾಡಲು ಲಸಿಕೆ ಪಡೆಯುವುದು ಅಗತ್ಯವಾಗಿದೆ. ಈ ಸೋಂಕಿಗೆ ತುತ್ತಾದ ಅಸಹಾಯಕರು ಮತ್ತು ಚಿಕಿತ್ಸೆ ಭತ್ಯೆ ಬರಿಸಲು ಸಾಧ್ಯವಾಗದ ಸ್ಲಂ ನಿವಾಸಿಳಿಗೆ ಹಾಗೂ ಬಡವರಿಗೆ ಮೇಯರ್ ಅನುಧಾನ ಮತ್ತು 24.10%. 7.25 ಅನುಧಾನಗಳಲ್ಲಿ ವೆಚ್ಚ ಬರಿಸಲು ಕ್ರಮವಹಿಸುವುದಾಗಿ ಹೇಳಿದರು. ಹಾಗೂ 35ವಾರ್ಡ್‍ಗಳ ಎಲ್ಲಾ ಕೊಳಗೇರಿಗಳಲ್ಲಿ ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗುವುದೆಂದರು.

      ಸಭೆಯಲ್ಲಿ ಉಪಮಹಾಪೌರರಾದ ನಾಜೀಮಾಬಿ ಮಾಜಿ ನಗರ ಸಭೆ ಉಪಾಧ್ಯಕ್ಷರಾದ ನರಸೀಯಪ್ಪ, ನಗರಾಭಿ ವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಜಯಮೂರ್ತಿ ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ.ಪಿ ಅಂಜಿನ್‍ಮೂರ್ತಿ, ಎನ್,ಆರ್ ಕಾಲೋನಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಕೆ,ನರಸಿಂಹಮೂರ್ತಿ. ಎನ್.ರಾಜಣ್ಣ, ಮಲ್ಲಿಕಾರ್ಜುನಯ್ಯ, ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ಅರುಣ್, ತೇಜಸ್, ಮೋಹನ್ ಅಂಬೇಡ್ಕರ್ ನಗರ ಮುಖಂಡರಾದ ಗೋಪಾಲ್, ನಿರ್ವಾಣಿ ಲೇಔಟ್ ಮುಖಂಡ ರಾಮು, ಎನ್,ಆರ್ ಕಾಲೋನಿ ಪಿ,ಎನ್, ರಾಮಯ್ಯ, ದೇವರಾಜ್, ಚಂದ್ರು, ಲೋಕೇಶ್, ಹರೀಶ್ ಪಾಲ್ಗೊಂಡಿದ್ದರು.

(Visited 16 times, 1 visits today)