ತುಮಕೂರು:
ಮತದಾರರು ತಮ್ಮ ಮತದಾರರ ಪಟ್ಟಿಯಲ್ಲಿನ ಹೆಸರು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲನೆ ಮಾಡಿಕೊಳ್ಳಲು ನಾಗರಿಕ ಸೇವಾ ಕೇಂದ್ರದಲ್ಲೂ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಸಿಎಸ್‍ಸಿ ಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಚುನಾವಣಾ ಆಯೋಗ ಪ್ರತಿವರ್ಷವು ಚುನಾವಣಾ ವಿಭಾಗದಿಂದ ಮತದಾರರ ಪಟ್ಟಿಯನ್ನು ಬಿಎಲ್‍ಒ ಹಾಗೂ ವಿವಿಧ ಅಧಿಕಾರಿಗಳು ಮನೆ ಮನೆಗೂ ಹೋಗಿ ಪರಿಶೀಲನೆ ನಡೆಸುತ್ತಿದ್ದರು. ಈ ವರ್ಷದಿಂದ ವಿವಿಧ ಸೇವೆಗಳ ಜೊತೆಗೆ ನಾಗರಿಕ ಸೇವಾ ಕೇಂದ್ರದಲ್ಲಿ ಮತದಾರರ ಪಟ್ಟಿ ಪರಿಶೀಲನೆಯನ್ನೂ ಸಹ ಮಾಡಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಾದ್ಯಂತ ಈಗಾಗಲೇ 165 ನಾಗರಿಕ ಸೇವಾ ಕೇಂದ್ರಗಳು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಾ ಹಲವು ಸೇವೆಗಳನ್ನು ಒದಗಿಸುತ್ತಿವೆ. ಈ ವರ್ಷದಿಂದ ವಿವಿಧ ಸೇವೆಗಳ ಜೊತೆಗೆ ನಾಗರಿಕ ಸೇವಾ ಕೇಂದ್ರದಲ್ಲಿ ಮತದಾರರ ಪಟ್ಟಿ ಪರಿಶೀಲನೆಯ ಕಾರ್ಯವನ್ನು ಮಾಡಲು ಸೂಚಿಸಲಾಗಿದ್ದು, ಬೇರೆ ನಾಗರಿಕ ಸೇವೆಗೆ ಬಂದಂತಹ ನಾಗರಿಕರಿಗೆ ಮತದಾರರ ಪಟ್ಟಿ ಪರಿಶೀಲನೆ ನಡೆಸುವ ಕುರಿತು ಸಿಎಸ್‍ಸಿಗಳು ಪ್ರಚಾರ ಮಾಡಬೇಕು. ಹೆಚ್ಚಿನ ಪ್ರಚಾರಕ್ಕಾಗಿ ನಾಗರಿಕ ಸೇವಾ ಕೇಂದ್ರದಲ್ಲಿ ಈ ಸೇವೆಗೆ ಸಂಬಂಧಪಟ್ಟ ಬ್ಯಾನರ್ ಮತ್ತು ಕರಪತ್ರಗಳನ್ನು ಕೊಡಲಾಗುವುದು ಎಂದರು.
ನಾಗರಿಕ ಸೇವಾ ಕೇಂದ್ರದಲ್ಲಿ ಮತದಾರರ ಪಟ್ಟಿ ಪರಿಶೀಲನೆಗೆ ಬೇಕಾದ ತಂತ್ರಾಂಶ, ಮೊಬೈಲ್ ಆಪ್ ಈಗಾಗಲೇ ಸಿದ್ದಪಡಿಸಲಾಗಿದ್ದು, ಮತದಾರರು ತನ್ನ ಹೆಸರು ವಿಳಾಸ ದೂರವಾಣಿ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಸಿಎಸ್‍ಸಿ ಸಿಬ್ಬಂದಿಗಳು ಪರಿಶೀಲನೆ ಮಾಡಿ ದೃಢೀಕರಣ ಮಾಡಿಕೊಟ್ಟು ನಾಗರಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.
ಸಭೆಯಲ್ಲಿ ನಾಗರಿಕ ಸೇವಾ ಕೇಂದ್ರದ ಸಿಬ್ಬಂದಿಗಳು, ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಮಿಥುನ್, ಶಿರಸ್ತೆದಾರ ನಾಗಭೂಷಣ್ ಹಾಜರಿದ್ದರು.