ತುಮಕೂರು:

        ಮಂಗಳವಾರ ಪ್ರಕಟವಾದ 5 ರಾಜ್ಯಗಳ ವಿಧಾನಸಭಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಪಡೆದಿದ್ದು, ಇದು ದೇಶದ ಜನ ಮೋದಿ ಅವರ ಆಡಳಿತವನ್ನು ತಿರಸ್ಕರಿಸಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದರು.

      ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಪಕ್ಷ ಛತ್ತಿಸ್‍ಗಡ ಮತ್ತು ರಾಜಸ್ಥಾನದಲ್ಲಿ ಸರಳ ಬಹುಮತ ಪಡೆಯುವ ಮೂಲಕ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದ್ದು, ಮಧ್ಯಪ್ರದೇಶದಲ್ಲಿಯೂ ಸಹ ನಮ್ಮ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು ಈಗಾಗಲೇ ಬಿಎಸ್‍ಪಿ ಮತ್ತು ಎಸ್‍ಪಿ ಪಕ್ಷಗಳು ಕಾಂಗ್ರೆಸ್‍ಗೆ ಬೆಂಬಲ ವ್ಯಕ್ತಪಡಿಸುವ ಭರವಸೆ ನೀಡಿರುವುದರಿಂದ ಮಧ್ಯಪ್ರದೇಶದಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅಭಿಪ್ರಾಯಪಟ್ಟರು.

      ಐದು ರಾಜ್ಯಗಳ ಚುನಾವಣಾ ಫಲಿತಾಂಶ 2019ರಲ್ಲಿ ಬರುವ ಲೋಕಸಭಾ ಚುನಾವಣಾ ದಿಕ್ಸೂಚಿಯಾಗಿದ್ದು, 2014ರ ಚುನಾವಣಾ ಪೂರ್ವದಲ್ಲಿ ಎನ್‍ಡಿಎ ನೀಡಿದ್ದ ಭರವಸೆಗಳು ಈಡೇರದ ಹಿನ್ನಲೆಯಲ್ಲಿ ಜನರು, ಕಾಂಗ್ರೆಸ್‍ನತ್ತ ಒಲವು ತೋರಿರುವುದು ಈ ಫಲಿತಾಂಶ ಸ್ಪಷ್ಟ ಸೂಚನೆಯಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಸಹ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರು ಒಗ್ಗೂಡಿ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡುವ ಮೂಲಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಶ್ರಮಿಸುವುದಾಗಿ ಡಾ.ರಫೀಕ್ ಅಹಮದ್ ತಿಳಿಸಿದರು.

      ಕೇಂದ್ರ ಸರ್ಕಾರ ಜನತೆಯ ಆಶಯದಂತೆ ಬೆಲೆ ಏರಿಕೆ ನಿಯಂತ್ರಣ, ಇಂಧನ ಬೆಲೆಗಳ ಹೆಚ್ಚಳ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳ ನಿಯಂತ್ರಿಸುವಲ್ಲಿ ವಿಫಲವಾಗಿರುವುದು, ಬಿಜೆಪಿ ವಿರುದ್ಧ ಮತ ಹಾಕಲು ಪ್ರಮುಖ ಕಾರಣವಾಗಿದೆ. ಅಲ್ಲದೇ ನೋಟು ಅಮಾನೀಕರಣ ಜಿಎಸ್‍ಟಿಯಿಂದ ಜನ ಸಾಮಾನ್ಯರ ಮೇಲೆ ಅಪಾರ ಹೊರೆಯಾಗಿದ್ದು, ಇದರ ವಿರುದ್ಧ ಜನ ಮತ ಚಲಾಯಿಸಿರುವುದು ಸ್ಪಷ್ಟವಾಗಿದೆ ಎಂದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಜನರಿಗೆ  ಅಚ್ಛೇದಿನ್ ಭರವಸೆ ನೀಡಿದ್ದ ಬಿಜೆಪಿಗೆ ನಿಜವಾದ ಅಚ್ಛೇದಿನ್ ಈಗ ಶುರುವಾಗಿದೆ. ಅಧಿಕಾರದಲ್ಲಿದ್ದ ಮೂರು ರಾಜ್ಯಗಳಲ್ಲಿ ಮತದಾರರಿಂದ ತಿರಸ್ಕಾರಗೊಳ್ಳುವ ಮೂಲಕ ಕಾಂಗ್ರೆಸ್ ಮುಕ್ತ ಭಾರತಕ್ಕೆ ಬದಲಾಗಿ, ಬಿಜೆಪಿ ಮುಕ್ತ ಭಾರತಕ್ಕೆ ಜನರು ಮುನ್ನುಡಿ ಬರೆದಿದ್ದಾರೆ.2019 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿಯುವುದಕ್ಕೆ ಸ್ಪಷ್ಟ ಹೆಜ್ಜೆಯನ್ನು ಪಕ್ಷ ಇಟ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಎಲ್ಲಾ ಮತದಾರರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

     ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಜಿ.ಎಸ್.ಟಿ, ನೋಟು ಅಮಾನೀಕರಣ, ಇಂಧನ ಬೆಲೆಗಳ ಹೆಚ್ಚಳದಿಂದ ಜನರು ಅನುಭವಿಸಿದ್ದ ನೋವನ್ನು ಬಿಜೆಪಿ ವಿರುದ್ದ ಮತ ಚಲಾಯಿಸುವ ಮೂಲಕ ಜನರು ತೀರಿಸಿಕೊಂಡಿದ್ದಾರೆ. ಮುಂದಿನದಿನಗಳಲ್ಲಿ ಕರ್ನಾಟಕದಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದರು.

      ವಿಜಯೋತ್ಸವದಲ್ಲಿ ಪಾಲಿಕೆ ಸದಸ್ಯರಾದ ಸೈಯದ್ ನಯಾಜ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಬೂಬ್ ಪಾಷ, ಆಟೋ ರಾಜು, ಉಪಾಧ್ಯಕ್ಷೆ ಮರಿಚನ್ನಮ್ಮ, ಟಿ.ಬಿ.ಮಲ್ಲೇಶ್,ನರಸಿಂಹಮೂರ್ತಿ, ಚಂದ್ರಯ್ಯ, ಮಂಜುನಾಥ್, ನಟರಾಜಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಫಲಿತಾಂಶ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

(Visited 13 times, 1 visits today)