ತುಮಕೂರು


ನಾನು ಸ್ಲಂ ನಿವಾಸಿಗಳ, ಪೌರಕಾರ್ಮಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದೇನೆ, ನನ್ನ ಆಯೋಗದ ವರದಿಯಲ್ಲೂ ಉಲ್ಲೇಖಿಸಿದ್ದೇನೆ, ನಗರದಲ್ಲಿ ಶೇಕಡ 48 ರಷ್ಟು ಜನ ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಕೊಳಗೇರಿ ಜನರಿಗೆ ಭೂಮಿ ಒಡೆತನ ಜನಸಂಖ್ಯೆಗೆ ಅನುಗುಣವಾಗಿ ಪಾಲು ನೀಡಬೇಕು. ಸಂವಿಧಾನದ ಸಿದ್ದಾಂತದಲ್ಲಿ ನೀವು ಸಂಘಟನೆ ಮಾಡುತ್ತಿದ್ದು ನಿಮ್ಮ ಹೋರಾಟದಲ್ಲಿ ನಾನು ಬಾಗಿಯಾಗಿದ್ದೇನೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾದೀಶರಾದ ಹೆಚ್.ಎನ್ ನಾಗಮೋಹನ್‍ದಾಸ್‍ಹೇಳಿದರು.
ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ಸಾವಿತ್ರಿ ಬಾಪುಲೆ ಯರವ 192ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದು “ವರ್ತಮಾನದಲ್ಲಿ ಸ್ಲಂ ಜನರು ಮತ್ತು ಸಂವಿಧಾನ” ಕುರಿತು ರಾಜ್ಯ ಪ್ರತಿನಿಧಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಸ್ಥಿತಿಗತಿಗಳು,ಸಮಸ್ಯೆಗಳು ನಮಗೆ ಅರ್ಥವಾಗುತ್ತವೆ, ಇವತ್ತು ನೀವು ಇಟ್ಟಿರುವ ಬೇಡಿಕೆಗಳು ಸಂವಿಧಾನಬದ್ದ ನ್ಯಾಯ ಸಮ್ಮತವಾದ ಬೇಡಿಕೆಗಳು, ಕಿವಿ ಕಣ್ಣು ಹೃದಯ ಇರುವಂತಹ ಯಾವುದೇ ಸರ್ಕಾರ ನಿಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಎರಡು ವರ್ಷಗಳ ಹಿಂದೆ ಎಸ್.ಸಿ/ಎಸ್,ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ನನ್ನ ನೇತೃತ್ವದಲ್ಲಿ ಆಯೋಗದವನ್ನು ರಚಿಸಲಾಯಿತು. ಕಳೆದ 73 ವರ್ಷಗಳಿಂದ ಮೀಸಲಾತಿ ಇದೆ ಆದರೆ ಮೀಸಲಾತಿ ಕೆಲವು ಜನ ಸಮುದಾಯಗಳಿಗೆ ಅದರಲ್ಲೂ ಕೊಳಗೇರಿ ನಿವಾಸಿಗಳಿಗೆ ಸಿಗಲೇ ಇಲ್ಲಾ. ಯಾಕೆ ಸಿಗಲಿಲ್ಲ ಎಂದು ಅಧ್ಯಯನ ನಡೆಸಿದಾಗ ನಮಗೆ ಗೊತ್ತಾದದ್ದು ಆದಿವಾಸಿಗಳು,ಸಫಾಯಿ ಕರ್ಮಚಾರಿಗಳು, ಸ್ಲಂ ಜನರು ಅಲೆಮಾರಿಗಳಿಗೆ ಪ್ರಾಥಮಿಕ ಶಿಕ್ಷಣನೇ ಇಲ್ಲಾ. 10ನೇ ತರಗತಿಯನ್ನೂ ತಲುಪಿಲ್ಲ, ಸಫಾಯಿ ಕರ್ಮಚಾರಿ ಮತ್ತು ಸ್ಲಂ ನಿವಾಸಿಗಳ ಮಕ್ಕಳ ಅಭಿವೃದ್ಧಿಗೆ ಎಸ್.ಸಿ.ಪಿ ಬಜೇಟ್‍ನಲ್ಲಿ ಶೇಕಡ 10 ರಷ್ಟನ್ನು ಮೀಸಲಿಡಬೇಕು. ಆಗ ಮಾತ್ರ ಸ್ಲಂ ಜನರಿಗೆ ಸಾಮಾಜಿಕ ನ್ಯಾಯ ದೊರೆಯುತ್ತದೆ. ಶೈಕ್ಷಣಿಕ. ಆರ್ಥಿಕವಾಗಿ ಮುಂದುವರೆಯುವುದಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಂಚಿತ ಸಮುದಾಯಗಳ ರಕ್ಷಣೆಗೆ ಸ್ಲಂ ಜನರ ಐಕ್ಯ ಹೋರಾಟ ಕಟ್ಟಬೇಕು. ಆಗ ಮಾತ್ರ ಘನತೆಯ ಬದುಕು ದಕ್ಕಲು ಸಾಧ್ಯ ಎಂದರು.
ನಗರೀಕರಣ ಸ್ಲಂ ಜನರ ನಾಗರೀಕತ್ವವನ್ನು ನಿರಾಕರಿಸುತ್ತದೆ- ಶಿವಸುಂದರ್
ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿದ ಸಾಮಾಜಿಕ ಚಿಂತಕರಾದ ಶಿವಸುಂದರ್, ಸಂವಿಧಾನದ ಪ್ರಧಾನ ಆಶಯ ಕಲ್ಯಾಣ ರಾಜ್ಯ, ಆದರೆ ಇಂದು ಕಾರ್ಪೋರೇಟ್ ರಾಜ್ಯವಾಗಿ ಬದಲಾಗುತ್ತಿದ್ದು, ನಗರೀಕರಣ ಸಂವಿಧಾನ ಮತ್ತು ಸ್ಲಂ ಜನರ ವಿರೋಧಿಯಾಗದೇ ಕೊಳಗೇರಿಗಳನ್ನು ಹೆಚ್ಚು ಮಾಡದಂತಹ ಅಭಿವೃದ್ಧಿಯನ್ನು ಕೈಗೊಳ್ಳಬೇಕು. ಸ್ಲಂ ಜನರಿಗೆ ನಾಗರೀಕತ್ವವನ್ನು ನಿರಾಕರಿಸಲಾಗುತ್ತಿದೆ. ಸ್ಲಂ ಅಭಿವೃದ್ಧಿಯನ್ನು ನಾನ್ ರೆವಿನ್ಯೂ ವಲಯಗಳೆಂದು ಪರಿಗಣಿಸಿದೆ. ಹಿಂದಿನ ಸರ್ಕಾರ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನಾಳೆ ಕೊಡುತ್ತೇವೆ ಎಂದು ಹೇಳುತ್ತಿದ್ದರು. ಈಗಿನ ಸರ್ಕಾರ ಇಲ್ಲವೆಂದೇ ನೇರವಾಗಿ ಹೇಳುತ್ತಿದ್ದಾರೆ. ಬಡವರ ಮೇಲೆ ಬರುವ ದಿನಗಳಲ್ಲಿ ಶ್ರೀಮಂತರು ಯುದ್ಧ ಸಾರುತ್ತಾರೆ. ಸ್ಲಂಗಳ ಅಭಿವೃದ್ಧಿಗೆ ಖಾಸಗಿಯವರಿಗೆ ನೀಡುತ್ತಿದ್ದು. ಇದು ಸಾಮಾಜಿಕ ನ್ಯಾಯದ ನಗರಗಳಾಗುವ ಸಾದ್ಯವಿಲ್ಲ. ನಗರಗಳಲ್ಲಿ ಬಡತನ ದಾರುಣವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಗರೀಕರಣ ಸ್ಲಂಗಳನ್ನು ದ್ವಗುಣಗೊಳಿಸುವ ಹಂತಕ್ಕೆ ಹೋಗುವುದರಿಂದ ನಗರ ಕೇಂದ್ರಿತ ಚಳುವಳಿಗಳಿಂದ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಸಾದ್ಯ ಎಂದರು.
ಅಧ್ಯಕ್ಷತೆಯನ್ನು ಸಾಹಿತಿ ಡಾ.ದು.ಸರಸ್ವತಿ ವಹಿಸಿದ್ದರು. ಪ್ರಾಸ್ತಾವಿಕ ಮಾತುಗಳನ್ನು ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಆಡಿದರು, ಸ್ವಾಗತವನ್ನು ಚಂದ್ರಮ್ಮನವರು. ನಿರೂಪಣೆಯನ್ನು ತೇಜಸ್‍ಕುಮಾರ್, ಮತ್ತು ವಂದನಾರ್ಪಣೆಯನ್ನು ಜನಾರ್ಧನ್‍ರವರು ನೆರವೇರಿಸಿದರು. ತುಮಕೂರು ಸ್ಲಂ ಸಮಿತಿಯ ಅರುಣ್ ಕಲಾ ತಂಡದಿಂದ ಕ್ರಾಂತಿ ಗೀತೆಗಳನ್ನು ಹಾಡಲಾಯಿತು. ರಾಜ್ಯದ 16 ಜಿಲ್ಲೆಗಳ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

(Visited 8 times, 1 visits today)