ಗುಬ್ಬಿ :

      ನೀರು ಇಂಗಿಸಿ ಅಂತರ್ಜಲ ವೃದ್ಧಿ ಮಾಡುವ ಯೋಜನೆಗಳಲ್ಲಿ ಬಚ್ಚಲುಗುಂಡಿ ಯೋಜನೆ ಕೂಡಾ ವಿಶೇಷ ಅಭಿಯಾನವಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 50 ಗುಂಡಿಗಳ ಕಾಮಗಾರಿ ನಡೆಸಲು ಸರ್ಕಾರ ಮುಂದಾಗಿದೆ. ಈ ವಿಶೇಷ ಅಭಿಯಾನ ಅನುಷ್ಠಾನಕ್ಕೆ ಸಮುದಾಯ ಸಹಕಾರ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ ತಿಳಿಸಿದರು.

      ತಾಲ್ಲೂಕಿನ ಎಂ.ಎಚ್.ಪಟ್ಟಣ ಗ್ರಾಮದಲ್ಲಿ ಶುಕ್ರವಾರ ಸಾಂಕೇತಿಕವಾಗಿ ಆರಂಭವಾದ ಬಚ್ಚಲುಗುಂಡಿ ಅಭಿಯಾನ ಅನುಷ್ಠಾನಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಉದ್ಯೋಗ ಖಾತ್ರಿ ಯೋಜನೆಗೆ ಮರು ರೂಪ ನೀಡುತ್ತಿರುವ ಹಲವು ಯೋಜನೆಯಲ್ಲಿ ಈ ಬಚ್ಚಲುಗುಂಡಿ ಯೋಜನೆ ಕೂಡಾ ಒಂದಾಗಿದೆ. ಈ ಜತೆಯಲ್ಲಿ ಪೌಷ್ಠಿಕ ತೋಟ ನಿರ್ಮಾಣ, ಅಣಬೆ ಬೇಸಾಯ ಶೆಡ್ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ ಎಂದರು.

      ಬಚ್ಚಲುಗುಂಡಿ ಕಾಮಗಾರಿಗೆ ಸರ್ಕಾರ 17 ಸಾವಿರ ರೂಗಳನ್ನು ಪಂಚಾಯಿತಿ ಮೂಲಕ ನೀಡಲಿದೆ. ಎನ್‍ಆರ್‍ಇಜಿಎ ಯೋಜನೆ ಮೂಲಕ ಇದರ ಉಪಯೋಗ ಪಡೆದುಕೊಳ್ಳಲು ಗ್ರಾಮಸ್ಥರು ಮುಂದಾಗಬೇಕು. ಬಚ್ಚಲುಗುಂಡಿ ಐದು ಆಡಿಗಳ ಅಗಲದಲ್ಲಿ ಆರು ಅಡಿಗಳ ಆಳದ ಗುಂಡಿ ನಿರ್ಮಾಣವಾಗಲಿದೆ. ತಾಂತ್ರಿಕವಾಗಿ ಜಲ್ಲಿ ಕಲ್ಲು ಬಳಕೆ ಬಗ್ಗೆ ತಿಳಿಸಲಾಗುತ್ತದೆ. ಈ ಗುಂಡಿ ನಿರ್ಮಾಣದಿಂದ ಕುಟುಂಬದ ಆರೋಗ್ಯ ಸುಧಾರಿಸಲಿದೆ. ಸುತ್ತಲಿನ ಪರಿಸರ ಸುಂದರವಾಗಲಿದೆ. ಸಾಂಕ್ರಾಮಿಕ ರೋಗದಿಂದ ದೂರ ಉಳಿಯಬಹುದಾಗಿದೆ ಎಂದರು.

      ತಾಂತ್ರಿಕ ಸಲಹೆಗಾರ ಚಿಕ್ಕರಂಗಯ್ಯ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಮೂಲಕ 100 ದಿನಗಳ ಕೆಲಸ ಗ್ಯಾರಂಟಿ ಪಡೆಯಬಹುದಾಗಿದೆ. ದಿನಕ್ಕೆ 275 ರೂಗಳಂತೆ ಹೆಣ್ಣು ಗಂಡಿಗೆ ಸಮಾನ ಕೂಲಿ ಒದಗಿಸಲಾಗುವುದು. ಕಾಮಗಾರಿ ಪಡೆಯಲು ಮಿತ್ರ ಆಪ್ ಬಳಕೆ ಮಾಡಬಹುದಾಗಿದೆ. ಕೊರೊನಾ ಸಂಕಷ್ಟದಲ್ಲಿ ಈ ಕೆಲಸಗಳು ಉಪಯೋಗಕ್ಕೆ ಬಂದಿವೆ. ಇದೇ ನಿಟ್ಟಿನಲ್ಲಿ ಬಚ್ಚಲುಗುಂಡಿ ಯೋಜನೆ ಕೂಡಾ ಹಳ್ಳಿಗಾಡಿನ ಜನರಿಗೆ ವರದಾನವಾಗಲಿದೆ. ಜತೆಗೆ 95 ಸಾವಿರ ರೂಗಳ ಅಣಬೆ ಬೇಸಾಯದ ಶೆಡ್ ಮತ್ತು 2397 ರೂಗಳ ಪೌಷ್ಠಿಕ ತೋಟ ನಿರ್ಮಾಣಕ್ಕೂ ಅನುವು ಮಾಡಲಾಗಿದೆ ಎಂದರು.

      ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಗ್ರಾಪಂ ಆಡಳಿತಾಧಿಕಾರಿ ಹಂಸಕಲಾ, ಎನ್‍ಆರ್‍ಇಜಿಎ ಸಹಾಯಕ ನಿರ್ದೇಶಕ ಜಯಸಿಂಹ, ತಾಲ್ಲೂಕು ಸಹಾಯಕ ಯೋಜನಾಧಿಕಾರಿ ಗಿರೀಶ್, ಪಂಚಾಯತ್ ಇಂಜಿನಿಯರ್ ಎಸ್.ಜಿ.ಕಾವ್ಯ, ಐಇಸಿ ಸಂಯೋಜಕ ಕೆ.ರಾಘವೇಂದ್ರ, ಪಿಡಿಓ ಸಿದ್ದರಾಮಯ್ಯ, ಕಾರ್ಯದರ್ಶಿ ಮಾಸ್ತಯ್ಯ ಇತರರು ಇದ್ದರು.

(Visited 12 times, 1 visits today)