ತುಮಕೂರು :

      ವಿದ್ಯಾರ್ಥಿಗಳು ಬೆಳಗಿನ ವೇಳೆಯಲ್ಲಿ ಶಾಲೆ-ಕಾಲೇಜುಗಳಿಗೆ ಬರಲು ಅನುಕೂಲವಾಗುವಂತೆ ಶೀಘ್ರವಾಗಿ ಬಸ್ ಸೌಲಭ್ಯ ಕಲ್ಪಿಸದಿದ್ದರೆ, ತುಮಕೂರಿನ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಮುಂದೆ ವಿದ್ಯಾರ್ಥಿಗಳ ಸಹಿತ ಮುತ್ತಿಗೆ ಹಾಕಿ ಹೋರಾಟ ಮಾಡುವುದಾಗಿ ಬಿಜೆಪಿ ತಾ.ಪಂ. ಸದಸ್ಯೆ ಆರ್. ಕವಿತಾ ರಮೇಶ್ ಸಾರಿಗೆ ಸಂಸ್ಥೆಗೆ ಎಚ್ಚರಿಕೆ ನೀಡಿದರು.

      ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ತಾ.ಪಂ., ಅಧ್ಯಕ್ಷ ಗಂಗಾಂಜನೇಯ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಪ್ರಸಂಗ ಜರುಗಿತು.ತುಮಕೂರು-ಶಿರಾ ಹೆದ್ದಾರಿಯಲ್ಲಿ ತುಮಕೂರು ತಾಲ್ಲೂಕಿಗೆ ಒಳಪಡುವ ಶೀಬಿ ಕಡೆಯಿಂದ ತುಮಕೂರು ಕಡೆಗೆ ದೊಡ್ಡ ಸಂಖ್ಯೆಯಲ್ಲಿ ಶಾಲೆ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರತಿನಿತ್ಯ ಬಂದು ಹೋಗುತ್ತಾರೆ.

       ಶೀಬಿ, ಸೋಮಸಾಗರ ಗೇಟ್, ನೆಲಹಾಳ್, ಸೋರೆಕುಂಟೆ ಗೇಟ್, ತಿಮ್ಮರಾಜನಹಳ್ಳಿ ಗೇಟ್, ಬೆಳ್ಳಾವಿ ಕ್ರಾಸ್‍ನಿಂದ ಬರುವ ಬಡಕುಟುಂಬಕ್ಕೆ ಸೇರಿದ ನೂರಾರು ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನೇ ಅವಲಂಬಿಸಿದ್ದಾರೆ. ಪ್ರತಿನಿತ್ಯ ಮುಂಜಾನೆ ಶಾಲೆ-ಕಾಲೇಜಿಗೆ ಬರಲು ಸೂಕ್ತ ಬಸ್ ಸೌಲಭ್ಯವಿಲ್ಲದೆ ಒಂದು ರೀತಿಯ ಸಮಸ್ಯೆಯಾಗುತ್ತಿದ್ದರೆ, ಈ ಮಾರ್ಗದಲ್ಲಿ ಹಾಲಿ ಇರುವ ಬಸ್‍ಗಳೂ ನಿಲುಗಡೆ ಆಗದಿರುವ ಹಾಗೂ ನಿಲುಗಡೆ ಆದರೂ ವಿದ್ಯಾರ್ಥಿಗಳನ್ನು ಬಸ್ಸಿಗೆ ಹತ್ತಿಸಿಕೊಳ್ಳದಿರುವ ಕಾರಣದಿಂದ ಅಸಂಖ್ಯಾತ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಯನ್ನು ಬಣ್ಣಿಸಲು ಸಾಧ್ಯವಾಗುವುದಿಲ್ಲ.

      ಒಂದು ವೇಳೆ ಕೆ.ಎಸ್.ಆರ್.ಟಿ.ಸಿ. ಬಸ್ ಸಿಗದಿದ್ದರೆ, ಖಾಸಗಿ ಬಸ್‍ಗೆ ದುಬಾರಿ ಹಣವನ್ನು ತೆರಲಾಗದೆ ಅನೇಕ ವಿದ್ಯಾರ್ಥಿಗಳು ಅಸಹಾಯಕತೆಯಿಂದ ಮನೆಗೆ ವಾಪಸ್ ಹೋಗುವುದನ್ನೂ ಕಾಣಬಹುದಾಗಿದೆ ಎಂದು ತಮ್ಮ ಕ್ಷೇತ್ರವ್ಯಾಪ್ತಿಯ ವಿದ್ಯಾರ್ಥಿಗಳ ಬವಣೆಯನ್ನು ಅವರು ಆಕ್ರೋಶದಿಂದಲೇ ಸಭೆಯ ಗಮನಕ್ಕೆ ತಂದರು.

  ಪಾಸ್‍ನಿಂದ ಪ್ರಯೋಜನವೇನು?

      ಕೆ.ಎಸ್.ಆರ್.ಟಿ.ಸಿ.ಯು ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ನೀಡಿದೆ. ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು 1,200 ರೂ. ಪಾವತಿಸಿ ಪಾಸ್ ಪಡೆದಿರುತ್ತಾರೆ. ಆದರೆ ಬಸ್ ಸೌಲಭ್ಯವೇ ಇಲ್ಲದಿದ್ದರೆ ಅಥವಾ ಈ ಮಾರ್ಗದ ಬಸ್‍ಗಳು ನಿಲುಗಡೆ ಆಗದಿದ್ದರೆ ಅಥವಾ ವಿದ್ಯಾರ್ಥಿಗಳನ್ನು ಬಸ್‍ಗೆ ಹತ್ತಿಸಿಕೊಳ್ಳದಿದ್ದರೆ ಈ ಪಾಸ್‍ಗಳಿಂದ ಆಗುವ ಪ್ರಯೋಜನವಾದರೂ ಏನು? ಎಂದು ಕವಿತಾ ರಮೇಶ್ ಏರಿದ ದನಿಯಲ್ಲಿ ಸಭೆಯಲ್ಲಿ ಹಾಜರಿದ್ದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳನ್ನು ಪ್ರಶ್ನಿಸಿದರು.

      ಸಮಸ್ಯೆ ಈ ರೀತಿ ಇರುವುದರಿಂದ ಬೆಳಗ್ಗೆ 8 ಗಂಟೆಗೆ ಶಾಲೆ-ಕಾಲೇಜುಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ಮುಂಜಾನೆ 6 ಗಂಟೆಯಿಂದಲೇ ಬಸ್‍ಗಾಗಿ ಬಂದು ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು. ಬೆಳಗಿನ ಹೊತ್ತಿನಲ್ಲೇ ಈ ರೀತಿಯ ಸಮಸ್ಯೆ ಇದೆ. ಏಕೆಂದರೆ ಸಕಾಲಕ್ಕೆ ಶಾಲೆ-ಕಾಲೇಜನ್ನು ತಲುಪಬೇಕಾದ ಅವಸರ ಇರುತ್ತದೆ. ವಾಪಸ್ ಮನೆಗೆ ಹೋಗುವಾಗ ಅಂತಹ ಸಮಸ್ಯೆ ಉದ್ಭವಿಸಲಾರದು. ಸ್ವಲ್ಪ ವಿಳಂಬವಾದರೂ ಒಂದಲ್ಲ ಒಂದು ಬಸ್ ಹಿಡಿದು ಮನೆಗೆ ಹೋಗುತ್ತಾರೆ. ಆದಕಾರಣ ಬೆಳಗಿನ ಹೊತ್ತಿನಲ್ಲಿ ಈ ಮಾರ್ಗದಲ್ಲಿ ಈಗಿರುವುದಕ್ಕಿಂತ ಇನ್ನೂ ಹೆಚ್ಚುವರಿಯಾಗಿ ಬಸ್ ಸೌಲಭ್ಯವನ್ನು ತಕ್ಷಣದಿಂದಲೇ ಕಲ್ಪಿಸಬೇಕು. ಪ್ರಸ್ತುತ ಸಿಟಿ ಬಸ್‍ಗಳು ತುಮಕೂರಿನಿಂದ ಕೋರಾವರೆಗೂ ಸಂಚರಿಸುತ್ತಿದ್ದು, ಇದನ್ನು ಬೆಳಗಿನ ವೇಳೆಯಲ್ಲಿ ಗ್ರಾಮೀಣ ಬಡವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೀಬಿವರೆಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

      ಒಂದು ವೇಳೆ ತಮ್ಮ ಈ ಬೇಡಿಕೆಯನ್ನು ಕೆ.ಎಸ್.ಆರ್.ಟಿ.ಸಿ. ಆದಷ್ಟೂ ಶೀಘ್ರವಾಗಿ ಈಡೇರಿಸದಿದ್ದರೆ, ಸದ್ಯದಲ್ಲೇ ತಾವು ಈ ಭಾಗದ ವಿದ್ಯಾರ್ಥಿಗಳೊಂದಿಗೆ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

      ಈ ಸಭೆಗೆ ಹಾಜರಾಗಿದ್ದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಶಿವಕುಮಾರ್ ಪ್ರತಿಕ್ರಿಯಿಸಿ, ಈ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

 ಆರ್.ಓ. ಘಟಕದ ಸಮಸ್ಯೆ:

      ಸಭೆಯಲ್ಲಿ ಗ್ರಾಮೀಣ ನೀರು ಪೂರೈಕೆ ವಿಷಯ ಚರ್ಚೆಗೆ ಬಂದಾಗ ಬಿಜೆಪಿಯ ಆರ್.ವಿಜಯಕುಮಾರ್ (ಊರುಕೆರೆ ಕ್ಷೇತ್ರ) ಮಾತನಾಡುತ್ತ, ಶುದ್ಧಕುಡಿಯುವ ನೀರಿನ (ಆರ್.ಓ.) ಘಟಕಗಳ ಬಗ್ಗೆ ಸಭೆಯ ಗಮನ ಸೆಳೆದರು. ಇಲಾಖೆ ಹೊರತುಪಡಿಸಿ ಬೇರೆ ಏಜೆನ್ಸಿಯವರು ಘಟಕಗಳನ್ನು ನಿರ್ಲಕ್ಷಿಸುತ್ತಿದ್ದಾರೆಂದು ಹೆಬ್ಬಾಕ ಮತ್ತು ಕುಪ್ಪೂರಿನ ಉದಾಹರಣೆ ನೀಡಿದರು.

      ಮಧ್ಯೆಪ್ರವೇಶಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ಸರ್ಕಾರದಿಂದ ಬಂದಿರುವ ಸುತ್ತೋಲೆ ಪ್ರಕಾರ ಗ್ರಾಮ ಪಂಚಾಯತಿಗಳೇ ಇವುಗಳನ್ನು ನಿರ್ವಹಿಸಬಹುದಾಗಿದೆ ಅಥವಾ ಯಾವುದಾದರೂ ಏಜೆನ್ಸಿಗೆ ಟೆಂಡರ್ ಮೂಲಕ ವಹಿಸಬಹುದಾಗಿದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಇವುಗಳ ವಿದ್ಯುತ್ ಬಿಲ್ ಪಾವತಿಸಲಾಗದಂತಹ ಸ್ಥಿತಿ ಇದೆ ಎಂದೂ ಹೇಳಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಎಸ್.ರಂಗಸ್ವಾಮಯ್ಯ (ಸಿರಿವರ ಕ್ಷೇತ್ರ), ಆರ್.ಓ. ಘಟಕದ ನಿರ್ವಹಣೆಯ ಹೊಣೆಯನ್ನು ಗ್ರಾಮ ಪಂಚಾಯಿತಿಗೆ ಕೊಡುವುದು ಬೇಡ. ಇಲಾಖೆಯೇ ನಿರ್ವಹಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  9.5 ಲಕ್ಷ ವಿದ್ಯುತ್ ಬಿಲ್ ಬಾಕಿ :

      ಈ ಮಧ್ಯೆ ಬೆಸ್ಕಾಂ ಇಂಜಿನಿಯರ್ ಉತ್ತರಿಸುತ್ತ, ತಮ್ಮ ಡಿವಿಜನ್ ವ್ಯಾಪ್ತಿಯಲ್ಲಿರುವ 11 ಗ್ರಾಮ ಪಂಚಾಯಿತಿಗಳಿಂದ ನೀರಿನ ಘಟಕಗಳಿಗೆ ಸಂಬಂಧಿಸಿದಂತೆ ಒಟ್ಟು 9 ಲಕ್ಷ 50 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ ಇದೆ ಎಂದು ಸಭೆಯ ಗಮನ ಸೆಳೆದರು.

ಹೊಂಡುನೀರು ಪೂರೈಕೆ:

      ತಾ.ಪಂ.ನ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಲ್. ರಮೇಶ್ (ಬಿಜೆಪಿ-ಹಿರೇಹಳ್ಳಿ ಕ್ಷೇತ್ರ) ಮಾತನಾಡಿ, ಹಿರೇಹಳ್ಳಿಯು ದೊಡ್ಡ ಗ್ರಾಮವಾಗಿದ್ದು ಇರುವ ಒಂದೇ ಒಂದು ಕೊಳವೆ ಬಾವಿಯಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಮೈದಾಳದಿಂದ ಪೂರೈಕೆಯಾಗುವ ನೀರು ಹೊಂಡು ನೀರಿನಂತಿರುತ್ತದೆ. ಆದಕಾರಣ ಹಿರೇಹಳ್ಳಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಗ್ರಾಮೀಣ ನೀರು ಪೂರೈಕೆ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದರು.

 ಅಧ್ಯಕ್ಷರು ಭೇಟಿ ಕೊಡಲಿ:

      ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಪ್ರಗತಿ ಪರಿಶೀಲನೆ ಚರ್ಚೆಗೆ ಬಂದಾಗ ಬಿಜೆಪಿ ಸದಸ್ಯ ಆರ್. ವಿಜಯಕುಮಾರ್ (ಊರುಕೆರೆ ಕ್ಷೇತ್ರ) ಮಾತನಾಡಿ, ತಾ.ಪಂ. ಅಧ್ಯಕ್ಷರು ಈ ಇಲಾಖೆಗಳ ಹಾಸ್ಟೆಲ್‍ಗಳಿಗೆ ಆಗಾಗ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರಬೇಕು ಎಂದು ಕುಟುಕಿದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಸಿ.ಮಂಜುನಾಥ್ (ಬಿಟ್ಟನಕುರಿಕೆ ಕ್ಷೇತ್ರ) ತಾ.ಪಂ. ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೂ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ಮಾಡುವುದು ಒಳ್ಳೆಯದು ಎಂದು ಸಲಹೆಯಿತ್ತರು.  

ಶಾಲೆ ಪ್ರಸ್ತಾವನೆ ಸಿದ್ಧ:

      ತುಮಕೂರು ತಾಲ್ಲೂಕಿನಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಮಾಹಿತಿಯುಳ್ಳ ಪ್ರಸ್ತಾವನೆಯೊಂದು ಸಿದ್ಧವಿದೆ. ಗ್ರಾಮಠಾಣಾದಲ್ಲಿರುವ ಶಾಲೆಗಳ ವಿವರವನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಸರ್ವೆನಂಬರ್ನಲ್ಲಿರುವ ಶಾಲೆಗಳ ವಿವರವನ್ನು ತಾಲ್ಲೂಕು ಕಚೇರಿಗೆ ಸಲ್ಲಿಸಲಾಗುವುದು ಎಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.

       ಪ್ರಸ್ತುತ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಕಂಡುಬರುತ್ತಿಲ್ಲ. ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಾಗಿ ಸಿದ್ಧತೆಗಳು ನಡೆದಿವೆ. ಕಳೆದ ಸಾಲಿನಲ್ಲಿ ತುಮಕೂರು ತಾಲ್ಲೂಕು ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಈ ಸಾಲಿನಲ್ಲೂ ಪ್ರಥಮ ಸ್ಥಾನ ಉಳಿಸಿಕೊಳ್ಳಲು ಹಾಗೂ ಫಲಿತಾಂಶ ಪ್ರಮಾಣ ಅಧಿಕವಾಗಲು ಪೂರಕವಾಗಿ ಪ್ರತಿಶಾಲೆಗಳಲ್ಲೂ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು. ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಎನ್. ಶಾಂತಕುಮಾರ್ , ಆಡಳಿತಾಧಿಕಾರಿ ಆದಿಲಕ್ಷ್ಮಮ್ಮ ಇದ್ದರು. ಅನೇಕ ಸದಸ್ಯರುಗಳು, ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

(Visited 27 times, 1 visits today)