ತುಮಕೂರು :

      ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗಾಗಿ ನೋಂದಾಯಿಸಿಕೊಂಡಿರುವ 1,15,196 ರೈತರ ಅರ್ಜಿಗಳ ಪೈಕಿ ಬಾಕಿ ಇರುವ 7634 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ಪಂಚಾಯತಿಯಲ್ಲಿಂದು ಕೇಂದ್ರ ಸರ್ಕಾರದಿಂದ ಅನುಷ್ಟಾನಗೊಳ್ಳುವ ವಿವಿಧ ಯೋಜನಾ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಾ ಕಳೆದ 2017-18ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ 1,15,196 ರೈತರು ತಮ್ಮ ಬೆಳೆಯನ್ನು ವಿಮೆಗೊಳಪಡಿಸಲು ನೋಂದಾಯಿಸಿಕೊಂಡು ಪ್ರೀಮಿಯಂ ಹಣ ಕಟ್ಟಿದ್ದರೂ ಬ್ಯಾಂಕಿನ ಅಧಿಕಾರಿಗಳು ಇಲ್ಲ-ಸಲ್ಲದ ನೆಪವೊಡ್ಡಿ 7634 ರೈತರ ಅರ್ಜಿಗಳನ್ನು ವಿಲೇವಾರಿ ಬಾಕಿ ಉಳಿಸಿಕೊಂಡಿದ್ದಾರೆ. ಬ್ಯಾಂಕ್ ಹಾಗೂ ಕೃಷಿ ಇಲಾಖೆಗಳ ನಡುವೆ ಸಾಮರಸ್ಯ ಇಲ್ಲದಿರುವುದೇ ಇದಕ್ಕೆ ಕಾರಣ ಎಂದರು.

      ಬ್ಯಾಂಕ್‍ನವರು ಇಲಾಖೆ ವಿರುದ್ಧ ಹಾಗೂ ಇಲಾಖೆಯು ಬ್ಯಾಂಕಿನ ವಿರುದ್ಧ ಆರೋಪ ಪ್ರತ್ಯಾರೋಪ ಮಾಡುವುದರಿಂದ ರೈತರಿಗೆ ವಿಮಾ ಪರಿಹಾರ ಹಣ ತಲುಪುವುದಿಲ್ಲ. ಬೆಳೆ ನಷ್ಟ ಸಂಭವಿಸಿದರೆ ಪರಿಹಾರ ದೊರೆಯಬಹುದೆಂಬ ನಿರೀಕ್ಷೆಯಿಂದ ರೈತರು ವಿಮಾ ಕಂತನ್ನು ಪಾವತಿಸಿರುತ್ತಾರೆ. ಬಡ ರೈತರ ಹಣದೊಂದಿಗೆ ವಿಮಾ ಕಂಪನಿಗಳು, ಬ್ಯಾಂಕುಗಳು ಹಾಗೂ ಇಲಾಖೆಯವರು ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಅಧಿಕಾರಿಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

      ಬ್ಯಾಂಕಿನವರು ರೈತರ ಬೆಲೆ ಅರಿತು ಸೌಲಭ್ಯಗಳನ್ನು ಒದಗಿಸಬೇಕು. ಸಾಲಕ್ಕಾಗಿ ಬರುವ ರೈತರನ್ನು ಬ್ಯಾಂಕಿನವರು ಕಳ್ಳರಂತೆ ಕಾಣುವುದು ಸರಿಯಲ್ಲ. ಫಲಾನುಭವಿಗಳಿಗೆ ನೀಡಬೇಕಾಗಿರುವ ಸಹಾಯಧನವನ್ನು ಬ್ಯಾಂಕಿನಲ್ಲಿಯೇ ಭದ್ರವಾಗಿಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಹಣ ಆರ್ಥಿಕ ವರ್ಷಾಂತ್ಯದಲ್ಲಿ ಸರ್ಕಾರಕ್ಕೆ ವಾಪಸ್ ಹೋಗುವುದರಿಂದ ಅರ್ಹರಿಗೆ ಸೌಲಭ್ಯ ದೊರೆಯದೆ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಯಾವುದೇ ಇಲಾಖಾಧಿಕಾರಿಗಳು ಸಾರ್ವಜನಿಕರ ಹಣವನ್ನು ಪೋಲು ಮಾಡದೆ ಪ್ರಾಮಾಣಿಕವಾಗಿ ಸರ್ಕಾರಿ ಯೋಜನೆಗಳ ಅನುಷ್ಟಾನಕ್ಕೆ ಸದ್ಬಳಕೆ ಮಾಡಬೇಕೆಂದು ತಿಳಿಸಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಪಾವಗಡ ತಾ.ಪಂ. ಅಧ್ಯಕ್ಷ ಸೊಗಡು ವೆಂಕಟೇಶ್ ಬ್ಯಾಂಕುಗಳು ರೈತರ ವಿಮಾ ಅರ್ಜಿಗಳಿಗೆ ಸ್ಪಂದಿಸದಿರುವುದಲ್ಲದೆ ಇನ್ನಿತರೆ ಸರ್ಕಾರಿ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನಿಗಧಿತ ಅವಧಿಯೊಳಗೆ ಸಾಲ ಮಂಜೂರು ಮಾಡದೆ ವಿಳಂಬ ಮಾಡುತ್ತಿವೆ. ಇಂತಹ ಬ್ಯಾಂಕುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಹೇಳಿದರು.

      ಚಿತ್ರದುರ್ಗ ಸಂಸದ ಸಿ. ಚಂದ್ರಪ್ಪ ಮಾತನಾಡಿ, ರೈತರಿಂದ ವಿಮಾ ಪ್ರೀಮಿಯಂ ಕಂತನ್ನು ಕಟ್ಟಿಸಿಕೊಂಡು ತಿರಸ್ಕರಿಸಿದ ಅರ್ಜಿಯ ಬಗ್ಗೆ ಮಾಹಿತಿ ನೀಡದೆ ರೈತರ ಜೀವ ಹಾಗೂ ಜೀವನದೊಂದಿಗೆ ಅಧಿಕಾರಿಗಳು ಆಟವಾಡುತ್ತಿದ್ದಾರೆ. ತಿರಸ್ಕತ ಅರ್ಜಿ ಬಗ್ಗೆ ವರ್ಷ ಕಳೆದ ಮೇಲೆ ಮಾಹಿತಿ ನೀಡುವುದರಿಂದ ಏನೂ ಪ್ರಯೋಜನವಿಲ್ಲ. ಕೂಡಲೇ ಬ್ಯಾಂಕ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್‍ಕುಮಾರ್ ಅವರಿಗೆ ಸೂಚಿಸಿದರು.
ವಿಮಾ ಕಂಪನಿಗಳು ರೈತರ ನೂರಾರು ಕೋಟಿ ರೂ.ಗಳ ಹಣವನ್ನು ತಮ್ಮಲ್ಲಿಟ್ಟುಕೊಂಡು ನೆಪಗಳನ್ನು ಹೇಳಿ ಪರಿಹಾರ ನೀಡದೆ ಹಗಲು ದರೋಡೆ ಮಾಡುತ್ತಿದ್ದಾರೆ. ಶಿರಾ ತಾಲ್ಲೂಕಿನ ಲಕ್ಕೇನಹಳ್ಳಿಯಲ್ಲಿ ಬ್ಯಾಂಕ್ ಶಾಖೆ ಕಚೇರಿ ತೆರೆಯಲು 3 ವರ್ಷಗಳಿಂದ ಒತ್ತಾಯಿಸಿದರೂ ಅಧಿಕಾರಿಗಳು ಇನ್ನೂ ತಟಸ್ಥವಾಗಿದ್ದಾರೆ. ಇನ್ನೊಂದು ತಿಂಗಳಲ್ಲಿ ಶಾಖಾ ಕಛೇರಿ ತೆರೆಯದಿದ್ದಲ್ಲಿ ಜನವರಿಯಲ್ಲಿ ಬ್ಯಾಂಕ್ ಮುಂದೆ ಘೇರಾವ್ ಕುಳಿತುಕೊಳ್ಳುತ್ತೇನೆಂದು ಎಚ್ಚರಿಕೆ ನೀಡಿದರು.

       ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ವಿಮಾ ಸೌಲಭ್ಯಕ್ಕಾಗಿ ಈಗಾಗಲೇ ನೋಂದಣಿಯಾದ ರೈತರು ಒಟ್ಟು 5.96ಕೋಟಿ ರೂ.ಗಳ ವಿಮಾ ಕಂತನ್ನು ಅಧಿಕೃತ ವಿಮಾ ಕಂಪನಿಗಳಿಗೆ ಪಾವತಿಸಿದ್ದಾರೆ. ಸರಿಯಾಗಿ ಭರ್ತಿ ಮಾಡದಿರುವ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸದಿರುವ ಅರ್ಜಿಗಳನ್ನು ಬ್ಯಾಂಕಿನವರು ಬಾಕಿಯಿಟ್ಟಿರುವುದರಿಂದ 7634 ರೈತರು ವಿಮಾ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರಲ್ಲದೆ, 2017-18ನೇ ಸಾಲಿನಲ್ಲಿ 76.67 ಕೋಟಿ ರೂ.ಗಳ ವಿಮಾ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದರು.

 

      ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಕುರಿತು ಪರಿಶೀಲನೆ ನಡೆಸಿ ಮತ್ತೆ ಮಾತನಾಡಿದ ಸಂಸದ ಮುದ್ದಹನುಮೇಗೌಡ ಅವರು, ರೈಲ್ವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಹಾಗೂ ಟೆಂಡರು ಪ್ರಕ್ರಿಯೆಯನ್ನು 10 ದಿನಗಳೊಳಗಾಗಿ ಅಂತಿಮ ಹಂತಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಮಧುಗಿರಿ ಹಾಗೂ ಕೊರಟಗೆರೆ ರೈಲು ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ವ್ಯಾಜ್ಯಗಳಿರುವ ಜಮೀನುಗಳ ಸಮಸ್ಯೆಯನ್ನು ಸಿವಿಲ್ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲಿಸಿದ ಸಂಸದರು, ರಸ್ತೆ ಕಾಮಗಾರಿ ಅಭಿವೃದ್ಧಿಗೆ ಅಡ್ಡಿಯಾಗಿರುವ ಒಂದು ಮರವನ್ನು ಕಡಿಯಲು ಅನುಮತಿ ನೀಡಲು ಒಂದೂವರೆ ವರ್ಷ ಸಮಯವನ್ನು ತೆಗೆದುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 175ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 47 ಕಿ.ಮೀ.ಉದ್ದದ ಶಿರಾ-ಹುಳಿಯಾರು ರಾ.ಹೆ.234 ರಸ್ತೆ ಹಾಗೂ 227ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 50 ಕಿ.ಮೀ. ಉದ್ದದ ಹುಳಿಯಾರು-ಕೆ.ಬಿ.ಕ್ರಾಸ್ ರಾ.ಹೆ.150ಎ ರಸ್ತೆ ಕಾಮಗಾರಿಯನ್ನು ಲೋಕಸಭಾ ಅಧಿವೇಶನ ಮುಗಿಯುವುದರೊಳಗಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

      ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಚೆ ಇಲಾಖಾ ಕಛೇರಿಗಳ ಮಾಹಿತಿ ನೀಡಬೇಕೆಂದು ಅಂಚೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಈವರೆಗೂ ಭೌತಿಕ ಪ್ರಗತಿ ಸಾಧಿಸಿಲ್ಲದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಶೀಘ್ರವೇ ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಹಂತದ ಕಾಮಗಾರಿ ಚಾಲನೆಗೆ ಮುಂದಾಗಬೇಕೆಂದು ತಿಳಿಸಿದರು.

      ರೈತರ ವಿಮಾ ಅರ್ಜಿ ಹಾಗೂ ವಿವಿಧ ಸಾಲದ ಅರ್ಜಿಗಳನ್ನು ಶೀಘ್ರವಾಗಿ ವಿಲೇ ಮಾಡಲು ತಾಲೂಕು ಹಾಗೂ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಭೆಯಲ್ಲಿ ಸೂಚನೆ ನೀಡಿದ್ದರೂ ಕೆಲವು ಬ್ಯಾಂಕುಗಳು ಮಂದನೀತಿಯನ್ನು ಅನುಸರಿಸುತ್ತಿವೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು, ಹಾಜರಿದ್ದರು.

(Visited 87 times, 1 visits today)