ಬಿಎಂಟಿಸಿ ಬಸ್‌ಗೆ ಬಲಿಯಾದ ಇಬ್ಬರು ವಿದ್ಯಾರ್ಥಿಗಳು

ಬೆಂಗಳೂರು:

       ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್ ಹರಿದು ಬಿಬಿಎಂಪಿ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

      ಬಿಬಿಎಂಪಿಯ ಕಸ್ತೂರ ಬಾ ಕಾಲೇಜಿನ ಪಿಯು ವಿದ್ಯಾಥಿಗಳಾದ ಚಂದ್ರಕಾಂತ್(17) ಮತ್ತು ಯದುಕುಮಾರ್(18) ಮೃತ ವಿದ್ಯಾರ್ಥಿಗಳೆಂದು ಪೊಲೀಸರು ತಿಳಿಸಿದ್ದಾರೆ.

      ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ರಾಜಶೇಖರ್ ಎಂಬವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ: 

      ಮೈಸೂರು ರಸ್ತೆಯ ಕೆಬಿ ನಗರದ ಬಿಬಿಎಂಪಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಚಂದ್ರಕಾಂತ್, ದ್ವಿತೀಯ ಪಿಯುಸಿ ಓದುತ್ತಿದ್ದ ಯದುಕುಮಾರ್ ಅವರು ಸ್ನೇಹಿತ ರಾಜಶೇಖರ್ ಜತೆ ಕಾಲೇಜಿಗೆ ಹೋಗಲು ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮೈಸೂರು ರಸ್ತೆಯ ಕಸ್ತೂರ ಬಾ ಕಾಲೇಜಿನ ಕ್ರಿಶ್ಚಿಯನ್ ಸ್ಮಶಾನದ ಬಳಿ ರಸ್ತೆ ದಾಟುತ್ತಿದ್ದರು ಎನ್ನಲಾಗಿದೆ. ಈ ವೇಳೆ ದೊಡ್ಡ ಬಸ್ತಿ ಮಾರ್ಗದಿಂದ ಸಿಟಿ ಮಾರ್ಕೆಟ್ ಕಡೆಗೆ ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್, ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸಂಚಾರ ದಟ್ಟಣೆ: 

      ಬಸ್ ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದು, ರಸ್ತೆ ಬದಿಯ ತಡೆಗೋಡೆಗೆ ಗುದ್ದಿದೆ. ಈ ಅಪಘಾತದ ಕಾರಣ ಮೈಸೂರು ರಸ್ತೆಯಲ್ಲಿ 2 ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ಚಾಲಕನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

10 ಲಕ್ಷ ಪರಿಹಾರ:

      ಅಪಘಾತದಲ್ಲಿ ವಿದ್ಯಾರ್ಥಿಗಳು ಮೃತಪಟ್ಟ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಭೇಟಿ ನೀಡಿ ಮಾಹಿತಿ ಪಡೆದು ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ಘೋಷಿಸಿದರು.

(Visited 11 times, 1 visits today)

Related posts