ಬೆಳೆ ವಿವರ ಪರಿಶೀಲನೆಗೆ “ಬೆಳೆ ದರ್ಶಕ್” ಆ್ಯಪ್

 ತುಮಕೂರು :

      ಜಿಲ್ಲೆಯ ರೈತರು “ಬೆಳೆ ದರ್ಶಕ್” ಮೊಬೈಲ್ ಆ್ಯಪ್ ಮೂಲಕ ಮುಂಗಾರು ಋತುವಿನಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ 2018ರ ಮುಂಗಾರು ಋತುವಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಸ್ಥಳೀಯ ವಿದ್ಯಾವಂತ ಯುವಕರನ್ನು ತೊಡಗಿಸಿಕೊಂಡು, ಮೊಬೈಲ್ ತಂತ್ರಾಂಶದ ಮೂಲಕ ಈಗಾಗÀಲೇ ಸಂಗ್ರಹಿಸಲಾಗಿದೆ. ಸಂಗ್ರಹಿತ ಮಾಹಿತಿಯನ್ನು ತಾಲ್ಲೂಕು ಆಡಳಿತವು ಈಗಾಗಲೇ ಪರಿಶೀಲಿಸುತ್ತಿದೆ.

      ಸರ್ಕಾರವೂ ಸಹ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದು, ಸರ್ಕಾರವು ದಾಖಲಿಸಿರುವ ಈ ಮಾಹಿತಿಯನ್ನು ರೈತರು ಪರಿಶೀಲಿಸಿಕೊಳ್ಳುವುದು ಅತಿ ಮಹತ್ವದ್ದಾಗಿರುತ್ತದೆ. ಈ ಹಿನ್ನಲೆಯಲ್ಲಿ ಆಯಾ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ಗ್ರಾಮವಾರು ಪ್ರತಿಯೊಬ್ಬ ರೈತರ ಜಮೀನಿನ ಮಾಹಿತಿಯನ್ನು ದಾಖಲಿಸಿಡಲಾಗಿದೆ. ಲಭ್ಯವಿರುವ ಈ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

      ಬೆಳೆ ಮಾಹಿತಿಯನ್ನು ರೈತರು ತಮ್ಮ ಮೊಬೈಲ್‍ನಲ್ಲಿ ಗೂಗಲ್‍ನ “ಪ್ಲೇ ಸ್ಟೋರ್”  PLAY STORE ಮುಖಾಂತರ BELE DARSHAK ತಂತ್ರಾಂಶವನ್ನು ಡೌನ್‍ಲೋಡ್ ಮಾಡಿಕೊಂಡು ಪರಿಶೀಲಿಸಿಕೊಳ್ಳಬಹುದಾಗಿದೆ ಅಥವಾ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿರುವ ತಮ್ಮ ಜಮೀನಿನ ಬೆಳೆ ವಿವರವನ್ನು ಪರಿಶೀಲಿಸಿಕೊಂಡು ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 30ರೊಳಗಾಗಿ ಮೊಬೈಲ್ ತಂತ್ರಾಂಶದಲ್ಲಿ ಧ್ವನಿ ಮುದ್ರಣ ಮಾಡುವ ಮೂಲಕ ಅಥವಾ ಲಿಖಿತವಾಗಿ ತಹಶೀಲ್ದಾರರ ಕಛೇರಿಗೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 73 times, 1 visits today)

Related posts

Leave a Comment