ತುಮಕೂರು

ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕೆಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ ನ್ಯಾ|| ಬಿ.ಎ.ಪಾಟೀಲ್ ಕರೆ ನೀಡಿದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ‘ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆ’ಗಳ ಬಗ್ಗೆ ಕಂದಾಯ, ಮುಜರಾಯಿ, ನಗರ ಸ್ಥಳೀಯ ಸಂಸ್ಥೆ, ಪೊಲೀಸ್, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಯಾವುದೇ ಕಾಯ್ದೆ/ನಿಯಮಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ ಅನುಷ್ಠಾನ ಮಾಡುವ ಅಧಿಕಾರಿಗಳು ಕಾಯ್ದೆಯ ಉದ್ದೇಶ ಹಾಗೂ ಕಾಯ್ದೆಗಳ ಬಗ್ಗೆ ಪೂರ್ಣ ಅರಿವು ಹೊಂದಿರಬೇಕು ಎಂದು ತಿಳಿಸಿದರು.

ಸರ್ಕಾರಿ/ಸ್ಥಳೀಯ ಸಂಸ್ಥೆಗಳು/ಹಿಂದು ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ/ ವಕ್ಫ್/ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಭೂಮಿಯನ್ನು ಕಬಳಿಸಲು ಮಾಡುವ ಪ್ರಯತ್ನಗಳನ್ನು ತಡೆಗಟ್ಟುವ ಸಲುವಾಗಿ ಈ ಭೂಕಬಳಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಕಾಯ್ದೆಯ ಅನುಷ್ಠಾನ ಮಾಡುವಾಗ ಅಧಿಕಾರಿಗಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಸಮಸ್ಯೆಗಳಿಗೆ ಹೆದರದೆ ಭೂಕಬಳಿಕೆ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಬೇಕು. ಸೂಕ್ತ ದಾಖಲೆ/ಸಾಕ್ಷ್ಯಗಳನ್ನು ಒದಗಿಸುವುದರಿಂದ ಪ್ರಕರಣಗಳು ಬಹುಬೇಗ ಇತ್ಯರ್ಥವಾಗಿ ಸರ್ಕಾರದ ಆಸ್ತಿ ಸಂರಕ್ಷಣೆಯಾಗುತ್ತದೆ ಎಂದರು.

ಭೂಕಬಳಿಕೆ ನಿಷೇಧ ಅಧಿನಿಯಮದಡಿ ಸರ್ಕಾರಿ ಆಸ್ತಿಯನ್ನು ಅಧಿಕಾರಿಗಳು ಸರ್ವೆ ಮಾಡಿ ಪರಿಮಿತಿ(ಃouಟಿಜಚಿಡಿಥಿ)ಯನ್ನು ಗುರುತು ಮಾಡಬೇಕು. ಪರಿಮಿತಿ ಗುರುತು ಮಾಡುವುದರಿಂದ ಅರಣ್ಯ ಇಲಾಖೆ, ತಾಲ್ಲೂಕು ಆಡಳಿತ, ನಗರ ಸ್ಥಳೀಯ ಸಂಸ್ಥೆಗಳು, ಧಾರ್ಮಿಕ ದತ್ತಿ ಇಲಾಖೆಯು ತಮ್ಮ ವ್ಯಾಪ್ತಿಗೊಳಪಡುವ ಜಮೀನು ಒತ್ತುವರಿಯಾಗಿರುವುದನ್ನು ತಿಳಿಯಬಹುದು ಎಂದರಲ್ಲದೆ, ಭೂಕಬಳಿಕೆದಾರರು ಕಾನೂನು ಉಲ್ಲಂಘಿಸಿ ಭೂಮಿಯನ್ನು ಅಕ್ರಮವಾಗಿ ಬಳಕೆ ಮಾಡುವುದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಪ್ರತಿಕೂಲ ಪರಿಣಾಮ ಉಂಟಾಗುವುದರಿಂದ  ಭೂಕಬಳಿಕೆ ಮಾಡುವವರ ವಿರುದ್ಧ ಅಧಿಕಾರಿಗಳು ಕೂಡಲೇ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕೆಂದು ತಿಳಿಸಿದರು.

ಭೂಕಬಳಿಕೆ ನಿಷೇಧ ಕಾಯ್ದೆ ಜಾರಿಯಾದ ನಂತರ ಇದೇ ಮೊದಲ ಬಾರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು,  ಕಾರ್ಯಾಗಾರ ಏರ್ಪಡಿಸಲು ಕಾರಣಕರ್ತರಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಜಯರಾಮ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ತುಮಕೂರು ಜಿಲ್ಲೆಯು ಬೆಂಗಳೂರಿಗೆ ಸಮೀಪವಿರುವುದರಿಂದ ಇಲ್ಲಿನ ಭೂಮಿಯ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಅಕ್ರಮವಾಗಿ ಭೂಮಿಯನ್ನು ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಇಂತಹವರ ವಿರುದ್ಧ ಸಂಘಟಕರಾಗಿ ಕ್ರಮ ಕೈಗೊಳ್ಳದಿದರೆ ಭೂ ಕಬಳಿಕೆದಾರರು ಮತ್ತಷ್ಟು ಬಲಿಷ್ಠರಾಗುತ್ತಾರೆ.  ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಭೂ ಕಬಳಿಕೆ ಪ್ರಕರಣಗಳನ್ನು ದಾಖಲಿಸುವ ಪೂರ್ವದಲ್ಲಿ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದಲ್ಲಿ ಸರ್ಕಾರದ ಪರವಾಗಿ ಆದೇಶಗಳು ಹೊರಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ಅಧಿಕಾರಿಗಳು ನಗರ ಸೇರಿದಂತೆ ನಗರಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಸರ್ವೇ ಕಾರ್ಯ ಮಾಡಿ ಭೂ ಕಬಳಿಕೆಯಾಗಿರುವ ಜಮೀನುಗಳ ಪಟ್ಟಿ ಮಾಡಬೇಕು. ಭೂಕಬಳಿಕೆ ಮಾಡಿರುವುದು ಕಂಡು ಬಂದರೆ ವ್ಯವಸ್ಥಿತವಾಗಿ ಅನುಸರಣೆ ಮಾಡಿ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಬೇಕು.  ಇದರಿಂದ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸಬಹುದು ಎಂದು ತಿಳಿಸಿದರು.

ಭೂ ಕಬಳಿಕೆ ನಿಷೇಧ ಅಧಿನಿಯಮ ಕುರಿತು ಅಧಿಕಾರಿ/ಸಿಬ್ಬಂದಿಗಳಿಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರಲ್ಲದೆ, ಜಿಲ್ಲೆಯಲ್ಲಿ ಪ್ರತಿ ತಿಂಗಳು ಒಂದು ವಾರಗಳ ಕಾಲ ಸಾರ್ವಜನಿಕ ಆಸ್ತಿ ಸಂರಕ್ಷಣೆ ಕುರಿತು ಅಭಿಯಾನ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ನಂತರ ನಡೆದ ಉಪನ್ಯಾಸ ಮಾಲಿಕೆಯಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ ನ್ಯಾ|| ಬಿ.ಎ.ಪಾಟೀಲ್ ಅವರು ‘ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011 ಮತ್ತು ತಿದ್ದುಪಡಿ ಕಾಯ್ದೆ’, ಸರ್ವೇ ಇಲಾಖೆ ಅಪರ ನಿರ್ದೇಶಕ ಸಿ.ಎನ್.ಶ್ರೀಧರ್ ಅವರು ‘ಮೋಜಣಿ ಮತ್ತು ನಿಯಮಗಳು’,  ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಕೆ.ಹೆಚ್. ಅಶ್ವತ್ಥನಾರಾಯಣ ಅವರು ‘ಕರ್ನಾಟಕ ಭೂ ಕಂದಾಯ ಅಧಿನಿಯಮ’, ನಿವೃತ್ತ ಐಎಫ್‍ಎಸ್ ಅಧಿಕಾರಿ ಎ.ಎಂ.ಅಣ್ಣಯ್ಯ ಅವರು ‘ಕರ್ನಾಟಕ ಅರಣ್ಯ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ’ ಕುರಿತು ಉಪನ್ಯಾಸ ನೀಡಿದರು.

ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸ್ವಾಗತಿಸಿದರು.  ಕಾರ್ಯಾಗಾರದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯ ಸಿ.ಜಿ. ಹುನಗುಂದ, ನ್ಯಾಯಿಕ ಸದಸ್ಯರಾದ  ಎಸ್.ಪಾಲಯ್ಯ ಹಾಗೂ ಎನ್.ಎಸ್.ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ರಿಜಿಸ್ಟ್ರಾರ್ ನವೀನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಸರ್ವೇ ಇಲಾಖೆ ಉಪನಿರ್ದೇಶಕ ಸುಜಯ್ ಕುಮಾರ್, ಪಾಲಿಕೆ ಆಯುಕ್ತ ಸಿ. ಯೋಗಾನಂದ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗೋಪಾಲ್ ಜಾದವ್, ಜಿಲ್ಲಾ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿದಂತೆ ಕಂದಾಯ, ಅರಣ್ಯ, ಪೊಲೀಸ್, ಪಾಲಿಕೆ,  ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

(Visited 35 times, 1 visits today)