ತುಮಕೂರು:

     ಮಕ್ಕಳ ಮನಸ್ಸಿಗೆ ನಿನ್ನಿಂದ ಮಾಡಲು ಸಾಧ್ಯ ಎಂಬ ಹುರುಪಿನ ಶಕ್ತಿ ತುಂಬಿ ಬೆನ್ನು ತಟ್ಟಬೇಕು. ಇದರಿಂದ ಮಕ್ಕಳ ಮನಸ್ಸು ಬಲವಾಗಿ ಗುರಿಯ ದಾರಿಯ ಕಡೆಗೆ ನಡೆದು ಸಫಲತೆ ಕಾಣಲು ಸಾಧ್ಯವಾಗುತ್ತದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು, ಶಾಸನರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

      ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ ಸಂಘ ಮತ್ತು ಮಕ್ಕಳ ಸಹಾಯವಾಣಿ (1098) ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿಂದು ಜಿಲ್ಲಾ ಬಾಲಭವನದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಮಕ್ಕಳ ಮುಗ್ದತೆ ದೈವತ್ವಕ್ಕೆ ಸಮಾನ. ಮಕ್ಕಳು ಬೆಳೆದಂತೆ ಮನಸ್ಸು ಪರಿವರ್ತನೆಯಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆಯು ಮಕ್ಕಳನ್ನು ಸಂಕುಚಿತವಾಗಿ ಬೆಳೆಸದೇ ವಿಕಾಸದ ಹಾದಿಯಲ್ಲಿ ಬೆಳೆಸಬೇಕೆಂದರು. ಪ್ರತಿ ಮಕ್ಕಳಲ್ಲೂ ಸಾಮಥ್ರ್ಯವಿರುತ್ತದೆ ಪೋಷಕರು ಅದನ್ನರಿತು ಮಕ್ಕಳ ಇಷ್ಟಕ್ಕೆ ಪೂರಕವಾಗಿ ಅವರ ಇತಿಮಿತಿಗಳನ್ನು ಅರಿತು ಆಸರೆ ನೀಡುತ್ತಾ ಬೆಳೆಸಬೇಕು. ಹಾಗೆಯೇ ಅನುಕರಣೆ ಬದುಕಿನ ಶ್ರೇಷ್ಠ ವರ್ತನೆ, ಮಕ್ಕಳು ಅನುಕರಣೆಯನ್ನು ಹೆಚ್ಚು ಮಾಡುತ್ತವೆ ಇದನ್ನು ಪೋಷಕರು ಅರಿತು ಆ ಮಕ್ಕಳ ಮುಂದೆ ಸರಿಯಾಗಿ ವರ್ತಿಸಬೇಕು. ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಕೆ ಮಾಡಿ ಮನಸ್ಸನ್ನು ಘಾಸಿಗೊಳಿಸದೇ, ಮಕ್ಕಳಿಗಿರುವ ಸಾಮಥ್ರ್ಯಕ್ಕೆ ಶಕ್ತಿ ತುಂಬಬೇಕು.  

       ಅಂಗವಿಕಲ ಮಕ್ಕಳು ದೇವರ ಶಾಪಕ್ಕೀಡಾಗಿರುವ ಮಕ್ಕಳು. ಇಂತಹ ಮಕ್ಕಳ ಅಶಕ್ತತೆಯನ್ನು ಪದೇ ಪದೇ ಎತ್ತಿ ಹಿಡಿಯದು ಒಳ್ಳೆಯ ಬೆಳವಣಿಗೆಯಲ್ಲ, ಬದಲಾಗಿ ಅಂತಹ ಮಕ್ಕಳಿಗೆ ಹುರುಪು ತುಂಬಬೇಕು. ಬೆಲೆಕಟ್ಟಲಾಗದ ವಸ್ತು ಸಂತೋಷ. ಮಕ್ಕಳು ಸಂತೋಷವನ್ನು ಅನುಭವಿಸಬೇಕು ಎಂದ ಅವರು ಮಕ್ಕಳಿಗೆ ಬೇರೆಯವರ ಹಂಗಿಲ್ಲದೇ ಬದುಕುವುದನ್ನು ಕಲಿಸಿ ಕೊಡುವುದೇ ನಿಜವಾದ ಶಿಕ್ಷಣ ಮತ್ತು ಶಕ್ತಿ ಎಂದು ಅವರು ತಿಳಿಸಿದರು.

      ಇದೇ ಸಂದರ್ಭದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಬಲೂನುಗಳನ್ನು ಗಾಳಿಗೆ ಹಾರಿಬಿಡುವ ಮೂಲಕ ಮಕ್ಕಳ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹೊರಾಂಗಣ ಆಟಗಳ ಉದ್ಘಾಟನೆ ನೆರವೇರಿಸಿದರು.

      ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಸ್ಮರಿಸುತ್ತಾ ಮಕ್ಕಳು ದೇಶದ ಭವಿಷ್ಯ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಪೋಷಣೆಯ ಮೂಲಕ ಅಸಾಧ್ಯವಾದುದು ಯಾವುದು ಇಲ್ಲ ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ಹುಟ್ಟುಹಾಕಿ ಉತ್ತಮ ಜೀವನ ರೂಪಿಸಬೇಕು. ಆಧುನಿಕ ಜಗತ್ತಿನಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಕಡೆಗೆ ಮಕ್ಕಳ ಗಮನ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ಇದಕ್ಕೆ ಬದಲಾಗಿ ಮಕ್ಕಳಲ್ಲಿ ಶಿಸ್ತು, ಮನೆಯ ಹಿರಿಯರಿಗೆ, ತಂದೆತಾಯಿಗಳಿಗೆ ಗುರುಗಳಿಗೆ ಗೌರವ ನೀಡವಂತಹ ಮೌಲ್ಯಗಳನ್ನು ಕಲಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು, ಮಕ್ಕಳು ಸೃಜನಾತ್ಮಕವಾಗಿ ಯೋಚನೆ ಮಾಡುವಂತಹ ವಾತಾವರಣ ನಿರ್ಮಾಣ ಮಾಡುವ ಕೆಲಸ ಶಾಲೆಗಳಲ್ಲಿ ಆಗಬೇಕಿದೆ.

      ಇಲಾಖೆಯ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವು ಇದಕ್ಕೆ ಪೂರಕವಾಗಿದ್ದು, ಶಾಲೆಗಳಲ್ಲಿ ಮಕ್ಕಳ ಮನಸ್ಸು ವಿಕಸನಕ್ಕೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕು ಎಂದು ಅವರು ತಿಳಿಸಿದರು.ಜಿಲ್ಲಾ ಬಾಲಭವನ ಸಂಘದ ಕಾರ್ಯದರ್ಶಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್. ನಟರಾಜ ಅವರು ಮಾತನಾಡಿ ವಿಶ್ವವ್ಯಾಪಿ ಆಚರಿಸುವ ಮಕ್ಕಳ ದಿನವನ್ನು ಬಾಲಭವನದಲ್ಲಿ ಈ ವರ್ಷ ವಿಶೇಷತೆಗಳನ್ನೊಳಗೊಂಡು ಆಚರಿಸಲಾಗುತ್ತಿದೆ.

      ಜಿಲ್ಲೆಯಲ್ಲಿರುವ ಅನಾಥ ಮಕ್ಕಳ ಕುಟೀರಗಳಾದ ಅಭಿವೃದ್ಧಿ ಸಾಮಾಜಿಕ ಸಂಸ್ಥೆ, ಸಂತ ಗ್ರಿಗೋರಿಯಸ್ ದಯಾಭವನ, ಶ್ರೀ ಶಿವ ಶೈಕ್ಷಣಿಕ ಸೇವಾಶ್ರಮ, ಬಾಪೂಜಿ ವಿದ್ಯಾಸಂಸ್ಥೆ, ಶ್ರೀ ವೀರಭದ್ರಸ್ವಾಮಿ ವಿದ್ಯಾಸಂಸ್ಥೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ರಂಗಾಪುರದ ಪರದೇಶಿ ಕೇಂದ್ರ ಸ್ವಾಮೀಜಿ ವಿದ್ಯಾಪೀಠ ಇವುಗಳ ಸಹಯೋಗದಲ್ಲಿ ಮಕ್ಕಳ ಹಬ್ಬವನ್ನು ಆಯೋಜನೆ ಮಾಡಲಾಗಿದ್ದು, ಸುಮಾರು 600 ಕ್ಕೂ ಹೆಚ್ಚು ಮಕ್ಕಳು ಬ್ಲೋಯಿಂಗ್ ಗೇಮ್ಸ್, ಮನರಂಜನೆಗೆ ದೇಸಿ ಆಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಹೀಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಕ್ಕಳ ಹಬ್ಬದ ಕುರಿತು ತಿಳಿಸಿದರು. ಮಕ್ಕಳಹಬ್ಬದಲ್ಲಿ ಪ್ರಾರ್ಥನೆ, ಭಜನೆ, ಕೋಲಾಟ, ದೈಹಿಕ ಕಸರತ್ತು, ಭಾಷಣ, ಸಮೂಹನೃತ್ಯ, ಜನಪದ ಗೀತೆಗಳ ನೃತ್ಯ, ಹೊರಾಂಗಣ ಆಟಗಳಾದ ಬ್ಲೋಯಿಂಗ್ ಗೇಮ್ಸ್ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

      ಶಾಸಕ ಎ.ಎಸ್. ಜಯರಾಮ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗಂಗಾಂಜನೇಯ, ಮಹಾನಗರ ಪಾಲಿಕೆ ಉಪಮೇಯರ್ ರೂಪಶ್ರೀ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ, ಡಿಡಿಪಿಐ ಎಂ.ಆರ್. ಕಾಮಾಕ್ಷಮ್ಮ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ, ಜಿ.ಪಂ ಸದಸ್ಯ ನರಸಿಂಹಮೂರ್ತಿ, ಜಿಲ್ಲಾ ಬಾಲಭವನ ಸಂಘದ ಸದಸ್ಯರಾದ ಎನ್.ಎಸ್. ಜಯಕುಮಾರ್ ಮತ್ತು ನರಸಿಂಹಮೂರ್ತಿ, ಕಾರ್ಯಕ್ರಮ ಸಂಯೋಜಕಿ ಮಮತ, ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳು ಹಾಗೂ ಶಿಕ್ಷಕರು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(Visited 70 times, 1 visits today)