ತುಮಕೂರು:

      ನಗರದ ಸಿರಾಗೇಟ್ ಸಮೀಪದ ಅರಳಿಮರದ ಪಾಳ್ಯದ ರಸ್ತೆ ಸಮೀಪದ ಮನೆಯೊಂದರ ಮುಂಭಾಗ ಚಿರತೆ ಪ್ರತ್ಯಕ್ಷವಾಗಿ ಈ ಭಾಗದಲ್ಲಿ ಜನರಲ್ಲಿ ತೀವ್ರ ಭಯ ಭೀತಿ ಮೂಡಿಸಿದ ಘಟನೆ ಮುಂಜಾನೆ ನಡೆದಿದೆ.

      ನಗರದ ಅರಳೀಮರದ ರಸ್ತೆಯ ಸಮೀಪ ವಾಸವಾಗಿರುವ ಜಗದೀಶ್ ಎಂಬುವರು ನಂದಿನಿ ಬೂತ್ ನಡೆಸುತ್ತಿದ್ದು. ಇವರು ಎಂದಿನಂತೆ ಮುಂಜಾನೆ 4.30ಕ್ಕೆ ನಂದಿನಿ ಬೂತ್‍ಗೆ ತೆರಳಲು ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯ ಮುಂಭಾಗದಲ್ಲಿ ನಾಯಿ ಮಾದರಿಯಲ್ಲಿ ಚಿರತೆ ಮಲಗಿದೆ. ಇದನ್ನು ಗಮನಿಸದೆ ಮನೆಯ ಕಾಂಪೌಂಡ್ ಗೇಟ್‍ನಿಂದ ಹೊರಗೆ ಬಂದ ಜಗದೀಶ್ ಅವರನ್ನು ಕಂಡ ಚಿರತೆ ಘರ್ಜಿಸಿದೆ.

      ಚಿರತೆಯ ಘರ್ಜನೆ ಕೇಳಿದ ಜಗದೀಶ್ ಭಯದಿಂದ ಮನೆಯ ಒಳಗೆ ಓಡಿ ಹೋಗಿದ್ದಾರೆ. ತಕ್ಷಣ ಮನೆಯವರೆಲ್ಲಾ ಗೇಟ್ ಒಳಭಾಗದಿಂದಲೇ ಚಿರತೆಯನ್ನು ನೋಡಿದ್ದಾರೆ.  ನಂತರ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಈ ಕುಟುಂಬದವರು ಮಾಹಿತಿ ನೀಡಿದ್ದಾರೆ.

      ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದರಾದರೂ ಅಷ್ಟರಲ್ಲಿ ಚಿರತೆ ಅಲ್ಲಿಂದ ಮಾಯವಾಗಿತ್ತು.  ಅರಣ್ಯ ಇಲಾಖೆಯ ಅಧಿಕಾರಿ ಪ್ರಕಾಶ್ ಅವರು ಚಿರತೆ ಹೆಜ್ಜೆ ಗುರುತಗಳನ್ನು ಹುಡುಕಲು ಪ್ರಯತ್ನಿಸಿದರಾದರೂ ಸ್ಪಷ್ಟವಾಗಿ ತಿಳಿಯಲಿಲ್ಲ ಎನ್ನಲಾಗಿದೆ. ಆದರೆ ಜಗದೀಶ್ ಕುಟುಂಬದವರು ಅದು ಚಿರತೆಯೇ ಎಂದು ಖಚಿತವಾಗಿ ಹೇಳುತ್ತಿದ್ದಾರೆ.
ಹೀಗಾಗಿ ಈ ಭಾಗದ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದು, ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಪೊದೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

      ಘಟನೆಯ ಸುದ್ದಿ ತಿಳಿದ ಕೂಡಲೇ ಈ ಭಾಗದ ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹರಾಜು, ಸ್ಥಳೀಯರಾದ ಪರಮೇಶ್, ಮಂಜುಳ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.

(Visited 13 times, 1 visits today)