ತುಮಕೂರು :

      ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೊಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಕರೆ ನೀಡಿದರು.

      ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೊರಟಗೆರೆ ತಾಲ್ಲೂಕು ಕಾಶಾಪುರ ಗ್ರಾಮದ ಹಕ್ಕಿ-ಪಿಕ್ಕಿ ಜನಾಂಗದವರ ಕಾಲೋನಿಯಲ್ಲಿಂದು ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಬೇಕು.

      ಮತಪಟ್ಟಿಯಲ್ಲಿ ತಮ್ಮ ಹೆಸರಿದ್ದು, ಎಪಿಕ್ ಕಾರ್ಡ್ ಹೊಂದಿಲ್ಲದಿದ್ದರೂ 11 ಪರ್ಯಾಯ ದಾಖಲಾತಿಗಳಲ್ಲಿ ಯಾವುದಾದರು ಒಂದನ್ನು ಮತಗಟ್ಟೆಯಲ್ಲಿ ಹಾಜರುಪಡಿಸಿದರೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

      ಚುನಾವಣೆ ದಿನದಂದು ವಯೋವೃದ್ಧರು ಹಾಗೂ ವಿಕಲಚೇತನರು ಮತದಾನ ಮಾಡಲು ಅನುವಾಗುವಂತೆ ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆಯಲ್ಲದೆ, ಪ್ರತಿ ಮತಗಟ್ಟೆಯಲ್ಲಿಯೂ ಸ್ವಯಂ-ಸೇವಕರನ್ನು ನೇಮಕ ಮಾಡಲಾಗಿದೆ. ವಯೋವೃದ್ಧರು, ವಿಕಲಚೇತನರು ಸೇರಿದಂತೆ 18 ವರ್ಷ ತುಂಬಿದ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು ಎಂದು ತಿಳಿಸಿದರು.

      ಸ್ವೀಪ್ ಸಮಿತಿ ಸದಸ್ಯ ಹಾಗೂ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಮಾಂಕಾಳಪ್ಪ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವ ಹಕ್ಕನ್ನು ನಾವೆಲ್ಲಾ ಹೊಂದಿದ್ದು, ನಮ್ಮ ಹಕ್ಕನ್ನು ಚಲಾಯಿಸಲು ಹಿಂಜರಿಯಬಾರದು. ಮತದಾನ ಮಾಡುವ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರಲ್ಲದೆ, ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಅಕ್ರಮ, ದೂರು ದಾಖಲಿಸಲು ಸಿ-ವಿಜಿಲ್ ಆ್ಯಪ್ ಹಾಗೂ ಚುನಾವಣಾ ಮಾಹಿತಿ ಪಡೆಯಲು ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆ 1950ರ ಬಳಕೆ ಬಗ್ಗೆ ವಿವರಣೆ ನೀಡಿದರು.

      ಸ್ವೀಪ್ ಸಮಿತಿ ಸದಸ್ಯ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಆರ್. ರಾಜಕುಮಾರ್ ಮಾತನಾಡಿ ಈ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವ ಮೂಲಕ ದೇಶದ ಋಣವನ್ನು ತೀರಿಸಬೇಕಲ್ಲದೆ, ಮತದಾನ ಪ್ರಮಾಣವನ್ನು ಹೆಚ್ಚಿಸಬೇಕು ಹಾಗೂ ಮತ ಚಲಾಯಿಸುವಾಗ ಯಾರ ಒತ್ತಾಯಕ್ಕೂ ಮಣಿಯಬಾರದು ಎಂದು ಸಲಹೆ ನೀಡಿದರು.

      ಈ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‍ಗಳ ಬಳಕೆ ಬಗ್ಗೆ ಅರಿವು ಮೂಡಿಸಲಾಯಿತು ಹಾಗೂ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು. ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ಸದಸ್ಯ ಹಾಗೂ ನಿರ್ಮಿತಿ ಕೇಂದ್ರದ ರಾಜಶೇಖರ್, ಕೊರಟಗೆರೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಸರ್ವೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ರಂಗಪ್ಪ, ವಯಸ್ಕರ ಶಿಕ್ಷಣಾಧಿಕಾರಿ ಬಾಲಾಜಿ, ಮತ್ತಿತರರು ಹಾಜರಿದ್ದರು. ಸುಮಾರು ಒಂದು ಸಾವಿರ ಹಕ್ಕಿ-ಪಿಕ್ಕಿ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

      ಇದಕ್ಕೂ ಮುನ್ನ ಕಾಶಾಪುರ ಆಶ್ರಮ ಶಾಲೆಯಲ್ಲಿ ಡಾ: ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಮತದಾನ ಜಾಗೃತಿ ಕುರಿತು ಕೊರಟಗೆರೆ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದ ಬಳಿ ವಿಕಲಚೇತನರಿಂದ ಯಂತ್ರಚಾಲಿತ ತ್ರಿಚಕ್ರ ವಾಹನಗಳ ಮೂಲಕ ಜಾಥಾ ಹಾಗೂ ನವೀನ್ ಮತ್ತು ತಂಡದವರಿಂದ ಬೀದಿನಾಟಕ ಏರ್ಪಡಿಸಲಾಗಿತ್ತು.

ಅಂಗನವಾಡಿ ಕಾರ್ಯಕರ್ತರಿಗೆ ಮತದಾನ ಜಾಗೃತಿ :-

      ಕೊರಟಗೆರೆ ಪಟ್ಟಣದ ಗುರುಭವನದಲ್ಲಿ ಅಂಗನವಾಡಿ ಕಾರ್ಯಕರ್ತೆ/ ಆಶಾ ಕಾರ್ಯಕರ್ತೆ/ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗಾಗಿ ಮತದಾನ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸಿಇಓ ಶುಭಾ ಕಲ್ಯಾಣ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರಮೇಶ್, ಸಿಡಿಪಿಓ ಶಮಂತಕ ಮಣಿ, ಮತ್ತಿತರರು ಹಾಜರಿದ್ದರು.

(Visited 69 times, 1 visits today)