ರೈತರಿಂದ ರಾಷ್ಟ್ರಪತಿಗಳಿಗೆ ಮುಷ್ಕರದ ನೋಟೀಸ್!

ತುಮಕೂರು :

     ಸುಮಾರು 200ಕ್ಕೂ ಹೆಚ್ಚಿನ ರೈತ ಸಂಘಟನೆಗಳನ್ನು ಒಳಗೊಂಡ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (AIKSCC) ನೇತೃತ್ವದಲ್ಲಿ ದೇಶದಾದ್ಯಂತ ಹೋರಾಟ ನಡೆಸಿ ಪಾರ್ಲಿಮೆಂಟ್ ಚಲೋ ನಂತರ ವಿಶೇಷ ಸಂಸತ್ ನಡೆಸಲು ಒತ್ತಾಯಿಸಿ, ಭಾರತೀಯ ರೈತರ ಪ್ರನಾಳಿಕೆಯನ್ನು ಅಂಗೀಕರಿಸಿ ರೈತರ ಋಣಮುಕ್ತ ಮಸೂದೆ-2018 ಮತ್ತು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಸೂದೆ-2018ನ್ನು ಜಾರಿಗೊಳಿಸಲು ಒತ್ತಾಯಿಸಿ ನಡೆದ ಹೋರಾಟವನ್ನು ಕೇಂದ್ರ ಸರ್ಕಾರ ಪರಿಗಣಿಸದೇ ಇರುವುದನ್ನು ಖಂಡಿಸಿ ಜನವರಿ 3ರಂದು ರಾಷ್ಪ್ರಪತಿಗಳಿಗೆ ಮುಷ್ಕರದ ನೋಟೀಸ್ ನೀಡಿ ಈ ಬೇಡಿಕೆಗಳು ಈಡೇರದಿದ್ದಲ್ಲಿ ಜನವರಿ 8ರಂದು ದೇಶಾದ್ಯಂತ ಗ್ರಾಮೀಣಾ ಭಾರತ್ ಬಂದ್ ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ.

       ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದ ಸಭೆಯನ್ನುದ್ದೇಶಿಸಿ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ, ರೈತರ ಆತ್ಮಹತ್ಯೆಗಳು ಕರ್ನಾಟಕದಲ್ಲಿ ಹೆಚ್ಚಾಗಿದ್ದು ರೈತರು ಸಾಲವಸೂಲಿಗೆ ಸಿಲುಕಿದ್ದಾರೆ. ಉತ್ಪಾದನಾ ವೆಚ್ಚ ಸಹ ದುಬಾರಿಯಾಗಿದ್ದು ಕೃಷಿಗೆ ಖರ್ಚು ಮಾಡಿದ ಹಣಕ್ಕೆ ಒಂದೂವರೆ ಪಟ್ಟು ಲಾಭ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೂ ಸಹ ಜಾರಿಗೆ ತರದೆ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದರು.

      ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜ್ ಮಾತನಾಡಿ, ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು 6 ರೂಪಾಯಿ ಭಿಕ್ಷೆ ನೀಡಿ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ.

      ಜಿಲ್ಲೆಗೆ ಭೇಟಿ ನೀಡಿದ ಪ್ರಧಾನಿ ರೈತರ ಸ್ಥಳೀಯ ಸಮಸ್ಯೆಗಳಿಗಾಗಲಿ, ನೆರೆ-ಬರದಿಂದ ತತ್ತರಿಸಿರುವ ಜನರ ಬದುಕನ್ನು ಉಳಿಸುವ ಮಾರ್ಗವನ್ನು ಘೋಷಿಸದೆ ಕೇವಲ ಅಂಕಿಅಂಶಗಳನ್ನಷ್ಟೇ ನೀಡಿ ತಮ್ಮ ಕರ್ತವ್ಯದಿಂದ ರೈತರನ್ನು ವಂಚಿಸಿದ್ದಾರೆ ಎಂದು ಕಿಡಿಕಾರಿದರು.

      ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್ ಮಾತನಾಡಿ, ಕೃಷಿಯ ಮೂಲ ಸಮಸ್ಯೆಗಳನ್ನು ಪರಿಹರಿಸದೆ ವೃದ್ಧಾಶ್ರಮಗಳಾಗುತ್ತಿರುವ ಗ್ರಾಮಗ¼ನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಸಂಬಂಧಿತ ಪರಿಹಾರಗಳನ್ನು ಪ್ರಧಾನಿ ಮೋದಿ ಮೊದಲು ಕೈಗೆತ್ತಿಕೊಳ್ಳಬೇಕು. ಕೃಷಿಯನ್ನು ಕಾರ್ಪೋರೇಟ್ ಮತ್ತು ರಿಯಲ್ ಎಸ್ಟೇಟ್ ದಂಧೆಯಿಂದ ರಕ್ಷಿಸಬೇಕು ಎಂದರು.

       ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ. ಅಜ್ಜಪ್ಪ ಮಾತನಾಡಿ ಬಗರ್ ಹುಕುಂ ಸಾಗುವಳಿದಾರರ ಭೂಮಿ ಪ್ರಶ್ನೆ, ಜಿಲ್ಲೆಯ ಸಮಗ್ರ ನೀರಾವರಿ, ಕೃಷಿ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಯು ಅತ್ಯಂತ ಜರೂರಾಗಿದೆ. ಹೆಚ್ಚು ಜನರಿಗೆ ಉದ್ಯೋಗ ಕೊಡುವ ಕೃಷಿಯನ್ನು ಕಡೆಗಣಿಸಿರುವುದು ಕೇಂದ್ರ-ರಾಜ್ಯ ಸರ್ಕಾರಗಳ ನೀತಿಗಳನ್ನು ಹಿಮ್ಮೆಟ್ಟಿಸಲು ಇಂದು ಮುಷ್ಕರದ ನೋಟೀಸನ್ನು ರಾಷ್ಟ್ರಪತ್ರಿಯವರಿಗೆ ಸಲ್ಲಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು. ನಂತರ ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್ ಮಾಡುವ ಮೂಲಕ ಹಾಲು ಮತ್ತು ತರಕಾರಿ ಇತ್ಯಾದಿ ವಸ್ತುಗಳನ್ನು ಪಟ್ಟಣಕ್ಕೆ ಮಾರಾಟ ಮಾಡದೆ ಸಾಂಕೇತಿಕವಾಗಿ ಗ್ರಾಹಕರಿಗೆ ವಿತರಿಸುವ ಮೂಲಕ ಗ್ರಾಹಕರು ರೈತಕಾರ್ಮಿಕರು ಸೇರಿದಂತೆ ಎಲ್ಲರೂ ಜನವರಿ 8ರ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಲಾಯಿತು.ಪ್ರತಿಭಟನೆಯಲ್ಲಿ ಎಐಕೆಎಸ್‍ನ ಗಿರೀಶ್, ರಾಜ್ಯ ರೈತ ಸಂಘದ ರವೀಶ್, ಚಿಕ್ಕಬೈರೇಗೌಡ, ಮೂಡ್ಲಗಿರಿಯಪ್ಪ, ಬೋರೇಗೌಡ, ಉಮೇಶ್, ಪ್ರಾಂತ ರೈತ ಸಂಘದ ಲೋಕೇಶ್, ನರೇಂದ್ರ, ಲಕ್ಷ್ಮಣ್‍ಗೌಡ, ಶಂಕರಪ್ಪ ಸೇರಿದಂತೆ ತಾಲೂಕು ಮುಖಂಡರು ಉಪಸ್ಥಿತರಿದ್ದರು. ನೋಟೀಸನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಕಳಿಸಿಕೊಡಲಾಯಿತು. 

(Visited 5 times, 1 visits today)

Related posts

Leave a Comment