ತುಮಕೂರು:

      ರೈಲ್ವೆ ಖಾಸಗೀಕರಣದ ಭಾಗವಾಗಿ 109 ರೈಲುಗಳನ್ನು ಖಾಸಗಿಯವರಿಗೆ ವಹಿಸಲು ತೀರ್ಮಾನ ಕೈಗೊಂಡಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಹಾಗೂ ರೈತಪರ-ಜನಪರ ಸಂಘಟನೆಗಳ ಮುಖಂಡರು ತುಮಕೂರಿನ ರೈಲ್ವೆ ನಿಲ್ದಾಣದ ಎದುರು ಜುಲೈ 17ರಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.

      ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ 175 ವರ್ಷ ಹಳೆಯದಾದ 2 ಲಕ್ಷ ಕೋಟಿ ಆಸ್ತಿಯುಳ್ಳ 13 ಸಾವಿರ ಪ್ಯಾಸೆಂಜರ್ ಟ್ರೈನ್‍ಗಳನ್ನು ಓಡಿಸುವ ಬಡಜನರ ಸಾರಿಗೆ ಸಾಧನವಾದ ಜನತೆಯ ತೆರಿಗೆಯಲ್ಲಿ ಕಟ್ಟಲ್ಪಟ್ಟ ರೈಲ್ವೆಯನ್ನು ಖಾಸಗೀಕರಣ ಮಾಡುವ ಕ್ರಮ ದೇಶವಿರೋಧಿಯಾದುದು ಎಂದು ಆರೋಪಿಸಿದರು. ಇದನ್ನು ಜನಪರ ಸಂಘಟನೆಗಳು ವಿರೋಧಿಸಬೇಕು ಎಂದರು.

       ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಬಡವರ ರಥ ರೈಲ್ವೆ ಖಾಸಗೀಕರಣ ಮಾಡಬಾರದು. ಬಿಜೆಪಿ ನಿರಂತರವಾಗಿ ದೇಶದ ಆಸ್ತಿಯನ್ನು ಮಾರುತ್ತಿದೆ ಎಂದು ಹೇಳಿದರು.

      ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಹಾರ್ ಮಾತನಾಡಿ ಅಲ್ಪ ಪ್ರಯಾಣ ದರದ ಮೂಲಕ ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಿರುವ ರೈಲ್ವೆ ಖಾಸಗೀಕರಣ ಜನ ವಿರೋಧಿ ಎಂದರು.

      ಕೊಳಗೇರಿ ನಿವಾಸಿಗಳ ಹಿತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ ಮಾತನಾಡಿ ಕೊರೊನ ಸಂಕಷ್ಟದ ಸಂದರ್ಭ ಬಳಸಿ ವಯೋವೃದ್ಧರು, ಅಂಗವಿಕಲರು ಮತ್ತು ಮಹಿಳೆಯರಿಗೆ ವಿನಾಯಿತಿ ದರದಲ್ಲಿ ಪ್ರಯಾಣ ಅವಕಾಶ ಮಾಡುವ ರೈಲ್ವೆ ಖಾಸಗೀಕರಣ ಬೇಡವೇ ಬೇಡ ಎಂದು ತಿಳಿಸಿದರು.

        ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಛಾಲಕ ಸಿ.ಅಜ್ಜಪ್ಪ ಮಾತನಾಡಿ, ಕೋಟ್ಯಂತರ ರೈತರಿಗೆ ತಮ್ಮ ಉತ್ಪನ್ನಗಳನ್ನು ಹತ್ತಿರದ ಪಟ್ಟಣಗಳಲ್ಲಿ ಮಾರಲು, ಹೈನುಗಾರಿಕೆಗೆ ಸಹಾಯಕವಾಗಿರುವ ರೈಲ್ವೆ ಖಾಸಗೀಕರಿಸುವುದರಿಂದ ಕೃಷಿಕರಿಗೆ ಇರುವ ಸಂಕಟಗಳು ಹೆಚ್ಚಲಿವೆ ಎಂದು ಆಪಾದಿಸಿದರು.

      ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಪ್ರತಿಭಟನೆ ಬೆಂಬಲಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಆಟೋ ಯೂನಿಯನ್ ಇಂತಿಯಾಜ್ ಮೊದಲಾದವರು ಉಪಸ್ಥಿತರಿದ್ದರು. ಸ್ಟೇಷನ್ ಮಾಸ್ಟರ್ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿ ರೈಲ್ವೆ ಖಾಸಗೀಕರಣ ನಿಲ್ಲಿಸುವಂತೆ ಒತ್ತಾಯಿಸಲಾಯಿತು.

(Visited 16 times, 1 visits today)