ತುಮಕೂರು:
ಲಂಚ ಸ್ವೀಕಾರ ಪ್ರಕರಣವೊಂದರಲ್ಲಿ ಸಿಕ್ಕಬಿದ್ದಿದ್ದ ಕುಣಿಗಲ್ ಪುರಸಭೆ ಕಂದಾಯ ಅಧಿಕಾರಿ ವಿ.ರಮೇಶ್ ಅವರಿಗೆ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಧೀಂದ್ರನಾಥ್ ಅವರು, ಜನವರಿ 21ರಂದು ಆರೋಪಿಗೆ 4 ವರ್ಷ ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:-
ಪ್ರಕರಣ ಪೀಯಾರ್ದುದಾರ ಕುಣಿಗಲ್ ನಗರ ನಿವಾಸಿ ಶಬ್ಬೀರ್‍ಖಾನ್ ಎಂಬ ವ್ಯಕ್ತಿಯು ವಿಲ್ ಪ್ರಕಾರ ತನ್ನ ಹೆಂಡತಿ ಹೆಸರಿಗೆ ಭಾಗ ಬರಬೇಕಾಗಿದ್ದು, ಅದನ್ನು ಹೆಂಡತಿ ಹೆಸರಿಗೆ ಪಾವತಿ ಖಾತೆ ಮಾಡಿಕೊಂಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ ಆರೋಪಿ ರಮೇಶ್‍ನು 5000 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡ ಹಣವಾಗಿ 500 ರೂ.ಗಳನ್ನು ಪಡೆದಿದ್ದರು.
ಲಂಚ ಹಣವನ್ನು ನೀಡಲು ಇಷ್ಟವಿಲ್ಲದ ಶಬ್ಬೀರ್‍ಖಾನ್ ಕಂದಾಯ ಅಧಿಕಾರಿ ರಮೇಶ್ ಅವರು ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಕೇಳಿರುವ ಬಗ್ಗೆ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು 2014 ಜುಲೈ 7ರಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿದ್ದ ಹಿಂದಿನ ಪೊಲೀಸ್ ನಿರೀಕ್ಷಕರಾದ ಎಂ.ಆರ್.ಗೌತಮ್ ಅವರು ತನಿಖೆಯನ್ನು ಪೂರ್ಣಗೊಳಿಸಿ, 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಲೋಕಾಯುಕ್ತರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎನ್.ಬಸವರಾಜು ವಾದ ಮಂಡಿದ್ದರು.
ಪ್ರಕರಣದಲ್ಲಿ ಸಾಕ್ಷಿ ನೀಡುವ ವೇಳೆಯಲ್ಲಿ ಪ್ರತಿಕೂಲ ಸಾಕ್ಷಿಯನ್ನು ನೀಡಿರುವುದರಿಂದ ಪಿರ್ಯಾದುದಾರ ಶಬ್ಬೀರ್‍ಖಾನ್ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿ, ಫೆಬ್ರವರಿ 17ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.