ವಿಕಲಚೇತನರಿಗೆ ಅನುಕಂಪ ಬೇಡ-ಅವಕಾಶ ನೀಡಿ – ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್.

ತುಮಕೂರು :

      ವಿಕಲಚೇತನರಿಗೆ ಅನುಕಂಪಕ್ಕೆ ಬದಲಾಗಿ ಸಾಮಾನ್ಯರಂತೆ ಬದುಕಲು ಅವಕಾಶ ನೀಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅಭಿಪ್ರಾಯಪಟ್ಟರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಸರ್ಕಾರೇತರ ಶಾಲೆ/ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಬಾಲಭವನದಲ್ಲಿಂದು ಏರ್ಪಡಿಸಿದ್ದ “ವಿಶ್ವ ವಿಕಲಚೇತನರ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಸರ್ಕಾರವು ವಿಕಲಚೇತನರಿಗಾಗಿ ವಿಶೇಷ ಶಾಲೆಗಳ ಸೌಲಭ್ಯ ಒದಗಿಸಿದ್ದು, ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸಿದೆ. ಈ ನಿಟ್ಟಿನಲ್ಲಿ ವಿಕಲಚೇತನರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಬೇಕು. ಕಳೆದ 3 ವರ್ಷಗಳಿಂದ ಜಿಲ್ಲಾ ಪಂಚಾಯತಿಯಲ್ಲಿ ವಿಕಲಚೇತನರಿಗಾಗಿ ಮೀಸಲಾಗಿಟ್ಟಿದ್ದ ಸುಮಾರು 80ಲಕ್ಷ ರೂ. ಹಣವನ್ನು ಸ್ವಯಂ ಉದ್ಯೋಗ, ವ್ಯಾಪಾರ, ಕುರಿ ಸಾಕಾಣಿಕೆ, ತ್ರಿಚಕ್ರ ವಾಹನಗಳಿಗಾಗಿ ವೆಚ್ಚ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿಯೂ ನಿಗಧಿತ ಅನುದಾನವನ್ನು ವಿಕಲಚೇತನರ ವಿವಿಧ ಸೌಲಭ್ಯಗಳಿಗಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

 

      ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ಸರ್ಕಾರವು ವಿಕಲಚೇತನರಿಗಾಗಿ ಹಲವಾರು ಯೋಜನೆಗಳಡಿ ಆರ್ಥಿಕ ನೆರವನ್ನು ಒದಗಿಸುತ್ತಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಕಲಚೇತನರು ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಸ್ವಾವಲಂಬಿಯಾಗಿ ಬದುಕಿ ತೋರಿಸುವ ಛಲ ಹೊಂದಬೇಕೆಂದರು.

      ಜಿಲ್ಲಾ ಕಾನೂನು ಮತ್ತು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ್ ಜಿನರಾಳ್ಕರ್ ಮಾತನಾಡಿ, 1992ರಿಂದ ಪ್ರತಿವರ್ಷ ವಿಶ್ವ ವಿಕಲಚೇತನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸರ್ಕಾರವು ವಿಕಲಚೇತನರಿಗಾಗಿ ಉನ್ನತ ಹುದ್ದೆಯಲ್ಲಿ ಶೇ. 4ರಷ್ಟು ಹಾಗೂ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ. 5ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ ಎಂದು ಮಾಹಿತಿ ನೀಡಿದರು.

      ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಮಾತನಾಡಿ, ಅಂಗವೈಕಲ್ಯ ದೇಹಕ್ಕೆ ಮಾತ್ರ. ಮನಸ್ಸಿಗಲ್ಲ ಎಂಬುದನ್ನು ಅರಿತು ಆತ್ಮವಿಶ್ವಾಸದಿಂದ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುವತ್ತ ಮನಸ್ಸು ಮಾಡಬೇಕು ಎಂದರಲ್ಲದೆ, ತಾಯಂದಿರು ಗರ್ಭಾವಸ್ಥೆಯಲ್ಲಿ ಮುಂಜಾಗ್ರತೆ ಕ್ರಮ ವಹಿಸುವುದರಿಂದ ಅಂಗವೈಕಲ್ಯವನ್ನು ಬಹಳಷ್ಟು ಮಟ್ಟಿಗೆ ತಡೆಗಟ್ಟಬಹುದಾಗಿದೆ ಎಂದು ಸಲಹೆ ನೀಡಿದರು.

      ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕ ಎಸ್.ನಟರಾಜು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಂ.ರಮೇಶ್, ಮತ್ತಿತರರು ಹಾಜರಿದ್ದರು

(Visited 25 times, 1 visits today)

Related posts

Leave a Comment