ತುಮಕೂರು :

     ವೇತನಕ್ಕಾಗಿ ಬಾಕಿ ಇರುವ 382 ಕೋಟಿ ರೂ ಬಜೆಟ್‍ನಲ್ಲಿ ಸೇರಿಸಬೇಕು. ಬಾಕಿ ಇರುವ ಸಿಬ್ಬಂದಿಯನ್ನು ಇಎಫ್‍ಎಂಎಸ್‍ಗೆ ಸೇರಿಸಬೇಕು. ಬಾಕಿ ವೇತನ ಪಾವತಿಸಬೇಕು. ಬಿಲ್‍ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್ ಬಡ್ತಿ ಕೋಟಾ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ತುಮಕೂರಿನಲ್ಲಿ ಫೆ.24ರಂದು ನೌಕರರು ಪ್ರತಿಭಟನೆ ನಡೆಸಿದರು.

      ನಗರದ ಟೌನ್‍ಹಾಲ್‍ನಲ್ಲಿ ಸಮಾವೇಶಗೊಂಡ ಸಾವಿರಾರು ಮಂದಿ ಗ್ರಾಮ ಪಂಚಾಯಿತಿ ನೌಕರರು ಧರಣಿ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಇಓ ಶುಭ ಕಲ್ಯಾಣ್ ಅವರಿಗೆ ಮನವಿ ಸಲ್ಲಿಸಲಾಯಿತು.

      ಧರಣಿಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಗೋಪಾಲಕೃಷ್ಣ ಅರಳಳ್ಳಿ, ರಾಜ್ಯಾದ್ಯಂತ 65,000 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು ಇವರ ವೇತನಕ್ಕೆ ವಾರ್ಷಿಕ 900 ಕೋಟಿ ರೂ ಬೇಕಾಗಿದೆ. ಹಿಂದಿನ ಸರ್ಕಾರ 518 ಕೋಟಿ ಮಂಜೂರು ಮಾಡಿದೆ. ಇದು ಸಂಬಳಕ್ಕೆ ಸಾಕಾಗುವುದಿಲ್ಲ. ಹೀಗಾಗಿ ಸರ್ಕಾರ 14ನೇ ಹಣಕಾಸು ಆಯೋಗದ ಶೇಕಡ 10ರಷ್ಟಲ್ಲಿ ವೇತನಕ್ಕಾಗಿ ಬಳಸಿಕೊಳ್ಳಲು ಮಂಜೂರು ಮಾಡಿದೆ. ಆದರೂ ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಸದಸ್ಯರ ಒತ್ತಡಕ್ಕೆ ಒಳಗಾಗಿ ಸಿಬ್ಬಂದಿಗೆ ಶೇ. 10ರಷ್ಟರಲ್ಲಿ ಸಂಬಳ ಕೊಡುತ್ತಿಲ್ಲ ಎಂದು ಆರೋಪಿಸಿದರು.

      ಗ್ರಾಮ ಪಂಚಾಯಿತಿಗಳಲ್ಲಿ ಅಧಿಕೃತ ನಿರ್ಣಯ ಕೈಗೊಂಡು ನೇಮಕ ಮಾಡಿಕೊಂಡಿರುವುದನ್ನು ಖಾತ್ರಿಪಡಿಸಿಕೊಂಡು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿಲು ಸೂಚಿಸಿದೆ. ಇದಕ್ಕೆ ಹಣ ಬಿಡುಗಡೆ ಮಾಡಲು ಹಣಕಾಸು ಇಲಾಖೆ ಒಪ್ಪಿದೆ. ಆದರೆ ಒಂದು ವರ್ಷದಿಂದ ಇಎಫ್‍ಎಂಎಸ್ ಸೇರಿಸಲು ಸರ್ಕಾರದ ಆದೇಶ ಉಲ್ಲಂಘಿಸಿ ಸೇರಿಸುತ್ತಿಲ್ಲ. 15 ಸಾವಿರ ಸಿಬ್ಬಂದಿಗಳನ್ನು ಸೇರಿಸಿಲ್ಲ. ಅದರಿಂದ ಹಣಕಾಸು ಇಲಾಖೆಯಿಂದ ವೇತನ ಲಭ್ಯವಾಗುತ್ತಿಲ್ಲ ಎಂದು ಹೇಳಿದರು.

      2018-19ರ ಸಾಲಿನಲ್ಲಿ 25 ಸಾವಿರ ಸಿಬ್ಬಂದಿಗೆ ಒಂದು ವರ್ಷದಿಂದ, 43,250 ಸಿಬ್ಬಂದಿಗೆ 4-5 ತಿಂಗಳ ವೇತನ ಬಾಕಿ ಇದೆ. ಜೊತೆಗೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಬಿಲ್ ಕಲೆಕ್ಟರ್‍ಗಳು, ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್‍ಗಳು ಬಡ್ತಿ ನೀಡಿಲ್ಲ. ಗ್ರೇಡ್-2 ಗೆ ಬಡ್ತಿ ಕೋಟಾ ಶೇ.70 ರಿಂದ 100ರಷ್ಟು, ಲೆಕ್ಕ ಸಹಾಯಕರಲ್ಲಿ ಶೇ. 30 ರಿಂದ 50ಕ್ಕೆ ಕೋಟಾ ಹೆಚ್ಚಿಸಬೇಕಿದೆ. ವಿದ್ಯಾವಂತ ಪಂಪ್ ಆಪರೇಟರ್, ವಾಟರ್‍ಮನ್, ಕಸಗುಡಿಸುವವರು, ಜವಾ£ರಿಗೆ ನೇರ ಗ್ರೇಡ್-2 ಬಡ್ತಿ ನೀಡಬೇಕು. ಬಡ್ತಿ ಕೋಟಾ ಹೆಚ್ಚಳ, ಸೇವಾ ನಿಯಮಾವಳಿ ತಿದ್ದುಪಡಿ ಮಾಡಿ ಹೆಚ್ಚುವರಿ ಗ್ರೇಡ್-2 ಕಾಂiÀರ್iದರ್ಶಿ ಹೊಸ ಹುದ್ದೆ ಸೃಷ್ಟಿಸಬೇಕು ಎಂದು ಆಗ್ರಹಿಸಿದರು.

      ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕgರ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಬಿಲ್ ಕಲೆಕ್ಟರ್, ಕ್ಲರ್ಕ್ -ಕಂಪ್ಯೂಟರ್ ಆಪರೇಟರ್‍ಗಳಿಗೆ ಸರ್ಕಾರದ ಆದೇಶದ ಅನ್ವಯ ಪ್ರತಿವರ್ಷ ಜೇಷ್ಟತಾ ಪಟ್ಟಿ ತಯಾರು ಮಾಡಬೇಕು. ಗ್ರೇಡ್-2 ಕಾರ್ಯದರ್ಶಿ ಮತ್ತು ಎಸ್‍ಡಿಎ ಹುದ್ದೆಗೆ ಪದೋನ್ನತಿ ನೀಡಬೇಕು. ಗ್ರಾಮ ಪಂಚಾಯಿತಿಯಲ್ಲಿ ಖಾಲಿಯಾದ ಬಿಲ್ ಕಲೆಕ್ಟರ್ ಹುದ್ದೆಗೆ ಅದೇ ಗ್ರಾಮ ಪಂಚಾಯಿತಿಯಲ್ಲಿ ದುಡಿಯುತ್ತಿರುವ ಐದು ವರ್ಷ ಸೇವೆ ಸಲ್ಲಿಸಿರುವ ಎಸ್‍ಎಸ್‍ಎಲ್‍ಸಿ ಪಾಸಾದ ಇತರೆ ನೌಕರರಿಗೆ ಪದೋನ್ನತಿ ಮೂಲಕ ತುಂಬಬೇಕೆಂಬ ಆದೇಶವನ್ನು ಗ್ರಾಮ ಪಂಚಾಯಿತಿಗಳು ಪಾಲಿಸಬೇಕು ಎಂದು ಒತ್ತಾಯಿಸಿದರು.

      ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ನಾಗೇಶ್ ಮಾತನಾಡಿ, ಸರ್ಕಾರ ಅನುದಾನ ನೀಡುವ ಮುಂಚೆ ಗ್ರಾಮ ಪಂಚಾಯಿತಿಗಳು ಬಾಕಿ ವೇತನ ನೀಡಬೇಕು. ಸರ್ಕಾರದ ನಿಧಿಯಿಂದ ವೇತನವನ್ನು ಪಾವತಿಸಲು ಸಿಬ್ಬಂದಿಗಳ ದಾಖಲೆಗಳನ್ನು ಇಎಫ್‍ಎಂಎಸ್‍ನಲ್ಲಿ ಅಳವಡಿಸಲು ಗ್ರಾಮ ಪಂಚಾಯಿತಿಗಳು ಕ್ರಮ ವಹಿಸಬೇಕು. ನಿವೃತ್ತಿಯಾದ ಹಾಗೂ ಮರಣ ಹೊಂದಿದ ನೌಕರರ ಅವಲಂಬಿತರಿಗೆ ಸರ್ಕಾರದ ಆದೇಶದ ಅನ್ವಯ ನಿವೃತ್ತಿ ಉಪಧನ/ಮರಣೋತ್ತರ ಉಪಧನ ನೀಡಲು ಗ್ರಾಮ ಪಂಚಾಯಿತಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ತಿಪಟೂರಿನ ರಾಜು, ವಸಂತಕುಮಾರ್, ಚಿಕ್ಕನಾಯಕನಹಳ್ಳಿಯ ಲೋಕೇಶ್, ಮಧುಸೂದನ್, ಚಂದ್ರಪ್ಪ, ತುರುವೇಕೆರೆಯ ರಮೇಶ್, ಶಿರಾದ ಬಾಲರಾಜು, ಮುತ್ತುರಾಜು, ಗುಬ್ಬಿಯ ಬಷೀರ್ ಅಹಮದ್, ಕೊರಟಗೆರೆಯ ನಾಗಭೂಷಣ್, ಮಧುಗಿರಿಯ ಲಕ್ಷ್ಮೀಪತಿ, ಪರಮೇಶ್ ಕುಣಿಗಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

(Visited 137 times, 1 visits today)