ತುಮಕೂರು:

      ಕಾರ್ಮಿಕರ ಗಳಿಕೆ ಪಟ್ಟಿಯಲ್ಲಿರುವ ರಜೆಗಳನ್ನು ಕಡಿತಗೊಳಿಸದೆ ಪ್ರತಿ ತಿಂಗಳು 7ನೇ ತಾರೀಖಿನಂದು ವೇತನ ನೀಡಬೇಕು, ತುಟ್ಟಿಭತ್ಯ ನೀಡಬೇಕು, ಇಎಲ್ ನಗದೀಕರಣ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಸಾರಿಗೆ ಸಿಬ್ಬಂದಿ ತುಮಕೂರಿನ ಕೆಎಸ್‍ಆರ್‍ಟಿಸಿ ನಿಗಮದ ಎದುರು ಪ್ರತಿಭಟನೆ ನಡೆಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಸೈಯದ್ ಮುಜೀಬ್, ಸಾರ್ವಜನಿಕ ಉದ್ದಿಮೆಯಾದ ಸಾರಿಗೆ ನಿಗಮಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಬಾರದು. ಇದರಿಂದ ರಿಯಾರಿತಿ ದರದ ಪಾಸ್ ಪಡೆದಿರುವ ವಯೋವೃದ್ದರು, ಸ್ವಾತಂತ್ರ್ಯ ಹೋರಾಟಗಾರರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದರು.

       ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕು. ತೈಲ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಫ್ಯಾಬ್ರಿಕೇಶನ್ ಮೇಲಿನ ಅಬಕಾರಿ ತೆರಿಗೆ ಮತ್ತು ವ್ಯಾಪಾರ ತೆರಿಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

      ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಆರ್.ದೇವರಾಜ್ ಮಾತನಾಡಿ, ವೈದ್ಯಕೀಯ ವೆಚ್ಚವನ್ನು ಮರುಪಾವತಿ ಮಾಡಬೆಕು. ಸಾರಿಗೆ ನಿಗಮಗಳಿಗೆ ವಿದ್ಯಾರ್ಥಿ/ಮತ್ತಿತರೆ ಪಾಸುಗಳ ಬಾಬ್ತು ನೀಡಬೇಕಾಗಿರುವ 3 ಸಾವಿರ ಕೋಟಿ ನೀಡಬೇಕು ಎಂದು ಮನವಿ ಮಾಡಿದರು.

      ಕೋವಿಡ್-19ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಪ್ರತಿ ಸಾರಿಗೆ ನಿಗಮಗಳಿಗೆ 500 ಕೋಟಿ ಸಂಕಷ್ಟ ಧನಸಹಾಯ ನೀಡಬೇಕು. ಕೊರೊನ ಸೋಂಕಿನಿಂದ ನಿಧನರಾದ ಸಿಬ್ಬಂದಿಗೆ 50 ಲಕ್ಷ ವಿಮೆ ಘೋಷಣೆ ಮಾಡಬೇಕು. ಪಿಪಿಇ ಕಿಟ್ ನೀಡಬೇಕು. ನಿವೃತ್ತ ಕಾರ್ಮಿಕರಿಗೆ ನೀಡಬೇಕಾಗಿರುವ ಹಣವನ್ನು ಕೂಡಲೇ ನೀಡಬೇಕು. ಕಾರ್ಮಿಕ ವಿರೋಧಿಯಾದ ಎಲ್ಲಾ ಸುತ್ತೋಲೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

      ಇದೇ ವೇಳೆ ತುಮಕೂರು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಮತ್ತು ಎಸ್.ಒ ಲಕ್ಷ್ಮಣ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಾರಿಗೆ ಸಿಬ್ಬಂದಿಗೆ ಕೇವಲ 1200 ರೂಪಾಯಿ ವೇತನ ಬಂದಿದೆ ಎಂಬುದನ್ನು ಗಮನಕ್ಕೆ ತಂದಾಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

      ಪ್ರತಿಭಟನೆಯಲ್ಲಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಮೀಉಲ್ಲಾ, ಉಪಾಧ್ಯಕ್ಷ ಕೆ.ಜಯಕುಮಾರ್, ಖಜಾಂಚಿ ಕೆ.ರಾಜಣ್ಣ ಸಹಕಾರ್ಯದರ್ಶಿ ಪಿ.ಎನ್.ರಾಜಣ್ಣ, ಸತೀಶ್, ಪಿ.ಶಶಿಧರ್, ಕಲಂದರ್ ಮೊದಲಾದವರು ಇದ್ದರು.

(Visited 62 times, 1 visits today)