ತುಮಕೂರು


ಶಿಕ್ಷಣವೆಂದರೆ ಕೇವಲ ಅಕ್ಷರಗಳಲ್ಲ.ಮಗುವಿನ ಸಮಗ್ರ ವಿಕಾಶ ಎಂದು ತುಮಕೂರು ಮೇಯರ್ ಶ್ರೀಮತಿ ಪ್ರಭಾವತಿ ಎಂ.ಸುಧೀಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲಭವನದಲ್ಲಿ ಸಿದ್ದಗಂಗಾ ಬಡಾವಣೆಯ 35ನೇ ಕ್ರಾಸ್‍ನಲ್ಲಿರುವ ಎಸ್.ಹೆಚ್.ವಿ.ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ “ಸ್ಪೂರ್ತಿ” ಉದ್ಘಾಟಿಸಿ ಮಾತನಾಡುತಿದ್ದ ಅವರು,ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿದೆ. ಅದಕ್ಕೆ ಪೂರಕವೆಂಬಂತೆ ಶಾಲಾ ಪೂರ್ವ ಶಿಕ್ಷಣ ಮನೆಯಲ್ಲಿಯೇ ದೊರೆತರೆ ಮಕ್ಕಳಲ್ಲಿ ಹೆಚ್ಚು ಪ್ರಜ್ಞಾವಂತಿಕೆಯನ್ನು ಕಾಣಬಹುದೆಂದರು.
ಶಿಕ್ಷಣ ಇಂದು ಎಲ್ಲರಿಗೂ ಅಗತ್ಯವಿದೆ.ಒಂದು ದೇಶದ ಬೆಳೆವಣಿಗೆಯನ್ನು ಅಲ್ಲಿನ ರಸ್ತೆ,ಕಟ್ಟಡಗಳಿಂತ ಜನರಿಗೆ ದೊರೆಯುತ್ತಿರುವ ಶಿಕ್ಷಣ ಹಾಗೂ ಅದರಿಂದ ಆಗುತ್ತಿರುವ ಪ್ರಯೋಜನಗಳ ಮೇಲೆ ಅಳೆಯಲಾಗುತ್ತಿದೆ.ಹಾಗಾಗಿ ಇಂದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿದೆ.ಮಕ್ಕಳ ಮನಸ್ಸು ಅತ್ಯಂತ ಮೃದು,ಅದನ್ನು ಹಾಳು ಮಾಡದಂತೆ ಮಕ್ಕಳಲ್ಲಿ ಮಾನವೀಯ ಆಂತಃಕರಣ ತುಂಬುವ ಕೆಲಸವನ್ನು ಶಿಕ್ಷಕರು ಮಾಡುವ ಮೂಲಕ ಒರ್ವ ಉತ್ತಮ ಪ್ರಜೆಯಾಗಿ ರೂಪಿಸಬೇಕೆಂದು ಮೇಯರ್ ಪ್ರಭಾವತಿ ಸುಧೀಶ್ವರ ತಿಳಿಸಿದರು.
ಮಕ್ಕಳ ತಜ್ಞ ಡಾ.ರಾಜಶೇಖರ್ ಮಾತನಾಡಿ,ಆರೋಗ್ಯವಂತ ಮಗುವಿನಲ್ಲಿ ಮಾತ್ರ,ಒಳ್ಳೆಯ ಮನಸ್ಸು ಇರಲು ಸಾಧ್ಯ ಹಾಗಾಗಿ ಶಿಕ್ಷಣ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಆಗಾಧವಾದ ಪರಿಣಾಮವನ್ನು ಬೀರುತ್ತದೆ.ಶಾಲೆಗಿಂತ ಮನೆಯಲ್ಲಿ ಮಗುವಿಗೆ ಯಾವ ರೀತಿಯ ವಾತಾವರಣವಿದೆ ಎಂಬುದು ಮುಖ್ಯ. ಹಾಗಾಗಿ ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದನ್ನು,ಅವರಿಗೆ ಒಳ್ಳೆಯದು,ಕೆಟ್ಟದ್ದರ ಪರಿಚಯ ಮಾಡಿಸುವ ಕೆಲಸ ಮಾಡಬೇಕು. ಸ್ನೇಹಿತರು, ಹಿರಿಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಸುವುದು ಒಳ್ಳೆಯದು,ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ, ನಾಗರಿಕತೆಯನ್ನು ಕಲಿಸುವ ಅಗತ್ಯವಿದೆ. ಈ ಕೆಲಸದಲ್ಲಿ ಶಿಕ್ಷಕರಿಗಿಂತ ಫೋಷಕರ ಪಾತ್ರ ದೊಡ್ಡದಿದೆ ಎಂದರು.
ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ,ಶಿಕ್ಷಣವೆಂದರೆ ಕತ್ತಲೆಯಿಂದ ಬೆಳಕಿನಡೆಗೆ ಮಗುವನ್ನು ತೆಗೆದುಕೊಂಡು ಹೋಗುವ ಪ್ರಕ್ರಿಯೆ.ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸಿ,ಈ ದೇಶ ಕಾಯುವ ಸಮರ್ಥ ಸೈನಿಕನನ್ನು ರೂಪಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ.ಹಾಗೆಯೇ ಮಕ್ಕಳಲ್ಲಿ ಭ್ರಷ್ಟಾಚಾರ, ಜಾತಿಯತೆ ಕುರಿತು ತಿಳಿ ಹೇಳಿ, ಇತರೊಂದಿಗೆ ಮುಕ್ತವಾಗಿ ಬೆರೆತು, ಆಟೋಟಗಳಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್ ಮಾತನಾಡಿ,ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ,ಪ್ರೋತ್ಸಾಹಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಹೆಚ್.ವಿ. ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ನಳಿನಿ ಪ್ರಸಾದ್, ಶಾಲೆಯ ವರದಿ ಮಂಡಿಸಿ,ಕಳೆದ 10 ವರ್ಷಗಳಿಂದ ಮಕ್ಕಳಿಗೆ ಸಂಗೀತ, ಡ್ಯಾನ್ಸ್,ವಿಜ್ಞಾನ, ತಂತ್ರಜ್ಞಾನ ಹಾಗೂ ಜಾನಪದ ಕಲೆಗಳ ಮೂಲಕವೂ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಶಾಲೆಯ ಅಡಳಿತ ಮಂಡಳಿಯ ಮಂಜು ಪ್ರಸಾದ್,ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.ಶಾಲೆಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.

(Visited 1 times, 1 visits today)