ಶೇ 10ರ ರಿಯಾಯಿತಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ

 ತುಮಕೂರು:

      ಹೊಸ ವರ್ಷದ ಅಂಗವಾಗಿ ಹಾಗೂ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಹಿನ್ನೆಲೆಯಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಆಯೋಜಿಸಿದ್ದ ನಂದಿನ ಸಿಹಿ ಉತ್ಪನ್ನಗಳ ಶೇ10ರ ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಸವ ಮಾರಾಟ ಪ್ರಕ್ರಿಯೆಗೆ ಬುಧವಾರ ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಪ್ಪ ಚಾಲನೆ ನೀಡಿದರು.

      ನಗರದ ಜಿಲ್ಲಾ ಪಂಚಾಯಿತಿ ಸಮೀಪವಿರುವ ನಂದಿನಿ ಉತ್ಪನ್ನಗಳ ಮಳಿಗೆಯಲ್ಲಿ ಮಾರುಕಟ್ಟೆಗೆ ಶೇ10ರ ರಿಯಾಯಿತಿ ದರದ ಉತ್ಪನ್ನಗಳ ಬಿಡುಗಡೆ ಮಾಡಿ, ಗ್ರಾಹಕರಿಗೆ ನೀಡುವ ಮೂಲಕ ಡಿಸೆಂಬರ್ 21 ರಿಂದ 2019 ರ ಜನವರಿ 09ರವರೆಗೆ ಇರುವ ರಿಯಾಯಿತಿ ಮಾರಾಟ ಆರಂಭಿಸಿದರು.

      ಈ ವೇಳೆ ಮಾತನಾಡಿದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಪ್ಪ,ಇಂದು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಇಡೀ ದೇಶದಲ್ಲಿಯೇ ಗುಣಮಟ್ಟದಲ್ಲಿ ಮತ್ತು ರುಚಿಯಲ್ಲಿ ಹೆಸರುವಾಸಿಯಾಗಿವೆ.ಆದ್ದರಿಂದ ನಂದಿನಿ ಸಿಹಿ ಉತ್ಪನ್ನಗಳಿಗೆ ಬಾರಿ ಬೇಡಿಕೆಯಿದೆ. ಹೊಸದ ಹಿನ್ನೆಲೆಯಲ್ಲಿ ಸಿಹಿ ಖರೀದಿಸುವವರು,ತಾಜಾ ಮತ್ತು ಗುಣಮಟ್ಟದಿಂದ ಕೂಡಿದ ನಂದಿನಿ ಉತ್ಪನ್ನಗಳನ್ನು ಖರೀದಿಸಿ, ಬಳಸುವ ಮೂಲಕ ಹೊಸ ವರ್ಷ ಆಚರಿಸುವಂತೆ ಕರೆ ನೀಡಿದರು.

      ನಂದಿನಿ ಹಾಲಿನಿಂದ ತೆಗೆಯುವ ತುಪ್ಪ ಬಳಸಿ ತಯಾರಿಸಿರುವ ಹಾಲಿನ ಪೇಡ, ಮೈಸೂರು ಪಾಕ್, ಕ್ಯಾಷು ಬರ್ಫಿ, ಕೋಕೋ ನೆಟ್ ಬರ್ಫಿ, ಬಾದಾಮ್ ಬರ್ಫಿ, ಚಾಕುಲೇಟ್ ಬರ್ಫಿ, ಡೈಪ್ರೂಟ್ಸ್ ಬರ್ಫಿ, ಧಾರವಾಡ ಪೇಡ, ಕುಂದಾ, ಜಾಮೂನು ರಸಗುಲ್ಲಾ, ಬೆಸನ್ ಲಾಡು ಸೇರಿದಂತೆ 68ಕ್ಕೂ ಹೆಚ್ಚು ನಂದಿನಿ ಉತ್ಪನ್ನಗಳು ಇಂದು ಮಾರುಕಟ್ಟೆಯಲ್ಲಿದ್ದು, ನಂದಿನಿ ಉತ್ಪನ್ನಗಳನ್ನು ಕೊಳ್ಳುವುದರಿಂದ ರೈತರಿಗೆ ನೆರವಾಗಲು ಸಾಧ್ಯ ಎಂದು ಮಹಾಲಿಂಗಪ್ಪ ತಿಳಿಸಿದರು.

      ತುಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಮುನೇಗೌಡ ಮಾತನಾಡಿ, ಹೈನುಗಾರರಿಂದ ಪಡೆದ ಹಾಲನ್ನು ಸಂಸ್ಕರಿಸಿ ಗ್ರಾಹಕರಿಗೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.ಕೆ.ಎಂ.ಎಫ್ ಅವರ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ನಂದಿನಿ ಮಳಿಗೆಗಳಲ್ಲಿ ಶೇ10ರ ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಇದರ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

(Visited 22 times, 1 visits today)

Related posts

Leave a Comment