ಶ್ರೀಗಳ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ ರೂಪಿಸಲು ಆಯವ್ಯಯದಲ್ಲಿ ಮಂಡನೆ

 ತುಮಕೂರು:

      ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಸರ್ಕಾರದ ವತಿಯಿಂದ ಕಾರ್ಯಕ್ರಮವೊಂದನ್ನು ರೂಪಿಸಲು ಬರುವ ಆಯವ್ಯಯದಲ್ಲಿ ಮಂಡಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು.

      ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಿಂಗೈಕ್ಯ ಪರಮ ಪೂಜ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿಯವರ ಅವರ ನೆನಪು ಉಳಿಯುವಂತಹ ಸರ್ಕಾರದಿಂದ ಯಾವುದಾದರೊಂದು ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡಲು ಬರುವ ಆಯವ್ಯಯದಲ್ಲಿ ಮಂಡಿಸಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.

      ಶ್ರೀಗಳು ಲಿಂಗೈಕ್ಯರಾಗಿ ಇಂದಿಗೆ 5 ದಿನಗಳು ಕಳೆದಿದ್ದು, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡಿರುವ ಶ್ರೀಗಳಂತಹ ಪುಣ್ಯ ಪುರುಷರು ಮತ್ತೊಮ್ಮೆ ಸಾರ್ವಜನಿಕ ಬದುಕಿನಲ್ಲಿ ಹುಟ್ಟಿ ಬರಲು ಸಾಧ್ಯವಿಲ್ಲ. ಅವರ ಕಾಲಘಟ್ಟದಲ್ಲಿ ಬದುಕಿದ್ದೆವು ಎನ್ನುವುದು ನಮ್ಮೆಲ್ಲರ ಭಾಗ್ಯ. ಜನಸಮುದಾಯಕ್ಕಾಗಿ ಅವರು ಮಾಡಿರುವ ಕಲ್ಯಾಣ ಕಾರ್ಯಕ್ರಮಗಳು ನಾವೆಂದೂ ಮರೆಯುವಂತಿಲ್ಲ. ಲಕ್ಷಾಂತರ ಕುಟುಂಬಗಳ ಮನೆಯನ್ನು ಬೆಳಗಿದ ಜ್ಯೋತಿಯಾಗಿದ್ದ ಶ್ರೀಗಳು ಭೌತಿಕವಾಗಿ ನಮ್ಮೊಡನೆ ಇರದಿದ್ದರೂ ಅವರ ಸೇವಾ ಕಾರ್ಯಗಳು ಸದಾ ನಮ್ಮ ನೆನಪಿನಲ್ಲಿರುತ್ತದೆ ಎಂದರು.

      ಅವರ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದರೂ ಯಾವುದೇ ತೊಂದರೆಯಿಲ್ಲದೆ ಕಾರ್ಯಗಳು ಸುಸೂತ್ರವಾಗಿ ಜರುಗಿವೆ. ದರ್ಶನಕ್ಕೆ ಬರಲು ಸಾಧ್ಯವಾಗದ ಭಕ್ತಾದಿಗಳು ಮಾಧ್ಯಮಗಳ ಮೂಲಕ ಶ್ರೀಗಳ ಅಂತ್ಯಕ್ರಿಯೆಯನ್ನು ವೀಕ್ಷಿಸಿ ಗೌರವವನ್ನು ಸಲ್ಲಿಸಿದ್ದಾರೆ ಎಂದರು.

      ಶ್ರೀಗಳನ್ನು ಸಮಾಜದಲ್ಲಿ ದೈವೀಪುರುಷರನ್ನಾಗಿ ಮುಂದಿನ ದಿನಗಳಲ್ಲಿ ನಾವು ನೆನಪಿಸಿಕೊಳ್ಳುತ್ತೇವೆ. ಈ ಸಿದ್ದಗಂಗಾ ಕ್ಷೇತ್ರದ ಬೆಳವಣಿಗೆಗೆ ಅವರ ಆಶೀರ್ವಾದ ಸದಾ ಇರುತ್ತದೆ ಎಂದು ಭಾವಿಸಿದ ಅವರು ಶ್ರೀಗಳ ಅಗಲಿಕೆಯಿಂದ ಕಿರಿಯ ಸ್ವಾಮೀಜಿ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಮೇಲೆ ಬಹುದೊಡ್ಡ ಜವಾಬ್ದಾರಿಯಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಕಿರಿಯ ಶ್ರೀಗಳೊಂದಿಗೆ ನಾವೆಲ್ಲ ಸದಾ ಇರುತ್ತೇವೆ ಎಂದು ತಿಳಿಸಿದರು.

      ಲಕ್ಷಾಂತರ ಭಕ್ತಾದಿಗಳು ಅತ್ಯಂತ ಸಂಯಮದಿಂದ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಶ್ರೀಗಳ ಅಂತಿಮ ದರ್ಶನವು ಎಲ್ಲಿಯೂ ಲೋಪವಾಗದ ರೀತಿಯಲ್ಲಿ ಶಾಂತ ರೀತಿಯಿಂದ ನಡೆಸಲು ವ್ಯವಸ್ಥೆ ಕಲ್ಪಿಸಿದ್ದ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ದಿವ್ಯಾ ಗೋಪಿನಾಥ್, ಕೇಂದ್ರ ವಲಯದ ಐಜಿಪಿ ದಯಾನಂದ್ ಸೇರಿದಂತೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ಕಾರ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಗಲಿರುಳೆನ್ನದೆ ಲಿಂಗೈಕ್ಯ ಶ್ರೀಗಳ ಹಿನ್ನೆಲೆ, ಅವರು ಬೆಳೆದು ಬಂದ ದಾರಿ, ಸೇವೆ, ಪರಿಶ್ರಮಗಳ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರಿಸಿ ಇಡೀ ವಿಶ್ವದ ಜನತೆಗೆ ತಲುಪಿಸಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಸೂಚಿಸಿದರು.

      ಶ್ರೀಗಳ ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಅಂತ್ಯ ಕ್ರಿಯೆಯ ವಿಧಿವಿಧಾನಗಳು ಪೂರ್ಣಗೊಳ್ಳುವವರೆಗೆ ಮಠದಲ್ಲಿಯೇ ಉಪಸ್ಥಿತರಿದ್ದ ಮುಖ್ಯಮಂತ್ರಿಗಳು, ವಿರೋಧಪಕ್ಷದ ನಾಯಕರು, ಸಚಿವರು, ಗಣ್ಯರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

 

      ಬರುವ ಜನವರಿ 31ರಂದು ನಡೆಯಲಿರುವ ಶ್ರೀಗಳ ಪುಣ್ಯಸ್ಮರಣೆ ಸಮಾರಂಭದ ನುಡಿನಮನದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಗಣ್ಯರು ಭಾಗವಹಿಸಲಿದ್ದು, ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸರ್ಕಾರದಿಂದಲೇ ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

      ಶ್ರೀಗಳ ಶೋಕಾಚರಣೆ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಎಂ ಖರ್ಗೆ ಅವರು ಬೆಂಗಳೂರಿನಲ್ಲಿ 3 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿರುವ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಯವರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಕಾರ್ಯಕ್ರಮವನ್ನು ನಡೆಸಿಲ್ಲ. ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಸಂವಿಧಾನದ ಬಗ್ಗೆ ಚರ್ಚಿಸುವ ಪೂರ್ವನಿಯೋಜಿತ ಕಾರ್ಯಕ್ರಮವಾಗಿದ್ದರಿಂದ ದೇಶ-ವಿದೇಶಗಳಿಂದ ಆಗಮಿಸಿದ್ದವರಿಗೆ ಅನಾನುಕೂಲವಾಗಬಾರದೆಂದು ಕಾರ್ಯಕ್ರಮವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕಾಯಕವೇ ಕೈಲಾಸ ಎಂಬ ಭಾವನೆಯಿಂದ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಗಿದೆ. ಸ್ವಾಮೀಜಿಗಳ ಮೇಲೆ ಅವರಿಗೆ ಅಪಾರ ಗೌರವವಿದೆ. ಆದಾಗ್ಯೂ ತಪ್ಪಾಗಿದ್ದರೆ ಈಗಾಗಲೇ ಕ್ಷಮೆಯನ್ನೂ ಕೂಡ ಕೇಳಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.

      ಲಿಂ. ಸ್ವಾಮೀಜಿಗಳ ಪುತ್ಥಳಿ ಸ್ಥಾಪನೆ ಕುರಿತಂತೆ ಕಿರಿಯ ಶ್ರೀಗಳೊಂದಿಗೆ ಚರ್ಚಿಸಿದ ನಂತರ ನಿರ್ಣಯ ಕೈಗೊಳ್ಳಲಾಗುವುದೆಂದರು. ನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಾಂತ್ವನ, ಧೈರ್ಯ ನೀಡಿದ ಅವರು, ಪುಣ್ಯ ಸ್ಮರಣೆ ಸಮಾರಂಭದ ಬಗ್ಗೆ ಚರ್ಚಿಸಿದರು.

      ಈ ಸಂದರ್ಭದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಉಪವಿಭಾಗಾಧಿಕಾರಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

(Visited 27 times, 1 visits today)

Related posts

Leave a Comment