ಸಿದ್ದರಾಮಯ್ಯ ರಾಜೀನಾಮೆ ವಾಪಸ್‍ಗೆ ಒತ್ತಾಯ!!

ತುಮಕೂರು :

      ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹ ವ್ಯಕ್ತಪಡಿಸಿದರು.

      ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಲಕ್ಕಪ್ಪ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರನ್ನು ಹೊಣೆ ಮಾಡಿರುವುದು ಸರಿಯಲ್ಲ, ಅವರು ರಾಜೀನಾಮೆ ಹಿಂಪಡೆಯುವ ಮೂಲಕ ಅವರನ್ನು ಮುಂದುವರೆಸುವಂತೆ ಒತ್ತಾಯಿಸಿದರು.

      ಕಾಂಗ್ರೆಸ್ ಪಕ್ಷವನ್ನು ಉಳಿಸಬೇಕೆಂದರೆ ಸಿದ್ದರಾಮಯ್ಯ ಅವರನ್ನು ಮುಂದುವರೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು, ಏಕಾಂಗಿ ಪಕ್ಷದ ಪರ ಪ್ರಚಾರ ಮಾಡಿದ ಸಿದ್ದರಾಮಯ್ಯ ಅವರಿಗೆ ಮುಖಂಡರ ಅಸಹಕಾರವೇ ಕಾರಣ ಎಂದರು.

      ಪ್ರಚಾರದಲ್ಲಿ ಭಾಗವಹಿಸದ ಮುಖಂಡರ ಮೇಲೆ ಪಕ್ಷ ಶಿಸ್ತುಕ್ರಮ ಜರುಗಿಸಬೇಕೆ ಹೊರತು, ಪಕ್ಷದ ಗೆಲುವಿಗಾಗಿ ಹೋರಾಡಿದವರ ಮೇಲೆ ಅಲ್ಲ, ರಾಷ್ಟ್ರ ಮತ್ತು ರಾಜ್ಯದಲ್ಲಿ ಮುಖಂಡರು ಎನಿಸಿಕೊಂಡವರು ಚುನಾವಣೆಯಲ್ಲಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸಲಿಲ್ಲ ಹೀಗಾಗಿ ಸಿದ್ದರಾಮಯ್ಯ ಅವರನ್ನು ಸೋಲಿಗೆ ಹೊಣೆ ಮಾಡುವುದು ಸರಿಯಲ್ಲ ಎಂದು ಆಗ್ರಹಿಸಿದರು.

      ಕಾಂಗ್ರೆಸ್ ಮುಖಂಡ ರಾಜೇಶ್ ದೊಡ್ಮನೆ ಮಾತನಾಡಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರ ಹಿಂದೆ ಹಣದ ಹೊಳೆಯೇ ಹರಿದಿದೆ. ಚುನಾವಣೆಯಲ್ಲಿ ತತ್ವ ಸಿದ್ಧಾಂತದ ಮೇಲೆ ಚುನಾವಣೆಯನ್ನು ಎದುರಿಸಿದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೊಣೆಗಾರಿಕೆ ಮಾಡುತ್ತಿರುವುದು ಸರಿಯಲ್ಲ ಎಂದರು.

      ಚುನಾವಣೆಯಲ್ಲಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸಿದ ಮುಖಂಡರು ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಸಿದ್ದರಾಮಯ್ಯ ಅವರು ಅನಿವಾರ್ಯವಾಗಿದ್ದು, ರಾಜ್ಯದಲ್ಲಿ ವರ್ಚಸ್ವಿ ಯಾಗಿರುವ ಸಿದ್ದರಾಮಯ್ಯ ಅವರು ರಾಜೀನಾಮೆಯನ್ನು ಹಿಂಪಡೆಯುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಕಟ್ಟಬೇಕು ಎಂದು ಹೇಳಿದರು.

      ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್, ಸುರೇಶ್, ಲಕ್ಷ್ಮೀನಾರಾಯಣ್, ಮೋಹನ್, ಅನಿಲ್, ತು.ಬಿ.ಮಲ್ಲೇಶ್, ಸುನೀತಾ ನಟರಾಜ್, ಜ್ವಾಲಾಮಾಲಾ ರಾಜಣ್ಣ, ರಾಕೇಶ್, ಮಹೇಶ್ ಸೇರಿದಂತೆ ಇತರರಿದ್ದರು

(Visited 19 times, 1 visits today)

Related posts

Leave a Comment