ಸಿದ್ದರಾಮೇಶ್ವರರ ಜಯಂತೋತ್ಸವ ಭಕ್ತರಿಂದಲೇ ಪೂರ್ವ ಸಿದ್ಧತೆ

ಗುಬ್ಬಿ :

      ಸಾಮಾಜಿಕ ನ್ಯಾಯಕ್ಕೆ ವಚನಗಳ ಮೂಲಕ ಬದ್ದತೆ ತೋರಿದ ಶರಣ ಸಿದ್ದರಾಮೇಶ್ವರರ ಜಯಂತೋತ್ಸವ ಅದ್ದೂರಿಗಾಗಿ ಪೂರ್ವ ಸಿದ್ದತೆಯನ್ನು ಸ್ವಯಂ ಸೇವಕರಾಗಿ ನೂರಾರು ಭಕ್ತರೇ ನಡೆಸಿಕೊಡುತ್ತಿದ್ದಾರೆ.

      ಬೆಟ್ಟದಹಳ್ಳಿ ಗವಿಮಠದ ನಿರ್ವಹಣೆಯಲ್ಲಿ ನಡೆಯಲಿರುವ 846 ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಶ್ರೀ ಚಂದ್ರಶೇಖರ ಸ್ವಾಮೀಜಿಗಳ ಮಾಗದರ್ಶನದಲ್ಲಿ ಎಲ್ಲಾ ಭಕ್ತರು, ಮುಖಂಡರು ಪಕ್ಷಾತೀತವಾಗಿ ನಡೆಸಿದ್ದಾರೆ. ಜನವರಿ 14 ಮತ್ತು 15 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು 40 ಎಕರೆ ವಿಶಾಲ ಪ್ರದೇಶವನ್ನ ಬಾಗೂರು ಗೇಟ್ ಬಳಿ ಸಿದ್ದಗೊಳಿಸಲಾಗುತ್ತಿದೆ. ವಿಶಾಲವಾದ ಪೆಂಡಾಲ್ 20 ಸಾವಿರ ಆಸನಗಳ ವ್ಯವಸ್ಥೆ ಮಾಡಬಹುದಾಗಿದೆ. ಹೆದ್ದಾರಿ ಬದಿಯಲ್ಲೇ ಇರುವ ಈ ಸ್ಥಳ ಗುಬ್ಬಿ ನಿಟ್ಟೂರು ಮಾರ್ಗ ಮಧ್ಯೆ ಸುತ್ತಲೂ ಶರಣರ ಚಿತ್ರಗಳ ಫ್ಲೆಕ್ಸ್‍ನಿಂದ ಸಜ್ಜಾಗಿದೆ.

      ರಾಜ್ಯದ ನಾನಾಭಾಗದಿಂದ 108 ಮಠಾಧೀಶರು ಆಗಮಿಸುವ ಈ ವೇದಿಕೆ ಸಂಪೂರ್ಣ ಶರಣರ ಸ್ಮರಣೆಯಿಂದ ಕೂಡಲಿದೆ. ಎಲ್ಲಾ ಪಕ್ಷದ ಮುಖಂಡರನ್ನೂ ಆಹ್ವಾನಿಸಿ ಗೌರವಿಸುವ ಜತೆಗೆ ದೂರದಿಂದ ಬರುವ ಭಕ್ತರಿಗೆ ಬಿಸಿ ದಾಸೋಹ ವ್ಯವಸ್ಥೆಗೆ 75 ಕೌಂಟರ್ ನಿರ್ಮಾಣವಾಗುತ್ತಿದೆ. ವಿಶಾಲ ವೇದಿಕೆಯ ಸುತ್ತಲಿನಲ್ಲಿ ಪ್ರಮುಖ ಮೂರು ದ್ವಾರಗಳನ್ನ ನಿರ್ಮಿಸಲಿದ್ದು ಮಹಾಮನೆ, ಅಕ್ಕಮಹಾದೇವಿ ಮತ್ತು ಬಸವ ದ್ವಾರ ಎಂಬ ಹೆಸರಿನಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ. ಈ ಜತೆಗೆ 200 ಸ್ಟಾಲ್‍ಗಳು ನಿರ್ಮಿಸಿ ಸಾಹಿತ್ಯ, ಧಾರ್ಮಿಕತೆ, ವಚನಗಳು ಹೀಗೆ ಹಲವು ವಿಚಾರದ ಪುಸ್ತಕ ಮಳಿಗೆಗಳು, ಲಿಂಗಪೂಜೆಯ ಎಲ್ಲಾ ಸಲಕರಣೆಗಳ ಮಾರಾಟ ನಡೆಸಲಾಗುವುದು.

      ವೇದಿಕೆಯನ್ನ ಸುತ್ತುವರಿದು ದಾಸೋಹಕ್ಕೆ ತೆರಳುವ ಭಕ್ತರಿಗೆ ದಾರಿಯುದ್ದಕ್ಕೂ ಮಳಿಗೆಗಳು, ಸಸಿ ವಿತರಣೆ ನಡೆಸಲಾಗುವುದು ಎಂದು ವಿವರಿಸಿದ ಶ್ರೀ ಚಂದ್ರಶೇಖರ ಸ್ವಾಮೀಜಿ, 5 ಸಾವಿರ ಸಸಿಗಳನ್ನ ವಿತರಿಸುವ ಪರಿಸರ ಕಾಳಜಿ ಜತೆಗೆ ಒಂದು ಸಾವಿರ ಭಕ್ತರಿಂದ ರಕ್ತದಾನ ಶಿಬಿರವನ್ನ ನಡೆಸುವುದು ಹಾಗೂ ಸಂಫೂರ್ಣ ಪ್ಲಾಸ್ಟಿಕ್ ನಿಷೇಧವನ್ನ ಪಾಲಿಸಿ ಸಾಮಾಜಿಕ ಕಳಕಳಿಯನ್ನ ವ್ಯಕ್ತಪಡಿಸುವ ಕಾರ್ಯಕ್ರಮವಾಗಿಸಲಾಗುವುದು ಎಂದರು. ವಿಶೇಷ ಕೌಂಟರ್ ತೆರೆದು ಉಚಿತ ಕಾನೂನು ಸಲಹೆ ವ್ಯವಸ್ಥೆ, ಸಂಚಾರಿ ಕ್ಲಿನಿಕ್ ಮೂಲಕ ಆರೋಗ್ಯ ತಪಾಸಣೆ ನಡೆಸುವುದು ಹಾಗೂ ಜಾಗೃತಿ ಕಾರ್ಯಕ್ರಮವನ್ನ ನಿರಂತರವಾಗಿ ನಡೆಸಿ ಧಾರ್ಮಿಕ ಕಾರ್ಯಕ್ರಮವಾಗಿಯೇ ಇರದೇ ಸಾಮಾಜಿಕ ಕಳಕಳಿ ವೇದಿಕೆಯಾಗಿ ಸೃಷ್ಟಿಸಲಾಗುವುದು ಎಂದರು.

      ಬರುವ ಭಕ್ತರಿಗೆ ಮೂಲ ಸವಲತ್ತು ಒದಗಿಸುವ ನಿಟ್ಟಿನಲ್ಲಿ ದಾಸೋಹದ ಜತೆಗೆ ಕುಡಿಯುವ ನೀರು, ಶೌಚಾಲಯವನ್ನ ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. 50 ಕ್ಕೂ ಅಧಿಕ ಶೌಚಾಲಯ, ದೊಡ್ಡ ಕ್ಯಾಂಟರ್‍ಗಳಲ್ಲಿ ನೀರು, ದಾಸೋಹಕ್ಕೆ ಸೌದೆಯನ್ನ ಈಗಾಗಲೇ ಶೇಖರಣೆ ಮಾಡಲಾಗಿದೆ. ಬರುವ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ವೇದಿಕೆಯ ಎರಡು ಬದಿಯಲ್ಲಿರುವ ವಿಶಾಲ ಪ್ರದೇಶವನ್ನ ಆಯ್ಕೆ ಮಾಡಿ ಸ್ವಚ್ಚಗೊಳಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಗಮನ ಜತೆಗೆ ನಾಡಿನ ಪ್ರಮುಖ ಗುರುಪೀಠಾಧೀಶರು ಇಲ್ಲಿಗೆ ಬರುವ ಕಾರಣ ಎಲ್ಲಾ ವ್ಯವಸ್ಥೆ ನಡೆಸಲಾಗಿದೆ. 24 ಸಮಿತಿ ರಚಿಸಿ ಎಲ್ಲಾ ಕೆಲಸವನ್ನ ಹಂಚಿಕೆ ಮೂಲಕ ನಿರ್ವಹಿಸಲಾಗಿದ್ದು, ಮೂರು ಸಾವಿರ ಸ್ವಯಂ ಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ.

 

(Visited 36 times, 1 visits today)

Related posts