ಗುಬ್ಬಿ:

      ಕೊರೊನಾ ತಡೆಗೆ ಸರ್ಕಾರವೇ ತಲೆ ಕೆಡಿಸಿಕೊಂಡು ಸರ್ಕಸ್ ಮಾಡುತ್ತಿದ್ದರೆ ಇತ್ತ ಜಿಲ್ಲಾ ಪಂಚಾಯತ್ ಉನ್ನತ ಅಧಿಕಾರಿಗಳು ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆಗೆ ತಕ್ಕನಾಗಿ ಕೊರೋನಾ ಸೋಂಕಿನ ಅಧಿಕಾರಿಯ ಸಂಪರ್ಕಿತ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ತಮ್ಮ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ.

       ಇತ್ತೀಚೆಗೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಜಿಪಂ ಯೋಜನಾ ನಿರ್ದೇಶಕ ಮಹಮದ್ ಮುಬೀನ್ ಮತ್ತು ಸಹಾಯಕ ಯೋಜನಾ ನಿರ್ದೇಶಕ ಈಶ್ವರ್ ಪ್ರಸಾದ್ ತಮ್ಮ ಕರ್ತವ್ಯ ನಿಷ್ಠೆ ತೋರಲು ಮುಂದಾಗಿ ತಾವು ಹೋಂ ಕ್ವಾರೆಂಟೈನ್‍ನಲ್ಲಿರಬೇಕಿರುವ ಬಗ್ಗೆ ಮರೆತಿದ್ದಾರಾ ಅಥವಾ ನಮ್ಮನ್ನು ಯಾರು ಕೇಳುತ್ತಾರೆ ಎಂಬ ಬೇಜವಾಬ್ದಾರಿತನವಾ ಎಂಬುದು ಸಭೆಯಲ್ಲಿನ ಅಧಿಕಾರಿಗಳ ಮಧ್ಯೆ ಗುಸುಗುಸು ಚರ್ಚೆ ನಡೆದಿದೆ.

      ತುಮಕೂರು ಜಿಲ್ಲಾ ಪಂಚಾಯಿತಿ ಡಿಎಸ್-1 ಅಧಿಕಾರಿಯೊಬ್ಬರಿಗೆ ಕೊರೋನಾ ಪಾಸಿಟೀವ್ ದೃಢವಾದ ಹಿನ್ನಲೆ ಅವರ ಸಂಪರ್ಕದಲ್ಲಿ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.

      ಈ ಪೈಕಿ ಸಭೆ ನಡೆಸಿರುವ ಜಿಪಂ ಯೋಜನಾ ನಿರ್ದೇಶಕ ಮಹಮದ್ ಮುಬೀನ್ ಮತ್ತು ಸಹಾಯಕ ಯೋಜನಾ ನಿರ್ದೇಶಕ ಈಶ್ವರ್ ಪ್ರಸಾದ್ ಕೂಡಾ ಹೋಂ ಕ್ವಾರಂಟೈನ್‍ಗೆ ಒಳಪಡಬೇಕಿದೆ. ಕೋವಿಡ್ ವರದಿ ಬರುವವರೆಗೆ ಮುನ್ನೆಚ್ಚರಿಕೆ ವಹಿಸಬೇಕಾದ ಈ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಒಂದಡೆ ಸೇರಿಸಿ ಸುಮಾರು 70 ಮಂದಿ ಕೂಡಿಟ್ಟು ಸಭೆ ನಡೆಸಿರುವುದು ಎಷ್ಟು ಸಮಂಜಸ ಹಾಗೂ ಶಿರಾ ತಾಲ್ಲೂಕಿನಲ್ಲೂ ಇದೇ ರೀತಿ ಸಭೆ ನಡೆಸಿದ್ದಾರೆ ಎಂಬುದು ಸಾರ್ವಜನಿಕ ಚರ್ಚೆಗೂ ಆಸ್ಪದವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಮುನ್ನ ಪೂರ್ವ ತಯಾರಿ ಮಾಡಿಕೊಳ್ಳಲು ತರಾತುರಿ ತಾಲ್ಲೂಕು ಮಟ್ಟದ ಸಭೆ ನಡೆಸಿದ ಯೋಜನಾ ನಿರ್ದೇಶಕರು ತಾವು ಕೊರೋನಾ ಬಗ್ಗೆ ಜಾಗೃತಿ ವಹಿಸಬೇಕು ಎಂಬ ಅರಿವು ಮರೆತಿದ್ದಾರೆ. ಸಭೆಯಲ್ಲಿದ್ದ ಹಲವು ತಾಲ್ಲೂಕು ಅಧಿಕಾರಿಗಳಿಗೆ ಈ ಮಾಹಿತಿ ತಿಳಿದಿಲ್ಲ. ಒಂದು ವೇಳೆ ಇವರ ವರದಿಗಳು ಪಾಸಿಟೀವ್ ಎಂದು ಬಂದಲ್ಲಿ ಈ ಸಭೆಗೆ ಹಾಜರಾದ ಎಲ್ಲಾ ಸರ್ಕಾರಿ ಸಿಬ್ಬಂದಿಗಳು, ಅಧಿಕಾರಿಗಳು ಕ್ವಾರಂಟೈನ್‍ಗೆ ಒಳಪಡಬೇಕಾಗುತ್ತದೆ. ಈಗಾಗಲೇ ತಾಲ್ಲೂಕಿನ ಸಂದಿಗ್ದ ಪರಿಸ್ಥಿತಿ ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಂಡಿದೆ.

      35 ಕೋವಿಡ್ ಪ್ರಕರಣದಲ್ಲಿ ಬಹುತೇಕ ಹಳ್ಳಿಗಳಲ್ಲಿ ಕಾಣಿಸಿಕೊಂಡಿವೆ. ಈ ಹೋರಾಟಕ್ಕೆ ಪಿಡಿಓಗಳು ತಲೆ ಕೆಡಿಸಿಕೊಂಡು ಓಡಾಡುತ್ತಿದ್ದಾರೆ. ಈ ಮಧ್ಯೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬೇಜವಾಬ್ದಾರಿಗೆ ಯಾರು ಹೊಣೆ, ಜತೆಗೆ ನಿತ್ಯ ಚಿತ್ರದುರ್ಗ ಜಿಲ್ಲೆಯಿಂದ ಓಡಾಡುವ ಯೋಜನಾ ನಿರ್ದೇಶಕರ ವಿರುದ್ದ ಕ್ರಮವಹಿಸುವರ್ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

(Visited 21 times, 1 visits today)