ತುಮಕೂರು:

      ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಇಲಾಖೆ ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇಲ್ಲದೇ ಇರುವುದೇ ಕಾರಣ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅಭಿಪ್ರಾಯಪಟ್ಟರು.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲು ಸಾಧ್ಯವಿದ್ದ ಸ್ಮಾರ್ಟ್ ಸಿಟಿ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ, ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ನೋಡಿದರೆ ಬೇಸರವಾಗುತ್ತದೆ ಎಂದು ತಿಳಿಸಿದರು.

      ನನ್ನ ಅಧಿಕಾರವಧಿಯಲ್ಲಿ ನಗರದಲ್ಲಿ ರಸ್ತೆ, ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು, ಕಾಮಗಾರಿ ನಡೆಯುವ ಸಮಯದಲ್ಲಿ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದೇವು, ಆದರೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತದೆ, ಎಲ್ಲಿ? ಯಾವಾಗ? ಏಕೆ? ರಸ್ತೆಯನ್ನು ಅಗೆಯುತ್ತಾರೆ ಎನ್ನುವುದು ಜನಪ್ರತಿನಿಧಿಗಳಿಗೆ ಗೊತ್ತಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

      2200 ಕೋಟಿ ಸ್ಮಾರ್ಟ್ ಸಿಟಿ ಕಾಮಗಾರಿ ಕ್ರಿಯಾ ಯೋಜನೆಯಲ್ಲಿ ಸಣ್ಣ ಸಣ್ಣ ಕಾಮಗಾರಿಗಳನ್ನು ಮಾತ್ರ ಈಗ ಮಾಡಲಾಗುತ್ತಿದ್ದು, ಈ ಕಾಮಗಾರಿಗಳಲ್ಲಿಯೇ ಇಷ್ಟೊಂದು ಲೋಪವಾದರೆ ಮುಂದಿನ ದೊಡ್ಡ ಯೋಜನೆಗಳನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದು ಅನುಮಾನವಾಗಿದೆ. ಸ್ಮಾರ್ಟ್‍ಸಿಟಿ ಏನು ಮಾಡುತ್ತಿದೆ ಎನ್ನುವುದು ಅಧಿಕಾರಿಗಳಿಗೆ ಗೊತ್ತಿಲ್ಲ, ಕಾಮಗಾರಿ ಹೇಗೆ ನಿರ್ವಹಿಸಬೇಕೆಂಬ ತಿಳುವಳಿಕೆಯೂ ಅಧಿಕಾರಿಗಳಿಲ್ಲ ಎಂದು ಹರಿಹಾಯ್ದರು.
ಸ್ಮಾರ್ಟ್‍ಸಿಟಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಸಮಾಧಿ ರೀತಿ ಮುಚ್ಚುತ್ತಿದ್ದಾರೆ. ಗುಂಡಿಗಳನ್ನು ತೆಗೆಯುತ್ತಾರೆ, ಸರಿಯಾಗಿ ಕೆಲಸ ಮಾಡುವುದಿಲ್ಲ, ಸ್ಮಾರ್ಟ್‍ಸಿಟಿ ಅಧಿಕಾರಿಗಳಿಂದ ಕೆಲಸ ಮಾಡಿಸಲು ನಗರ ಶಾಸಕರಿಗೆ ಆಗುತ್ತಿಲ್ಲ ಎಂದ ಅವರು, 5 ಬಾರಿ ಗೆದ್ದಿರುವ ಸಂಸದ ಜಿ.ಎಸ್.ಬಸವರಾಜು ಅವರು, ಶಾಸಕರಿಗೆ ಸರಿಯಾಗಿ ಮಾರ್ಗದರ್ಶನ ಮಾಡಲಿ ಎಂದು ಹೇಳಿದರು.

      2013ರಿಂದ 2019 ಜೂನ್‍ವರೆಗೆ ಇದ್ದ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆಯೇ ಹೊರತು ಹೊಸದಾಗಿ ಯಾವುದೇ ಅನುದಾನವನ್ನು ನಗರ ಶಾಸಕರು ತಂದಿಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ನಗರಕ್ಕೆ ವಿಶೇಷ ಅನುದಾನವನ್ನು ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಸಲಹೆ ನೀಡಿದರು.

      ತುಮಕೂರು ನಗರದಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ, ತುಮಕೂರು ನಗರದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು, ಕಳೆದ ಎರಡು ವರ್ಷಗಳಿಂದ ಒಂದು ಗುಂಡಿಯನ್ನು ಮುಚ್ಚಿಸುವ ಕೆಲಸವನ್ನು ಮಾಡಿಲ್ಲ, ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಪೊಲೀಸ್ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.

      ಮಾಜಿ ಸಚಿವರು ಸ್ಮಾರ್ಟ್‍ಸಿಟಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಹಿಂದೆ ಯೋಜನೆಗಳಲ್ಲಿ ಲೋಪವಾದರೆ ಶಾಸಕರನ್ನು ದೂರುತ್ತಿದ್ದ ಶಿವಣ್ಣ ಅವರು, ಈಗ ಅಧಿಕಾರಿಗಳನ್ನು ಗುರಿ ಮಾಡುತ್ತಿರುವುದು ಸರಿಯಲ್ಲ, ಎಲ್ಲವನ್ನು ಹೇಳಬೇಕಿತ್ತು ಎಂದು ತಿಳಿಸಿದರು.

(Visited 18 times, 1 visits today)