ಸ್ವಯಂ ಆತ್ಮಾವಲೋಕನದಿಂದ ದುಷ್ಚಟಗಳಿಂದ ದೂರವಿರಲು ಸಾಧ್ಯ

ತುಮಕೂರು :

      ಒಂದು ಕುಟುಂಬ ನಿರ್ವಹಿಸುವಲ್ಲಿ ಸ್ತ್ರೀ-ಪುರುಷರ ಪಾತ್ರ ಬಹಳ ಮಹತ್ವದ್ದಾಗಿದ್ದು, ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಇಬ್ಬರೂ ಸಂಸ್ಕಾರಯುತ ಜೀವನ ಸಾಗಿಸಿ, ಆತ್ಮಾವಲೋಕನದ ಮೂಲಕ ತಮ್ಮ ದುಷ್ಚಟಗಳಿಂದ ದೂರವಿರಲು ಸಾಧ್ಯವಿದೆ ಎಂದು ಮಹಾಪೌರರಾದ ಫರಿದಾ ಬೇಗಂ ತಿಳಿಸಿದರು.

       ಅವರು ಇಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಜಿಲ್ಲಾಡಳಿತ, ನೆಹರು ಯುವಕೇಂದ್ರ, ತುಮಕೂರು ಇವರ ಸಹಯೋಗದಲ್ಲಿ ತುಮಕೂರು ಬಾಲಭವನ ಸಭಾಂಗಣದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

      ವಿಭಿನ್ನ ಸಂಸ್ಕøತಿ, ಸಂಪ್ರದಾಯಗಳ ದೇಶವಾಗಿರುವ ಭಾರತದಲ್ಲಿ ಏಕಸ್ವಾಮ್ಯತೆಯಿಂದ ಬದುಕಿರುವ ನಾವು ಪಾಶ್ಚತ್ಯ ದೇಶದ ಅನುಕರಣೆಯಿಂದ ಧೂಮಪಾನ, ಮದ್ಯಪಾನದಂತಹ ದುಷ್ಚಟಗಳ ದಾಸರಾಗಿದ್ದೇವೆ. ಸಂತೋಷ ಮತ್ತು ದುಃಖಗಳ ಸಂದರ್ಭಗಳಲ್ಲಿಯೂ ಸಹ ಮದ್ಯಪಾನ ಮಾಡಿ ಸಂಭ್ರಮಿಸುವುದು ಪಾಶ್ಚತ್ಯ ದೇಶದ ಸಂ‍ಸ್ಕೃತಿಯಾಗಿದೆ. ಈ ಸಂ‍ಸ್ಕೃತಿ ನಮ್ಮದಲ್ಲ. ಇದನ್ನು ಯುವ ಶಕ್ತಿ ಅರಿತು ನೈತಿಕ ಬದುಕಿನ ದಾರಿ ಕಂಡುಕೊಳ್ಳಬೇಕೆಂದು ಅವರು ಹೇಳಿದರು.

      ಮದ್ಯಪಾನ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ ಕ್ರಾಂತಿಕಾರಿ ಬದಲಾವಣೆ ಮೂಲಕ ಶುದ್ಧ ಜೀವನದ ಹಾದಿಯನ್ನು ನಾವೆಲ್ಲರೂ ರೂಡಿಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

      ಸಮಾರಂಭದ ಸಾನಿಧ್ಯ ವಹಿಸಿದ್ದ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾಗಿರುವ ವೀರೇಶಾನಂದ ಸರಸ್ವತೀ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಜೀವನದ ಏಳ್ಗೆಯ ಶಿಲ್ಪಿಗಳು ನಾವೇ ಆಗಿರುವುದರಿಂದ ನಮ್ಮ ಶರೀರ, ಮನಸ್ಸು ಮತ್ತು ಭೌದ್ಧಿಕ ಆರೋಗ್ಯಕ್ಕೆ ನಾವೇ ರೂವಾರಿಗಳಾಗಿದ್ದೇವೆ. ಸರಿ ತಪ್ಪುಗಳ ವಿವೇಚನೆಯಿಂದ ಜಾಗೃತ ಮನಸ್ಸಿನಿಂದ ಬದುಕಿದಾಗ ಉನ್ನತ ಸಮಾಜವನ್ನು ನಿರ್ಮಿಸಲು ಸಾಧ್ಯ. ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತಾಗಬೇಕು. ಬಲಹೀನ ದೌರ್ಬಲ್ಯಗಳಿಂದ ಕೂಡಿದ ವ್ಯಕ್ತಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಪವಿತ್ರ ಜೀವನ ನೆಮ್ಮದಿಯ ಬದುಕಿಗೆ ಬಹಳ ಮುಖ್ಯವಾಗಿದ್ದು, ಧೂಮಪಾನ, ಮದ್ಯಪಾನ ಹಾಗೂ ಡ್ರಗ್ಸ್‍ನಂತಹ ದುಷ್ಚಟಗಳಿಂದ ದೂರವಿದ್ದು, ಯುವಶಕ್ತಿ ನೈತಿಕತೆಯ ಬದುಕನ್ನು ಆಯ್ದುಕೊಳ್ಳಬೇಕೆಂದು ಸಲಹೆ ಮಾಡಿದರು.

      ದುಷ್ಚಟಗಳ ಬಗ್ಗೆ ವಿವರವಾಗಿ ಮನಮುಟ್ಟುವಂತೆ ಉದಾಹರಣೆಗಳ ಸಮೇತ ವಿವರಣೆ ನೀಡಿದರು. ಅವರು ಆರೋಗ್ಯಯುತ ಬದುಕಿಗೆ ಯೋಗ, ಧ್ಯಾನ ಮತ್ತು ನಿರ್ಮಲವಾದ ಪರಿಸರ ಬಹಳಮುಖ್ಯವಾದುದು. ಎಲ್ಲಾ ಕುಟುಂಬಗಳಲ್ಲಿ ಪ್ರೀತಿಯ ಮಾತುಗಳಿಂದ ತಪ್ಪು ಮಾಡಿದವರಿಗೆ ಅರಿವು ಮೂಡಿಸಿದಾಗ ಒಳ್ಳೆಯವರಾಗಲು ಸಾಧ್ಯವಿದೆ. ಇದನ್ನು ಸ್ವಾಮಿ ವಿವೇಕಾನಂದರು ಲವ್ ಇಸ್ ಲಾ ಎಂಬ ನಾಣ್ನುಡಿಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ ಎಂದರು.

      ದುಡಿದಿದ್ದನ್ನು ಕುಡಿತಕ್ಕೆ ಹಾಕಿ ದೇಹ, ಮನಸ್ಸು ಮತ್ತು ಮನೆಯನ್ನು ಹಾಳು ಮಾಡಿಕೊಂಡು ಬೀದಿಪಾಲಾಗಿರುವ ಎಷ್ಟೋ ಕುಟುಂಬಗಳನ್ನು ದಿನಂಪ್ರತಿ ನಾವು ಪ್ರಾಯೋಗಿಕವಾಗಿ ನೋಡುತ್ತಿದ್ದೇವೆ. ಇದನ್ನು ತಿಳಿದು ದುಷ್ಚಟಗಳಿಗೆ ಬಲಿಯಾಗುತ್ತೇವೆ ಎನ್ನುವುದು ಮೂರ್ಖತನದ ಪರಮಾವಧಿಯಾದೀತು. ಇದನ್ನು ಅರಿತು ಪ್ರತಿಯೊಬ್ಬರೂ ಅವರವರ ಜೀವನವನ್ನು ಸುಂದರವಾಗಿಸಿಕೊಳ್ಳುವುದು ಅಥವಾ ವಿಕೃತಗೊಳಿಸಿಕೊಳ್ಳುವುದು ಅವರ ಕೈಯಲ್ಲಿದೆ ಎಂದರು.

      ಸಮಾರಂಭವನ್ನುದ್ದೇಶಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್ ಮಾತನಾಡಿದರು. ಅಚರ್ಡ್ ಸಂಸ್ಥೆಯ ಡಾ: ಹೆಚ್.ಜಿ. ಸದಾಶಿವಯ್ಯನವರು ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿವರವಾದ ಉಪನ್ಯಾಸ ನೀಡಿದರು.

    ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿಗಳಾದ ರೋಹಿಣಿ ಕೆ. ಸರ್ವರನ್ನೂ ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಾರ್ಯಕ್ರಮದ ಉದ್ದೇಶ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣದ ಬಗ್ಗೆ ಮಾತನಾಡಿದರು.

      ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಯಿಂದ ಜನಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರದ ಅಧಿಕಾರಿ/ ಸಿಬ್ಬಂದಿಯವರು ಉಪಸ್ಥಿತರಿದ್ದರು.

(Visited 7 times, 1 visits today)

Related posts