ತುಮಕೂರು :

      ಸಿದ್ದಗಂಗಾ ಶ್ರೀಗಳಾದ ಡಾ: ಶಿವಕುಮಾರ ಸ್ವಾಮೀಜಿ ಅವರು ಶೀಘ್ರ ಗುಣಮುಖರಾಗಲಿ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರು ಆಶಿಸಿದರು.

       ನಗರದ ಸಿದ್ದಗಂಗಾ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶಿವಾನಂದ ಪಾಟೀಲ್ ಅವರು ನಡೆದಾಡುವ ದೇವರು, ಸಿದ್ದಗಂಗೆಯ ಸಿದ್ದಿ ಪುರುಷ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದರು.

      ಇಲ್ಲಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ಮುನ್ನ ಸಿದ್ದಗಂಗಾ ಆಸ್ಪತ್ರೆಗೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ್ ಅವರು ಶ್ರೀಗಳ ದರ್ಶನಾಶೀರ್ವಾದ ಪಡೆದು ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಆಸ್ಪತ್ರೆಯ ವೈದ್ಯರು ಸಹ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

      ಶ್ರೀಗಳು ಅತಿ ಶೀಘ್ರವಾಗಿ ಗುಣಮುಖರಾಗಲಿದ್ದಾರೆ. ಸಿದ್ದಗಂಗಾ ಆಸ್ಪತ್ರೆಯ ವೈದ್ಯರ ತ್ಯಾಗ ಮನೋಭಾವ ಮೆಚ್ಚುವಂತದ್ದು, ತಾಯಿ ಮಗುವನ್ನು ಕಾಪಾಡುವಂತೆ ಶ್ರೀಗಳಿಗೆ ಚಿಕಿತ್ಸೆ ನೀಡುವ ಪ್ರಯತ್ನವನ್ನು ಈ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ ಎಂದು ಅವರು ಶ್ಲಾಘಿಸಿದರು.  ಶ್ರೀಗಳ ಕಾಯಕವನ್ನು ಸಮಾಜ ಎಂದೂ ಮರೆಯಲು ಸಾಧ್ಯವಿಲ್ಲ. ಪ್ರತಿನಿತ್ಯ 10 ಸಾವಿರ ಮಕ್ಕಳಿಗೆ ಜ್ಞಾನ ದಾಸೋಹ, ಅನ್ನ ದಾಸೋಹ ನೀಡುವ ಕಾಯಕವನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

      ಮುಖ್ಯಮಂತ್ರಿಗಳು ನಾಳೆ ಡಾ. ಮಂಜುನಾಥ್ ನೇತೃತ್ವದಲ್ಲಿ ವೈದ್ಯರ ತಂಡವನ್ನು ಕಳುಹಿಸುತ್ತಿದ್ದು, ಈ ವೈದ್ಯರ ತಂಡ ನೀಡುವ ಸಲಹೆ, ಮಾರ್ಗದರ್ಶನದ ಮೇರೆಗೆ ಶ್ರೀಗಳಿಗೆ ಇನ್ನು ಹೆಚ್ಚಿನ ಚಿಕಿತ್ಸೆಯನ್ನು ಆಸ್ಪತ್ರೆಯ ವೈದ್ಯರು ನೀಡಲಿದ್ದಾರೆ ಎಂದರು.  ಶ್ರೀಗಳು ಶೀಘ್ರ ಗುಣಮುಖರಾಗಲಿ, ಅವರ ಆಯಸ್ಸನ್ನು ಇನ್ನು ಹೆಚ್ಚಿಸಲಿ ಎಂದು ಭದವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.

      ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಪಂಕಜ್‌ಕುಮಾರ್ ಪಾಂಡೆ, ಡಿಹೆಚ್ಓ ಡಾ. ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸೆಕ ಡಾ. ವೀರಭದ್ರಯ್ಯ, ಡಾ. ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

 

(Visited 16 times, 1 visits today)