ತುಮಕೂರು:

      ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದೊಡ್ಡಮಲ್ಲಿಗೆರೆ ಗ್ರಾಮದ ಹೊರವಲದ ಪೊದೆಯೊಂದರಲ್ಲಿ ಹಾಲುಗಲ್ಲದ ಹಸುಗೂಸೊಂದು ಪತ್ತೆಯಾಗಿದೆ. ಅದೇ ಗ್ರಾಮದ ಶಿವಮ್ಮ ಎಂಬ ಮಹಿಳೆ ಎಂದಿನಂತೆ ತನ್ನ ಹೊಲದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ತನ್ನ ಹೊಲದ ಪೊದೆಯೊಂದರಲ್ಲಿ ಹಸುಳೆಯ ಅರ್ಥನಾದ ಕೇಳಿಬರುತ್ತಿತ್ತು. ಪುಟ್ಟ ಶಿಶುವಿನ ಅಳುವನ್ನು ಕಂಡು ಸಹಿಸದ ಶಿವಮ್ಮ ತನ್ನ ಹೊಲವನ್ನೆಲ್ಲಾ ಹುಡುಕಿದ್ದಾಳೆ. ಹೊಲದ ಮೂಲೆಯಲ್ಲಿದ್ದ ಪೊದೆಯೊಂದರಲ್ಲಿ ಹಸುಳೆಯ ಅಳುವನ್ನು ಕೇಳಿ ಕಕ್ಕಾಬಿಕ್ಕಿಯಾದರು.

      ಲೌಕಿಕ ಪ್ರಪಂಚದ ಅರಿವಿರದ ಹಸುಗೂಸು ಗೋಣಿಚೀಲದ ಮಧ್ಯದಲ್ಲಿ ಕಿರುಚಾಡುತ್ತಿತ್ತು. ಹೆತ್ತ ತಾಯಿಯ ಮುಖವನ್ನು ಕಾಣದೆ ಜನನದ ದಿನವೇ ತಬ್ಬಲಿಯಾಗಿ ಅಮ್ಮನ ಮಮಕಾರವಿಲ್ಲದೇ ಹಸಿವಿನಿಂದ ಕಂಗಾಲಾಗಿ ಅಳುತ್ತಿದ್ದ ಮಗುವನ್ನು ಕಂಡು ಕಣ್ಣೀರಿಟ್ಟ ಆ ಹೊಲದೊಡತಿ ಶಿವಮ್ಮ ಆ ಮಗುವನ್ನು ತಂದು ಸಂರಕ್ಷಿಸಿ ಆರೈಕೆ ಮಾಡಿದರು. ಈ ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಪುಟ್ಟ ಕಂದಮ್ಮನನ್ನು ವಶಕ್ಕೆ ಪಡೆದು ಮಾಯಸಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

       ಶಿಶುವಿನ ಹೊಕ್ಕಳಬಳ್ಳಿಯನ್ನು ತೆಗೆಯದೇ ಹಾಗೇ ಇದ್ದುದನ್ನು ಕಂಡು ಮಗು ಜನನವಾಗಿ 2 ದಿನ ಕಳೆದಿರಬಹುದೆಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಗುವಿನ ಹೊಕ್ಕಳಿಗೆ ಹಾಕಲಾಗಿರುವ ಪ್ಲಾಸ್ಟಿಕ್ ಕ್ಲಿಪ್‍ನ್ನು ಗಮನಿಸಿದರೆ, ಸಹಜ ಹೆರಿಗೆಯಾದ ನಂತರ ಬಳಸುವ ಕ್ಲಿಪ್‍ನ್ನು ಈ ಹೊಕ್ಕಳ ಬಳ್ಳಿಗೆ ಬಳಸಲಾಗಿದ್ದು ಇದನ್ನೂ ತೆಗೆದಿರುವುದಿಲ್ಲ. ಅಲ್ಲದೇ ಕ್ಲಿಪ್ ತೆಗೆಯದಿರುವುದನ್ನು ಗಮನಿಸಿದರೆ, ಇಲ್ಲಿಗೆ ಹತ್ತಿರವಿರುವ ಯಾವುದೋ ಆಸ್ಪತ್ರೆಯಲ್ಲಿ ಶಿಶು ಜನಿಸಿರಬಹುದೆಂದು ಸಂಶಯಿಸಲಾಗುತ್ತಿದೆ. ಇದರ ತನಿಖೆಯು ಅಗತ್ಯವಾಗಿ ನಡೆಯಬೇಕಿದೆ.

      ಮಗುವನ್ನು ಪೊದೆಯಿಂದ ತಂದು ರಕ್ಷಿಸಿದ್ದ ಶಿವಮ್ಮ ದಂಪತಿಗಳಿಗೆ ಸಂತಾನಭಾಗ್ಯವಿಲ್ಲದ ಕಾರಣ ಈ ಮಗುವಿನ ಪಾಲನೆ-ಪೋಷಣೆಯನ್ನು ನಾವೇ ಮಾಡುತ್ತೇವೆ ನಮಗೇ ದತ್ತು ಕೊಡಿ ಎಂದು ಶಿವಮ್ಮ ಅಂಗಲಾಚಿದ್ದು, ಮಕ್ಕಳ ರಕ್ಷಾಣಾಧಿಕಾರಿಗಳು ಕಾನೂನಿನ ತೊಡಕಿರುವುದನ್ನು ಸ್ಪಷ್ಟೀಕರಿಸಿ ಶಿವಮ್ಮರಿಗೆ ಸಾಂತ್ವನ ಹೇಳಿದರೆನ್ನಲಾಗುತ್ತಿದೆ. ಮಗುವಿನ ಜನನ, ಜನನದ ಹಿನ್ನೆಲೆ, ಶಿಶುವಿನ ಮಾತಾ-ಪಿತೃಗಳು ಯಾರು..? ಯಾವ ಆಸ್ಪತ್ರೆಯಲ್ಲಿ ಜನನವಾಯಿತು..? ಯಾವ ಕಾರಣಕ್ಕಾಗಿ ಮಗುವನ್ನು ಪೊದೆಯಲ್ಲಿ ತಂದು ಬಿಸಾಕಿದರು..? ಹೆಣ್ಣು ಮಗುವೆಂಬುದೇ ಇದಕ್ಕೆ ಕಾರಣವೇ..? ಎನ್ನುವಂತಹ ವಿಚಾರಗಳು ಪೊಲೀಸ್ ತನಿಖೆಯಿಂದ ಹೊರ ಬರುವ ಸಾಧ್ಯತೆಗಳಿವೆ.

(Visited 39 times, 1 visits today)