ತುರುವೇಕೆರೆ:

     ಹೇಮಾವತಿಗೆ ನಾಲೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗೆ ಅಕ್ಕಪಕ್ಕ ತಡೆಗೋಡೆ ಇಲ್ಲದಿರುವುರಿಂದ ಇಲ್ಲಿ ಓಡಾಡುವ ಪ್ರಾಣಕ್ಕೆ ಕುಂದುಂಡಾಗಲಿದೆ ಎಂದು ಕರ್ನಾಟಕ ವಿಜಯಸೇನೆಯ ತಾಲ್ಲೂಕು ಪದಾಧಿಕಾರಿಗಳು ಸ್ಥಳದಲ್ಲಿ ಹೇಮಾವತಿ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.

      ತಾಲ್ಲೂಕಿನ ಅರೆಮಲ್ಲೇನಹಳ್ಳಿ ಮುಖ್ಯರಸ್ತೆಯಲ್ಲಿ ಹೆಡಗೀಹಳ್ಳಿ ಬಳಿ ಮುಖ್ಯರಸ್ತೆಗೆ ಅಡ್ಡಲಾಗಿ ಹಾದುಹೋಗಿರುವ ಎನ್‍ಬಿಸಿ ಹೇಮಾವತಿ ನಾಲಾವಲಯದಲ್ಲಿ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದು ತಡೆಗೋಡೆ ಹಾಕದೆ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಯಾವುದೇ ಸಂದರ್ಭದಲ್ಲಿಯಾದರೂ ಅಪಘಾತವಾಗುವ ಸಂಭವವಿದೆ. ನಾಲೆ ತುಂಬಾ ಆಳವಾಗಿದ್ದು ಯಾವುದೇ ಸಂದರ್ಭದಲ್ಲಿ ಅಪಾಯದ ಸಂಭವವಿದ್ದು ಕೂಡಲೇ ತಡೆಗೋಡೆ ನಿರ್ಮಾಣಮಾಡಿ ತದನಂತರ ಸಾರ್ವಜನಿಕರಿಗೆ ಸೇತುವೆ ಮೇಲೆ ಓಡಾಡಲು ಅನುವು ಮಾಡಿಕೊಡಲಿ. ಅದು ಬಿಟ್ಟು ತಡೆಗೋಡೆ ನಿರ್ಮಾಣ ಮಾಡದೆ ಓಡಾಡಲು ರಸ್ತೆ ತೆರವು ಮಾಡಿರುವುದು ಸರಿಯಲ್ಲ ಎಂದು ಇಂಜಿನಿಯರ್‍ನ್ನು ತರಾಟೆಗೆ ತೆಗೆದುಕೊಂಡರು.

      ಕರ್ನಾಟಕ ವಿಜಯಸೇನೆಯ ತಾಲ್ಲೂಕು ಅಧ್ಯಕ್ಷ ಗಿರೀಶ್ ಮಾತನಾಡಿ ಹೇಮಾವತಿ ನಾಲೆಗೆ ಅಡ್ಡಲಾಗಿ 29.5 ಮೀ. ಉದ್ದ ಹಾಗೂ 9 ಮೀಟರ್ ಅಗಲ, 3.75 ಮೀ.ಎತ್ತರದ ಕಾಮಗಾರಿಯನ್ನು ಗುತ್ತಿಗೆದಾರ ಅಣತಿ ವೆಂಕಟೇಶ್ ಅವರಿಗೆ ಸುಮಾರು 60 ಲಕ್ಷ ರೂ.ಗೆ ಟೆಂಡರ್ ಆಗಿದ್ದು ಈಗಾಗಲೇ 30 ಲಕ್ಷ ಬಿಲ್ ಪಾಸಾಗಿದೆ. ಆದಾಗ್ಯೂ ಇವರು ಮಾಡಿರುವ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಕೂಡಲೇ ಕಾಮಗಾರಿ ಪೂರ್ತಿಗೊಳಿಸಿ ನಂತರ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಡಬೇಕು. ತಡೆಗೋಡೆ ನಿರ್ಮಿಸದೆ ಜನ ಓಡಾಡಲು ತೆರವು ಮಾಡಿಕೊಟ್ಟಿರುವುದರಿಂದ ನಾಲೆ 90 ಅಡಿ ಆಳವಿದ್ದು ಯಾವುದೇ ಕ್ಷಣದಲ್ಲಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಕೂಡಲೇ ರಸ್ತೆ ಸಂಚಾರ ತಡೆದು ತಡೆಗೋಡೆ ನಿರ್ಮಿಸಿ ಜನಸಂಚಾರಕ್ಕೆ ಅನುವು ಮಾಡಿಕೊಡಲಿ. ಕಾಮಗಾರಿ ಪೂರ್ಣಗೊಳ್ಳುವವರೆವಿಗೂ ಬಾಕಿ 30 ಲಕ್ಷ ಗುತ್ತಿಗೆದಾರರಿಗೆ ನೀಡಬಾರದೆಂದು ಹೇಮಾವತಿ ಎಇಇ ಕೆ.ಎಮ್.ಬಿಂದಿ ಅವರನ್ನು ಒತ್ತಾಯಿಸಿದರು.

      ಎಇಇ ಕೆ.ಎಮ್.ಬಿಂದಿ ಮಾತನಾಡಿ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ. ಇಂದೇ ರಸ್ತೆ ಬಂದ್ ಮಾಡಿಸಿ ಗುತ್ತಿಗೆದಾರರನ್ನು ಕರೆಸಿ ಕೂಡಲೆ ತಡೆಗೋಡೆ ನಿರ್ಮಿಸಿಕೊಡುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

      ಈ ಸಂದರ್ಭದಲ್ಲಿ ಕರ್ನಾಟಕ ವಿಜಯಸೇನೆಯ ತಾಲ್ಲೂಕು ಮಹಿಳಾ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಸಂಘಟನಾ ಕಾರ್ಯದರ್ಶಿ ಬಡಗರಹಳ್ಳಿ ರಂಗಸ್ವಾಮಿ, ಪದಾಧಿಕಾರಿಗಳಾದ ರಮೇಶ್, ಶಿವರಾಜು, ಕುಮಾರ್, ಪ್ರಕಾಶ್ ಸೇರಿದಂತೆ ಆಜು-ಬಾಜು ರೈತರು ಪಾಲ್ಗೊಂಡಿದ್ದರು.

(Visited 37 times, 1 visits today)